ವಿವಿ ಸಾಗರದ ಕಣಿವೆ ಮಾರಮ್ಮ ದೇವಿ ರಥೋತ್ಸವ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ಜರುಗಿತು. ಪೋಟೋ: 2 ಸಚಿವ ಡಿ.ಸುಧಾಕರ್ ಗುಣಮುಖರಾಗಲಿ ಎಂದು ಭಕ್ತರೊಬ್ಬರು ಬಾಳೆಹಣ್ಣಿನ ಮೇಲೆ ಬರೆದು ಹರಕೆ ತೀರಿಸಿದರು

ಸಚಿವ ಡಿ.ಸುಧಾಕರ್ ಆರೋಗ್ಯ ಸುಧಾರಣೆಗಾಗಿ ಭಕ್ತರಿಂದ ಬಾಳೆಹಣ್ಣಿನ ಹರಕೆಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಐತಿಹಾಸಿಕ ವಾಣಿವಿಲಾಸ ಸಾಗರ ಜಲಾಶಯದ ಮುಂಭಾಗದಲ್ಲಿರುವ ಕಣಿವೆ ಮಾರಮ್ಮನ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಉತ್ಸವಮೂರ್ತಿಯನ್ನು ಅಲಂಕೃತ ರಥದಲ್ಲಿ ಕುಳ್ಳಿರಿಸಿ ಎಳೆಯುವ ಮೂಲಕ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ರಥೋತ್ಸವದ ಪ್ರಯುಕ್ತ ವಿಶೇಷ ಪೂಜೆಗಳು, ಹರಕೆ ಸಮರ್ಪಣೆಗಳು ನಡೆದವು. ಜಲಾಶಯದಲ್ಲಿ ಸಮೃದ್ಧ ನೀರು ಇರುವುದರ ಜೊತೆಗೆ ಈ ಬಾರಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುತ್ತಿರುವುದರಿಂದ ಜಾತ್ರೆಗೆ ಒಂದು ವಿಶೇಷ ಕಳೆ ಬಂದಿತ್ತು.

ಚಿಕ್ಕಚಿಕ್ಕ ಮಕ್ಕಳು ಬೆಂಡು-ಬತ್ತಾಸು ಚಪ್ಪರಿಸುತ್ತ ಜಗತ್ತನ್ನೇ ಮರೆತವರಂತೆ ಜಾತ್ರೆ ನಡೆಯುತ್ತಿದ್ದ ಜಾಗದಲ್ಲಿ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನೂರಾರು ವರ್ಷದ ಇತಿಹಾಸ ಹೊಂದಿರುವ ಕಣಿವೆ ಮಾರಮ್ಮ ದೇವಿ ವಾಣಿ ವಿಲಾಸ ಜಲಾಶಯದ ರಕ್ಷಕಿ ಎಂಬ ನಂಬಿಕೆ ಇದೆ.

ಎರಡು ಗುಡ್ಡಗಳ ನಡುವಿನ ಪ್ರದೇಶದಲ್ಲಿ ವಾಣಿವಿಲಾಸ ಅಣೆಕಟ್ಟೆ ನಿರ್ಮಿಸಲಾಗಿದ್ದು ಎರಡು ಗುಡ್ಡಗಳ ಕಣಿವೆಯಂತಹ ಪ್ರದೇಶದಲ್ಲಿ ಈ ದೇಗುಲ ಇರುವ ಕಾರಣ ಕಣಿವೆ ಮಾರಮ್ಮ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತಿದೆ.

ಸ್ಥಳೀಯರಲ್ಲದೆ ತಮಿಳು ನಾಡು, ಆಂಧ್ರಪ್ರದೇಶದಿಂದ ಭಕ್ತರು,ರೈತರು ಈ ಜಾತ್ರೆಗೆ ಬಂದು ಹರಕೆ ಸಲ್ಲಿಸುವುದು ಪ್ರತಿವರ್ಷ ನಡೆದುಕೊಂಡು ಬಂದ ವಾಡಿಕೆಯಾಗಿದ್ದು ಜಲಾಶಯದ ರಕ್ಷಕಿ ಕಣಿವೆ ಮಾರಮ್ಮನ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನವಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರವರು ಗುಣಮುಖರಾಗಿ ಮತ್ತೆ ಜನಸೇವೆಗೆ ಮರಳಲಿ ಎಂದು ಭಕ್ತರೊಬ್ಬರು ಹರಕೆಯ ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ತೂರಿ ತಮ್ಮ ಹರಕೆ ತೀರಿಸಿದ್ದು ವಿಶೇಷವಾಗಿತ್ತು.