ಕನ್ನಡಪ್ರಭವಾರ್ತೆ, ಬೀರೂರು
ಹೂವಿನಹಳ್ಳಿಯಲ್ಲಿ ನೆಲೆಸಿರುವ ಶ್ರೀರಾಚೋಟಿ ವೀರಭದ್ರಸ್ವಾಮಿ ರಥೋತ್ಸವ ಶ್ರದ್ಧಾ-ಭಕ್ತಿಯಿಂದ ಜರುಗಿತು.ರಥೋತ್ಸವದ ಮುನ್ನಾದಿನ ಹೂವಿನಹಳ್ಳಿಯಲ್ಲಿ ದೇವತಾ ಕಾರ್ಯ, ಸಂಜೆ ಶ್ರೀವೀರಭದ್ರಸ್ವಾಮಿ ಮತ್ತು ಶ್ರೀಭದ್ರಕಾಳಿ ಅಮ್ಮನವರಿಗೆ ಕಲ್ಯಾಣೋತ್ಸವ ನಡೆಸಲಾಯಿತು.ಬುಧವಾರ ಬೆಳಿಗೆ ಸ್ವಾಮಿ ಮೂಲ ಮೂರ್ತಿಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ಸಂಜೆ ನಿಗದಿ ಪಡಿಸಿದ್ದ ಕನ್ಯಾಲಗ್ನದಲ್ಲಿ ಮಂಗಳವಾದ್ಯಗಳೊಂದಿಗೆ ಮೂಲಸ್ಥಾನದಿಂದ ಸ್ವಾಮಿಯನ್ನು ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟದ ಗುರುಮೂರ್ತಿ ಸ್ವಾಮೀಜಿ ಹಾಗೂ ತಾವರೆಕರ ಶಿಲಾಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಥ ಎಳೆದು ದೇವಾಲಯ ಸಮೀಪದ ಜಮೀನಿಗೆ ಕರೆತಂದು ಪುಷ್ಪಾಲಂಕೃತ ರಥದಲ್ಲಿ ಸ್ಥಾಪಿಸಲಾಯಿತು.
ಹರಕೆ ಹೊತ್ತ ಮಹಿಳೆಯರು ಗ್ರಾಮದೇವತೆ ಗಂಗಾಧರೇಶ್ವರ ಸ್ವಾಮಿ ನೇತೃತ್ವದಲ್ಲಿ ಅಗ್ನಿಕುಂಡಗಳನ್ನು ಹೊತ್ತು ರಥ ಪ್ರದಕ್ಷಿಣೆ ನಡೆಸಿ, ದುಗ್ಗಲ ಸೇವೆ ನೆರವೇರಿಸಿದ ಬಳಿಕ ಬಾವುಟವನ್ನು ಹರಾಜು ಮಾಡಲಾಯಿತು. ಅಜ್ಜಂಪುರ ತಾಲೂಕಿನ ಎ.ಎಸ್. ನಾಗ ರಾಜಪ್ಪ ಅಸುಂಡಿ 11 ಲಕ್ಷಕ್ಕೆ ಹರಾಜು ಕೂಗಿ, ರಥಕ್ಕೆ ಮೊದಲ ಪೂಜೆ ಸಲ್ಲಿಸುವ ಗೌರವಕ್ಕೆ ಭಾಜನರಾದರು. ರಥಬಲಿ ನಡೆದ ಬಳಿಕ ಒಕ್ಕಲಿನವರು ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದ ಕೂಡಲೇ, ಭಕ್ತರು ಜಯಘೋಷ ಹಾಗೂ ಮಂಗಳ ವಾದ್ಯಗಳ ನಡುವೆ ರಥ ಎಳೆದರು.ರಥೋತ್ಸವದಲ್ಲಿ ಹೂವಿನಹಳ್ಳಿ ಬಳ್ಳಿಗನೂರು, ಹೊಗರೇ ಹಳ್ಳಿ, ಬೀರೂರು, ಕುಡೂರು, ಮುಂಡ್ರೆ ಅಮೃತಾಪುರ ಪುಂಡನಹಳ್ಳಿ, ಎಮ್ಮೆದೊಡ್ಡಿ, ಕಡೂರು ಸೇರಿದಂತೆ ವಿವಿಧ ಗ್ರಾಮಗಳು ಹಾಗೂ ಕಡೂರು, ತರೀಕೆರೆ ಅಜ್ಜಂಪುರ, ಭದ್ರಾವತಿ, ಶಿವಮೊಗ್ಗ ಮೊದಲಾದ ಊರುಗಳಿಂದ ಭಕ್ತರು ಬಂದಿದ್ದರು.
2 ಬೀರೂರು 1
ಬೀರೂರು ಸಮೀಪದ ಹೂವಿನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀರಾಚೋಟಿ ವೀರಭದ್ರಸ್ವಾಮಿ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು