ಸಾರಾಂಶ
ಚಾಮರಾಜನಗರ : ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ಇದೇ ಮೊದಲ ಬಾರಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬರೋಬ್ಬರಿ 3647.62 ಕೋಟಿ ರು. ಮೌಲ್ಯದ 78 ಯೋಜನೆಗಳ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ವಿಭಾಗವಾರು ಸಚಿವ ಸಂಪುಟ ಸಭೆ ನಡೆಸಿ ಆಯಾ ವಿಭಾಗದಲ್ಲಿ ಹೆಚ್ಚಿನ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂಬ ಉದ್ದೇಶದೊಂದಿಗೆ ಬೆಂಗಳೂರಿನ ಹೊರಗೆ ಸಚಿವ ಸಂಪುಟ ಸಭೆ ನಿರ್ಧರಿಸಲಾಗಿತ್ತು. ಅದರಂತೆ ಕಲಬುರಗಿಯಲ್ಲಿ ಈಗಾಗಲೇ ಸಚಿವ ಸಂಪುಟ ಸಭೆ ನಡೆಸಿದ್ದ ಸರ್ಕಾರ, ಮೈಸೂರು ವಿಭಾಗ ವ್ಯಾಪ್ತಿಗೆ ಸಂಬಂಧಿಸಿ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಸಂಪುಟ ಸಭೆ ನಡೆಸಿತು.
ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಹೆಚ್ಚಿನ ಅನುಕೂಲವಾಗುವಂತೆ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದೆ. ಅದರಲ್ಲೂ 1787 ಕೋಟಿ ರು. ಮೊತ್ತದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒಪ್ಪಿಗೆ ಸೂಚಿಸಲಾಯಿತು. ಅದರೊಂದಿಗೆ ಆರೋಗ್ಯ ಕ್ಷೇತ್ರಕ್ಕಾಗಿ 228 ಕೋಟಿ ರು, 315 ಕೋಟಿ ರು. ಮೊತ್ತದ ಕುಡಿಯುವ ನೀರಿನ ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮೋದಿಸಲಾಗಿದೆ.
29 ನೀರಾವರಿ ಯೋಜನೆಗೆ ಒಪ್ಪಿಗೆ:
ಚಾಮರಾಜನಗರ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳ ರೈತರಿಗೆ ಅನುಕೂಲವಾಗುವಂಥ ನೀರಾವರಿ ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕುಂತೂರು ಹಾಗೂ ಇತರ ಕೆರೆಗಳಿಗೆ ನೀರು ತುಂಬಿಸುವ ಏತನೀರಾವರಿ ಯೋಜನೆ, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಗಡಿ ರಂಗಾಪುರ ಮತ್ತು ಇತರ 19 ಕೆರೆಗಳನ್ನು ನೀರು ತುಂಬಿಸುವ ಏತನೀರಾವರಿ ಯೋಜನೆ, ಕಡೂರು ತಾಲೂಕಿನ 25 ಕೆರೆಗಳಿಗೆ ನೀರು ತುಂಬಿಸುವುದು, ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಣಿ ಚೆಕ್ ಡ್ಯಾಂ ನಿರ್ಮಾಣ, ಸುವರ್ಣಾವತಿ ನದಿ ವ್ಯಾಪ್ತಿಯ ಸರಣಿ ಕೆರೆಗಳ ಅಭಿವೃದ್ಧಿ, ಪಿರಿಯಾಪಟ್ಟಣ ಏತ ನೀರಾವರಿ ಕಾಲುವೆ ಸರಪಳಿಯ 52 ಕಿ.ಮೀ,ವರೆಗೆ ಮರು ದುರಸ್ತಿ ಕಾಮಗಾರಿ, ಕಬಿನಿ ಅಣೆಕಟ್ಟಿನ ಮುಂಭಾಗ ದುರಸ್ತಿ ಸೇರಿ 1,787 ಕೋಟಿ ರು. ವೆಚ್ಚದ 29 ಕಾಮಗಾರಿಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.
ಕೊಳ್ಳೆಗಾಲದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣ:
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ 228 ಕೋಟಿ ರು. ಮೊತ್ತದ ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಪ್ರಮುಖವಾಗಿ ಕೊಳ್ಳೆಗಾಲದಲ್ಲಿ 250 ಹಾಸಿಗೆ ಸಾಮರ್ಥ್ಯದ ಜಿಲ್ಲಾಸ್ಪತ್ರೆ ನಿರ್ಮಾಣ, ಹನೂರಿನಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದಿಸಲಾಗಿದೆ. ಮೈಸೂರು ಜಿಲ್ಲೆಯ ಸಾಲಿಗ್ರಾಮ ಮತ್ತು ತಗಡೂರಿನಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು 82 ಕೋಟಿ ರು. ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದಕ್ಕೂ ಒಪ್ಪಿಗೆ ನೀಡಲಾಗಿದೆ.
