ಹಿರಿಯೂರಿಗೆ ಕೊನೆಗೂ ಕೂಡಿ ಬಂದ ಬಸ್ ಡಿಪೋ ಭಾಗ್ಯ

| Published : Aug 27 2025, 01:00 AM IST

ಸಾರಾಂಶ

ಆ.30ರಂದು ಉದ್ಘಾಟನೆ ಕಾಣಲಿರುವ ನಗರದ ಕೆಎಸ್‌ಆರ್‌ಟಿಸಿ ಬಸ್ ಡಿಪೋ

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಜನರ ದಶಕಗಳ ಕನಸೊಂದು ಈಡೇರಿದಂತಾಗಿದೆ. ಆ.30 ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಉದ್ಘಾಟನೆ ಮಾಡುತ್ತಿದ್ದು ತಾಲೂಕಿನ ಸಾರಿಗೆ ವ್ಯವಸ್ಥೆಗೆ ಶಕ್ತಿ ತುಂಬಿದಂತಾಗಲಿದೆ.

2022ರ ಡಿಸೆಂಬರ್‌ನಲ್ಲಿ ನಗರದ ಹುಳಿಯಾರು ರಸ್ತೆಯ ತಾಲೂಕು ಕ್ರೀಡಾಂಗಣದ ಸಮೀಪ 3 ಎಕರೆ ವಿಸ್ತೀರ್ಣದಲ್ಲಿ 6 ಕೋಟಿ ರು. ಅನುದಾನದೊಂದಿಗೆ ಶಂಕುಸ್ಥಾಪನೆ ನೆರವೇರಿದ್ದ ಡಿಪೋ ಕಾಮಗಾರಿ ಹಲವು ಕಾರಣಗಳಿಂದ ನಿಧಾನಗತಿಯಲ್ಲಿ ಸಾಗಿತ್ತು. ಡಿಪೋ ಕಾಮಗಾರಿ ಮುಗಿಸಿ ಉದ್ಘಾಟನೆ ಮಾಡುವಂತೆ ಹಲವು ಸಂಘಟನೆಗಳು ಹೋರಾಟಗಳನ್ನು ನಡೆಸಿ ಮನವಿ ಸಲ್ಲಿಸಿದ್ದವು. ಅಲ್ಲಿಂದ ಇಲ್ಲಿಯವರೆಗೆ ನಗದು ಮತ್ತು ಟಿಕೆಟ್, ಆಡಳಿತ, ಯಾಂತ್ರಿಕ, ಸಂಚಾರ ಭದ್ರತಾ ಶಾಖೆಗಳ ಕೊಠಡಿಗಳು, ತೈಲ ಇಂಧನ, ಬ್ಲಾಕ್ ಸ್ಮಿತ್, ಕೆಎಂಪಿಎಲ್ ಗಾಳಿ ಸಂಕೇತಕ, ಟ್ರೇ ಬಾಕ್ಸ್, ವಿದ್ಯುತ್ ಜನಕ, ಪ್ಯಾನೆಲ್ ಬೋರ್ಡ್ ಕೊಠಡಿಗಳು ಪುರುಷ ಮತ್ತು ಮಹಿಳಾ ವಿಶ್ರಾಂತಿ ಕೊಠಡಿಗಳು, ಶೌಚಾಲಯ ಕೊಠಡಿಗಳು ನಿರ್ಮಾಣಗೊಂಡಿದ್ದವು.

ಡೀಸೆಲ್ ಬಂಕ್ ನಿರ್ಮಾಣ ಕಾರ್ಯ ತಡವಾಗಿದ್ದು ಇದೀಗ ಅದೂ ಕೂಡ ಮುಗಿದಿದ್ದು, ಆ.30 ರಂದು ತಾಲೂಕಿನ ಜನರ ಸಾರಿಗೆ ವ್ಯವಸ್ಥೆಗೆ ಹೊಸ ಕಾಯಕಲ್ಪ ಸಿಗಲಿದೆ.

ಪುಣೆ-ಬೆಂಗಳೂರು ಮತ್ತು ಬೀದರ್-ಶ್ರೀರಂಗಪಟ್ಟಣ ಎರಡು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಅತಿ ಹೆಚ್ಚು ಕೆಎಸ್ಆರ್‌ಟಿಸಿ ಬಸ್‌ಗಳು ಸಂಚರಿಸುವ ಹಿರಿಯೂರು ತಾಲೂಕಿನಲ್ಲಿ ಬಸ್ ಡಿಪೋ ಅತ್ಯಂತ ಅವಶ್ಯಕ ಬೇಡಿಕೆಯಾಗಿತ್ತು.

