ಸಾರಾಂಶ
ಕನ್ನಡ ಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಕಿರುಗಾವಲು ಗ್ರಾಮದ ಮೈಸೂರು ರಸ್ತೆ ಬದಿಯಲ್ಲಿ ಬಸ್ ಹರಿದು ತಿ.ನರಸೀಪುರ ತಾಲೂಕಿನ ನಂಜಾಪುರದ ನಂಜೇಗೌಡ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.ಸಂಬಂಧಿಕರೊಬ್ಬರ ಬೀಗರ ಊಟಕ್ಕೆ ಕಿರುಗಾವಲಿನ ಶ್ರೀಮಹದೇಶ್ವರ ಸಮುದಾಯಕ್ಕೆ ಬಂದಿದ್ದ ನಂಜೇಗೌಡ ಊಟ ಮಾಡಿ ಅಲ್ಲಿಯೇ ನಿಂತಿದ್ದ ಬಸ್ ಕೆಳಗಡೆ ವಿಶ್ರಾಂತಿ ಪಡೆದುಕೊಳ್ಳಲು ಮಲಗಿದ್ದರು. ಇದನ್ನು ಗಮನಿಸದ ಚಾಲಕ ಬಸ್ ಚಾಲನೆ ಮಾಡಿದ್ದು, ಘಟನೆಯಲ್ಲಿ ನಂಜೇಗೌಡರ ಎರಡೂ ಕಾಲುಗಳ ಮೂಳೆ ಮುರಿದಿದ್ದು ತೀವ್ರ ರಕ್ತಸ್ರಾವವಾಗಿದೆ.
ಆಂಬ್ಯುಲೆನ್ಸ್‌ಗೆ ಪರದಾಟ:ಕಿರುಗಾವಲು ಹೋಬಳಿ ಕೇಂದ್ರವಾಗಿದ್ದು, ಸಮುದಾಯ ಆರೋಗ್ಯ ಕೇಂದ್ರ ಹೊಂದಿದೆ. ಬಸ್ ಹರಿದು ಗಾಯಗೊಂಡಿದ್ದ ನಂಜೇಗೌಡ ರಕ್ತಸ್ರಾವದಿಂದ ನರಳುತ್ತಿದ್ದ ಸಂದರ್ಭದಲ್ಲಿ ಆಂಬ್ಯುಲೆನ್ಸ್ಗಾಗಿ 108ಗೆ ಕರೆ ಮಾಡಿ ಗಂಟೆಗಟ್ಟಲೆ ಕಾದರೂ ಆಂಬ್ಯುಲೆನ್ಸ್ ಬರಲಿಲ್ಲ, ಇದ್ದರಿಂದ ಆಕ್ರೋಶಗೊಂಡ ಸ್ಥಳೀಯರು ಆರೋಗ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ದೂರವಾಣಿಯಲ್ಲಿ ಕಿಡಿಕಾರಿದರು.
ಸ್ಥಳಕ್ಕೆ ಬಂದ ಕಿರುಗಾವಲು ಪೊಲೀಸರು ಖಾಸಗಿ ವಾಹನದ ವ್ಯವಸ್ಥೆ ಮಾಡಿ ಗಾಯಾಳು ನಂಜೇಗೌಡ ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.ಆಂಬ್ಯುಲೆನ್ಸ್ ಕೊರತೆಯ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ ಮಾತನಾಡಿ, ತಾಲೂಕಿನ ಕೆಲ ಆಂಬ್ಯುಲೆನ್ಸ್ ದುರಸ್ತಿ ಹಿನ್ನೆಲೆಯಲ್ಲಿ ರಿಪೇರಿಗಾಗಿ ಬಿಡಲಾಗಿದ್ದು, ಸ್ಪಲ್ಪ ತಡವಾಗಿದೆ. ಮುಂದಿನ ದಿನಗಳಲ್ಲಿ ಇಂಥ ಸಮಸ್ಯೆಯಾಗದಂತೆ ಕ್ರಮ ವಹಿಸುತ್ತೇವೆ ಎಂದರು. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.