ಬುಡಕಟ್ಟು ಸಮುದಾಯದವರಿಗೆ ಮೂಲಸೌಕರ್ಯ
ಪರಿಶಿಷ್ಟ ಜಾತಿ/ಪಂಗಡ ಸಮುದಾಯದವರ ಅನುಕೂಲಕ್ಕಾಗಿ 203 ಕೋಟಿ ರು. ವೆಚ್ಚದ 4 ಯೋಜನೆಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರಮುಖವಾಗಿ ಮೈಸೂರಿನ ಅಶೋಕಪುರಂನಲ್ಲಿನ ಪರಿಶಿಷ್ಟ ಜಾತಿ ಮತ್ತು ಕಾಡಂಚಿನ ಗ್ರಾಮಗಳಲ್ಲಿನ ಹಾಡಿಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡ ಹಾಗೂ ಶಿವಮೊಗ್ಗ ಜಿಲ್ಲೆಯ ಮಲ್ಲಿಗೇನಹಳ್ಳಿಯಲ್ಲಿನ ಹಕ್ಕಿಪಿಕ್ಕಿ ಜನಾಂಗದವರ ಬಾಕಿ ವಿದ್ಯುತ್ ಬಿಲ್ ಅನ್ನು ಸರ್ಕಾರದಿಂದ ಪಾವತಿಸುವುದು, ಬುಡಕಟ್ಟು ಸಮುದಾಯದ ಜನರು ವಾಸಿಸುವ ಗ್ರಾಮ ಅಥವಾ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿ ಇನ್ನಿತರ ಮೂಲಸೌಕರ್ಯ ಒದಗಿಸಲು ನಿರ್ಧರಿಸಲಾಗಿದೆ.
ರಾಗಾ ಭೇಟಿ ನೀಡಿದ್ದ ಬದನವಾಳು ಅಭಿವೃದ್ಧಿ:
ಎಐಸಿಸಿ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಭೇಟಿ ನೀಡಿದ್ದ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ ಅಭಿವೃದ್ಧಿಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಗ್ರಾಮಕ್ಕೆ ಈ ಹಿಂದೆ ಮಹಾತ್ಮ ಗಾಂಧಿ ಅವರೂ ಭೇಟಿ ನೀಡಿದ್ದರು. ಅದರ ಸ್ಮರಣಾರ್ಥ ಗ್ರಾಮದಲ್ಲಿ ಶತಮಾನೋತ್ಸವ ಭವನ ಮತ್ತು ಗ್ರಾಮೀಣ ಅಭಿವೃದ್ಧಿ ಕೇಂದ್ರ ನಿರ್ಮಿಸಲು ತೀರ್ಮಾನಿಸಲಾಗಿದೆ.
ಕಾವೇರಿ ಆರತಿಗೆ 92 ಕೋಟಿ ರು:
ಗಂಗಾರತಿ ಮಾದರಿಯಲ್ಲಿ ಕಾವೇರಿ ನದಿಗೆ ಆರತಿ ಮಾಡುವ ಮೂಲಕ ಕಾವೇರಿಗೆ ಪೂಜೆ ಸಲ್ಲಿಸುವುದು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದ ಯೋಜನೆಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೂ ಸಂಪುಟ ಸಭೆ ಅನುಮೋದನೆ ನೀಡಿದೆ. ಕಾವೇರಿ ಆರತಿಗೆ ಅಗತ್ಯವಿರುವ ಮೂಲಸೌಕರ್ಯ ಕಾಮಗಾರಿಗಳನ್ನು ಅನುಷ್ಠಾನಕ್ಕಾಗಿ 92 ಕೋಟಿ ರು. ಒದಗಿಸಲು ನಿರ್ಧರಿಸಲಾಗಿದೆ.