ತಾಲೂಕಿನಲ್ಲಿ ಡಿಪೋ ಆರಂಭಿಸಬೇಕು ಎಂಬ ಕೂಗು 1998 ರಿಂದಲೂ ನಡೆಯುತ್ತಿತ್ತು. 2010ರ ಬಿಜೆಪಿ ಸರ್ಕಾರದಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಅಂದು ಸಚಿವ ಡಿ.ಸುಧಾಕರ್ ಅವರು ಸಾರಿಗೆ ಸಚಿವ ಆರ್.ಅಶೋಕ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಆಗ ಅನುಮೋದನೆ ದೊರೆತು ಅಂದಿನ ಸಾರಿಗೆ ಸಚಿವ ಆರ್.ಅಶೋಕರನ್ನು ಕರೆತಂದು ಹುಳಿಯಾರು ರಸ್ತೆಯಲ್ಲಿ ಡಿಪೋ ಕಾಮಗಾರಿ ಪೂಜೆ ಮಾಡಿಸಿದ್ದರು. ಆನಂತರದ ರಾಜಕೀಯ ಬೆಳವಣಿಗೆಗಳಿಂದ ಡಿಪೋ ನಿರ್ಮಾಣ ಕಾಮಾಗಾರಿ ನೆನೆಗುದಿಗೆ ಬಿದ್ದಿತ್ತು. ಆ ಜಾಗದಲ್ಲಿ ಜಾಲಿ ಗಿಡಗಳು ಬೆಳೆದಿದ್ದವು. ಆ ಜಾಗದಲ್ಲಿ ಡಿಪೋ ನಿರ್ಮಾಣ ಮಾಡಲು ಸಾಧ್ಯವಿಲ್ಲವೆಂದು ಪಟ್ರೆಹಳ್ಳಿ ಸಮೀಪ ರಿ.ಸರ್ವೇ ನಂಬರ್ 109ರಲ್ಲಿ 8 ಎಕರೆ ಭೂಮಿಯನ್ನು ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಲಾಗಿತ್ತು. ಅಲ್ಲದೆ 10 ಕೋಟಿ ರು. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ಆದರೆ ಕೋವಿಡ್ ಕಾರಣದಿಂದ ಕಾಮಗಾರಿ ಪ್ರಾರಂಭವಾಗಲಿಲ್ಲ. ಕೊನೆಗೆ 2022 ಡಿಸೆಂಬರ್ 6 ರಂದು ಅಂದಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮತ್ತೆ ಸಾರಿಗೆ ಸಚಿವ ಶ್ರೀರಾಮುಲು ಅವರನ್ನು ಕರೆಯಿಸಿ ಹಳೆಯ ಜಾಗದಲ್ಲಿಯೇ 6 ಕೋಟಿ ವೆಚ್ಚದಲ್ಲಿ ಡಿಪೋ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಅಲ್ಲಿಂದ ಕುಂಟುತ್ತಾ ಸಾಗಿದ್ದ ಡಿಪೋ ಕಾಮಗಾರಿ ಕೊನೆಗೂ ಪೂರ್ಣಗೊಂಡಿದ್ದು ಉದ್ಘಾಟನೆ ಭಾಗ್ಯದ ಹತ್ತಿರ ಬಂದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಮರ್ಪಕ ಬಸ್ ಸೌಲಭ್ಯ ಇಲ್ಲದೇ ಪರದಾಡುವಂತಹ ಪರಿಸ್ಥಿತಿ ಇತ್ತು. ರೈತ ಸಂಘಟನೆಗಳು ಸಹ ಹಲವು ಹೋರಾಟ ಮಾಡಿ ಡಿಪೋ ಆರಂಭಕ್ಕೆ ಒತ್ತಾಯಿಸಿದ್ದವು. ಜನರ ಅವಶ್ಯಕತೆಯನ್ನು ಅರಿತ ಸಚಿವ ಡಿ.ಸುಧಾಕರ್ ಅವರು ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ವೇಗ ಕೊಡಿಸಿ ಇದೀಗ ಉದ್ಘಾಟನೆ ಹಂತಕ್ಕೆ ತಂದಿದ್ದಾರೆ. ಅತೀ ಹೆಚ್ಚಿನ ಬಸ್ಸಿನ ಬೇಡಿಕೆ ಇರುವ ಹಿರಿಯೂರಿನಿಂದ ಶಿರಾ, ತುಮಕೂರು ಹೋಗಿ ವಾಪಾಸ್ ಬರುವ ಬಸ್ ಗಳ ಸಂಖ್ಯೆ ಹೆಚ್ಚಿಸಬೇಕು ಎಂಬ ಬೇಡಿಕೆಯಿದೆ. ಹಿರಿಯೂರಿನಿಂದ ಶಿರಾವರೆಗೆ ಹಳ್ಳಿಗಳಲ್ಲಿ ನಿಲುಗಡೆಯ ಬಸ್ ಗಳ ವ್ಯವಸ್ಥೆ ಮಾಡಿ ಎಂಬ ಬೇಡಿಕೆಯೂ ಸೇರಿದಂತೆ ತಾಲೂಕಿನ ಜನರ ಸುಗಮ ಸಂಚಾರಕ್ಕೆ ಕೊನೆಗೂ ಕಾಲ ಕೂಡಿ ಬಂದಂತಾಗಿದೆ.