ಸಾರಾಂಶ
ಮೋಲ್ನೋಟಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಯೋಗೇಶ್ವರ್ ಹಾಗೂ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ನಡುವೆ ಸ್ಪರ್ಧೆ ಕಂಡು ಬಂದರೂ ವಾಸ್ತವವಾಗಿ ಡಿ.ಕೆ.ಸಹೋದರರು ಮತ್ತು ದೇವೇಗೌಡರ ಕುಟುಂಬದ ನಡುವಿನ ಯುದ್ಧದಂತೆ ಭಾಸವಾಗಿತ್ತು.
ಎಂ.ಅಫ್ರೋಜ್ ಖಾನ್
ರಾಮನಗರ : ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎಂಬಂತೆ ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡರೂ ರಾಜಕಾರಣಿಗಳು ಹಾಗೂ ಜನರಲ್ಲಿನ ಕುತೂಹಲ ಇನ್ನೂ ತಣಿದಿಲ್ಲ. ಚುನಾವಣೆಯಲ್ಲಿ ಅಬ್ಬರದ ಪ್ರಚಾರ ನಡೆಸಿದ ರಾಜಕೀಯ ದಿಗ್ಗಜರಿಂದ ಯಾವ ಪಕ್ಷದ ಅಭ್ಯರ್ಥಿಗೆ ಎಷ್ಟು ಲಾಭ- ನಷ್ಟವಾಯಿತು ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಹಿಂದಿನ ಸಾರ್ವತ್ರಿಕ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿಯ ಚನ್ನಪಟ್ಟಣ ಉಪಚುನಾವಣೆಯನ್ನು ಕಾಂಗ್ರೆಸ್ , ಜೆಡಿಎಸ್ - ಬಿಜೆಪಿ ಮಿತ್ರ ಪಕ್ಷಗಳು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದವು. ಹೀಗಾಗಿ ಮಾಜಿ ಪ್ರಧಾನಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಂಸದರು ಮತದಾರರ ಮನಗೆಲ್ಲಲು ಅಖಾಡ ