ಸಾರಾಂಶ
ಬೆಂಗಳೂರು : ದ್ವಿಚಕ್ರ ವಾಹನ ಸವಾರನ ಮೇಲೆ ಬಿಎಂಟಿಸಿ ಬಸ್ ಚಕ್ರ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆಡುಗೋಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುದ್ದುಗುಂಟೆಪಾಳ್ಯ ನಿವಾಸಿ ಜಗದೀಶ್ವರ(42) ಮೃತ ಸವಾರ.
ಆಂಧ್ರಪ್ರದೇಶ ಮೂಲದ ಜಗದೀಶ್ವರ ಕಳೆದ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ಕ್ಯಾಬ್ ಚಾಲಕರಾಗಿದ್ದ ಜಗದೀಶ್ವರ ಸ್ನೇಹಿತನ ಬಳಿ ಕಾರು ಪಡೆದುಕೊಳ್ಳಲು ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ರಾತ್ರಿ 9 ಗಂಟೆಗೆ ಹೊಸೂರು ರಸ್ತೆಯ ಯುಕೋ ಬ್ಯಾಂಕ್ ಸಿಗ್ನಲ್ ಬಳಿ ತೆರಳುವಾಗ ದ್ವಿಚಕ್ರ ವಾಹನ ಸ್ಕಿಡ್ ಆಗಿ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗಕ್ಕೆ ಬಿದ್ದಿದ್ದಾರೆ. ಇದೇ ವೇಳೆ ಪಕ್ಕದಲ್ಲೇ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ನ ಹಿಂಭಾಗದ ಚಕ್ರ ಜಗದೀಶ್ವರ ಮೇಲೆ ಉರುಳಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಸಂಚಾರ ಪೊಲೀಸರು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಭಾನುವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ಮಾಡಿಸಿ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಬಿಎಂಟಿಸಿ ಬಸ್ ಜಪ್ತಿ ಮಾಡಿದ್ದು, ಅದರ ಚಾಲಕನನ್ನು ಬಂಧಿಸಲಾಗಿದೆ. ಆಡುಗೋಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.