ಪೆಟ್ರೋಲ್, ಡಿಸೇಲ್ ದರ ಏರಿಕೆಯಾದಾಗ ಅನಿವಾರ್ಯವಾಗಿ ಬಸ್, ಹಾಲು ಇತರ ದರಗಳು ಏರಿಕೆಯಾಗುತ್ತವೆ. ಯುಪಿಎ ಸರ್ಕಾರದಲ್ಲಿ ಇಂಧನ ದರ ಎಷ್ಟಿತ್ತು? ಈಗ ಎಷ್ಟಿದೆ? ಅದಕ್ಕಾಗಿ ಅನಿವಾರ್ಯವಾಗಿ ಬಸ್ ದರ ಏರಿಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಕನಕಗಿರಿ: ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ ಬಿಜೆಪಿಯವರಿಗೆ ಕಾಂಗ್ರೆಸ್ ವಿರುದ್ದ ಹೋರಾಡುವ, ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಾನಾ ಕಾಮಗಾರಿಗಳ ವೀಕ್ಷಣೆ ಬಳಿಕ ಈಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ವೋಟ್ ಚೋರಿ ನಡೆದಿದೆ. ಎಸ್ಐಆರ್ನಲ್ಲೂ ಲೋಪಗಳಿವೆ. ದಲಿತ, ಮುಸ್ಲಿಮರನ್ನು ಮತಪಟ್ಟಿಯಿಂದ ತೆಗೆಯುವ ಹುನ್ನಾರ ನಡೆದಿದೆ. ರಾಜ್ಯದಲ್ಲಿಯೂ ನಡೆದಿತ್ತು. ಕೇಂದ್ರ ಬಿಜೆಪಿಯಿಂದಲೇ ಫಾರಂ ೭ ಬಂದಿದ್ದು, ಫೋನ್ ನಂಬರ್ ಸಹ ಅದರಲ್ಲಿದೆ. ಮತಗಳನ್ನು ತೆಗೆಯುವ ಹುನ್ನಾರ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಯಾವುದೇ ಕಾರಣಕ್ಕೂ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವುದಕ್ಕೆ ಬಿಡುವುದಿಲ್ಲ ಎಂದರು.ರಾಜ್ಯದಲ್ಲಿ ಎಸ್ಐಆರ್ ಸರಿಯಾಗಿದೆ ಎನ್ನುವ ಸಚಿವ ಸತೀಶ ಜಾರಕಿಹೊಳಿಯವರ ಹೇಳಿಕೆ ವಿಚಾರದ ಕುರಿತು ಅವರನ್ನು ಕೇಳಿದಾಗ, ಮಾಧ್ಯಮದವರು ಬೇರೆ ಅರ್ಥದಲ್ಲಿ ಬರೆದಿದ್ದಾರೆ ಎಂದು ತಿಳಿಸಿದ್ದಾರೆ ಎಂದರು. ಪೆಟ್ರೋಲ್, ಡಿಸೇಲ್ ದರ ಏರಿಕೆಯಾದಾಗ ಅನಿವಾರ್ಯವಾಗಿ ಬಸ್, ಹಾಲು ಇತರ ದರಗಳು ಏರಿಕೆಯಾಗುತ್ತವೆ. ಯುಪಿಎ ಸರ್ಕಾರದಲ್ಲಿ ಇಂಧನ ದರ ಎಷ್ಟಿತ್ತು? ಈಗ ಎಷ್ಟಿದೆ? ಅದಕ್ಕಾಗಿ ಅನಿವಾರ್ಯವಾಗಿ ಬಸ್ ದರ ಏರಿಕೆಯಾಗಿದೆ ಎಂದು ಬೆಲೆ ಹೆಚ್ಚಳವನ್ನು ಸಮರ್ಥಿಸಿಕೊಂಡರು.
ಪಟ್ಟಣದ ಅಭಿವೃದ್ಧಿಗೆ ₹೫.೬೦ ಕೋಟಿ ಮಂಜೂರಾಗಿದೆ. ಮುಂದಿನ ತಿಂಗಳು ಪರಿವೀಕ್ಷಣಾ ಮಂದಿರ, ಸಾಂಸ್ಕೃತಿಕ ಭವನ ಉದ್ಘಾಟಿಸಲಾಗುವುದು. ಫೆಬ್ರವರಿಯಲ್ಲಿ ಪ್ರಜಾಸೌಧ ಲೋಕಾರ್ಪಣೆ ಮಾಡಲಾಗುವುದು. ವರ್ಷದೊಳಗೆ ನೂರು ಹಾಸಿಗೆ ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.ಉಂಡಾಡಿ ಗುಂಡ: ಪಟ್ಟಣ ಅಭಿವೃದ್ಧಿಯಾಗಿಲ್ಲ. ಸಚಿವ ಶಿವರಾಜ ತಂಗಡಗಿ ಬರೀ ಭರವಸೆ ನೀಡಿ ಹೋಗುತ್ತಾರೆಂದು ನನ್ನ ವಿರುದ್ಧ ಮಾತನಾಡುವ ಬಿಜೆಪಿಗರು, ಐದು ವರ್ಷದಲ್ಲಿ ಮಾಜಿ ಶಾಸಕ ಬಸವರಾಜ ದಢೇಸುಗೂರು ಏನು ಅಭಿವೃದ್ಧಿ ಮಾಡಿದ್ದಾರೆ ಎಂಬ ಪಟ್ಟಿ ತರಲಿ. ಅವರು ಏನೂ ಮಾಡಿಲ್ಲ, ಬರೀ ಉಂಡಾಡಿ ಗುಂಡನ ರೀತಿಯಲ್ಲಿ ಅವಧಿ ಮುಗಿಸಿದ್ದಾರೆ ಎಂದು ಲೇವಡಿ ಮಾಡಿದರು.
ಇಂದಿರಾ ಕ್ಯಾಂಟೀನ್ ಸರಿಪಡಿಸಲು ಕ್ರಮ: ಪಟ್ಟಣದ ಬಸ್ ನಿಲ್ದಾಣದಲ್ಲಿನ ಇಂದಿರಾ ಕ್ಯಾಂಟೀನ್ ನಿರ್ವಹಣೆ ಸರಿಯಾಗಿಲ್ಲ ಎಂದು ಮಾಹಿತಿ ಬಂದಿದೆ. ತಹಸೀಲ್ದಾರ್ ಹಾಗೂ ಮುಖ್ಯಾಧಿಕಾರಿಗಳನ್ನು ಪರಿಶೀಲನೆಗೆ ಕಳುಹಿಸಿ ಸರಿಪಡಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ನಗರ ಘಟಕದ ಅಧ್ಯಕ್ಷ ರವಿ ಪಾಟೀಲ್, ಪಪಂ ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯರಾದ ರಾಜಾಸಾಬ ನಂದಾಪುರ, ಶರಣೇಗೌಡ, ಪ್ರಮುಖರಾದ ವೀರೇಶ ಸಮಗಂಡಿ, ಸಿದ್ದಪ್ಪ ನಿರ್ಲೂಟಿ, ನಾಗಪ್ಪ ಹುಗ್ಗಿ, ಹನುಮೇಶ ನಾಯಕ ಇತರರಿದ್ದರು.