ವಿಜಯಪುರದಲ್ಲಿ ಮುಂದಿನ ವಿಭಾಗೀಯ ಸಚಿವ ಸಂಪುಟ ಸಭೆ
ವಿಭಾಗವಾರು ಸಚಿವ ಸಂಪುಟ ಸಭೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಕಲಬುರಗಿ ಮತ್ತು ಮೈಸೂರು ವಿಭಾಗದ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಮುಂದೆ ಬೆಳಗಾವಿ ಮತ್ತು ಬೆಂಗಳೂರು ವಿಭಾಗದ ಸಚಿವ ಸಂಪುಟ ಸಭೆ ನಡೆಸಬೇಕಿದೆ. ಅದರಂತೆ ಬೆಳಗಾವಿ ವಿಭಾಗದ ಸಚಿವ ಸಂಪುಟ ಸಭೆ ವಿಜಯಪುರ ಹಾಗೂ ಬೆಂಗಳೂರು ವಿಭಾಗದ ಸಚಿವ ಸಂಪುಟ ಸಭೆ ನಂದಿಬೆಟ್ಟದಲ್ಲಿ ನಡೆಸಲು ಈ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಭಾಗೀಯ ಸಚಿವ ಸಂಪುಟ ಸಭೆ ವಿಜಯಪುರದಲ್ಲಿ ನಡೆಯುವ ಸಾಧ್ಯತೆಯಿದೆ.-
ಪಹಲ್ಗಾಂ ಉಗ್ರರ ದಾಳಿಗೆ ಖಂಡನಾ ನಿರ್ಣಯ
ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯನ್ನು ಸಚಿವ ಸಂಪುಟ ಸಭೆಯಲ್ಲಿ ಖಂಡಿಸಿ ಖಂಡನಾ ನಿರ್ಣಯ ತೆಗೆದುಕೊಳ್ಳಲಾಯಿತು. ಘಟನೆಗೆ ಕಾರಣವಾಗಿರುವ ವೈಫಲ್ಯಗಳ ಕುರಿತು ಸಮರ್ಥವಾಗಿ ಮತ್ತು ಸಮರ್ಪಕವಾಗಿ ತನಿಖೆ ನಡೆಸಬೇಕು ಹಾಗೂ ಮುಂದೆ ಈ ರೀತಿಯ ಯಾವುದೇ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯದ ಜನರ ಪರವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿರ್ಣಯಿಸಲಾಗಿದೆ.
ಜತೆಗೆ ಉಗ್ರರ ದಾಳಿಯಿಂದ ಮೃತಪಟ್ಟವರು ಹಾಗೂ ಇತ್ತೀಚೆಗೆ ನಿಧನರಾದ ಕ್ರಿಶ್ಚಿಯನ್ ಧರ್ಮಗುರು ಪೋಪ್ ಫ್ರಾನ್ಸಿಸ್ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಗಿದೆ.
ಸಂಪುಟದ ಇತರೆ ಪ್ರಮುಖ ನಿರ್ಧಾರಗಳು- ಚಾಮರಾಜನಗರ ಜಿಲ್ಲೆಯ ಕುಡಿವ ನೀರು, ಒಳಚರಂಡಿ ವ್ಯವಸ್ಥೆ ಸುಧಾರಿಸಲು 315 ಕೋಟಿ ರು. ವೆಚ್ಚದಲ್ಲಿ ಯೋಜನೆ ಅನುಷ್ಠಾನ
- ದಕ್ಷಿಣ ಕರ್ನಾಟಕ ಪ್ರವಾಸಿ ವೃತ್ತ ಸ್ಥಾಪನೆಗೆ 231.78 ಕೋಟಿ ರು. ಯೋಜನೆ ಸೇರಿ ಪ್ರವಾಸೋದ್ಯಮ ಅಭಿವೃದ್ಧಿಗೆ 300 ಕೋಟಿ ರು. ಒದಗಿಸಲು ತೀರ್ಮಾನ
- ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಚಿಕ್ಕಕಲ್ಲೂರಿನ ಮಂಟೇಸ್ವಾಮಿ, ರಾಚಪ್ಪಾಜಿ ಹಾಗೂ ಸಿದ್ದಪ್ಪಾಜಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚನೆ
-ಮಾನವ-ಆನೆ ಸಂಘರ್ಷ ತಡೆಗೆ 210 ಕೋಟಿ ರು. ಒದಗಿಸಲು ನಿರ್ಧಾರ. ಅದರ ಮೂಲಕ ಕಾಡಂಚಿನಲ್ಲಿ ರೈಲ್ವೆ ಬ್ಯಾರಿಕೇಡ್‌ಗಳ ನಿರ್ಮಾಣ
- ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆಗೆ 101 ಕೋಟಿ ರು. ವೆಚ್ಚದಲ್ಲಿ ಭೂಸ್ವಾಧೀನ ಪ್ರಕ್ರಿಯೆ
- ಮೈಸೂರು ನಗರದ ಹಳೇ ಜಿಲ್ಲಾಧಿಕಾರಿ ಕಚೇರಿಯಲ್ಲಿ 30 ಕೋಟಿ ರು. ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಾಣ
- ಮೈಸೂರು ಇಲವಾಲದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ-ಚಾಮರಾಜನಗರದಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣ-ಚಾಮರಾಜನಗರದಲ್ಲಿ 15 ಕೋಟಿ ರು. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ
- ಆನೆಗೊಂದಿಯಲ್ಲಿನ ಶ್ರೀ ಕೃಷ್ಣದೇವರಾಯ ಸಮಾಧಿ ಅಭಿವೃದ್ಧಿಗೆ ನಿರ್ಧಾರ- ಮೈಸೂರು ನಗರದ ಪ್ರಮುಖ ರಸ್ತೆಗಳನ್ನು 393.85 ಕೋಟಿ ರು. ವೆಚ್ಚದಲ್ಲಿ ವೈಟ್‌ಟಾಪಿಂಗ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲು ಕ್ರಮ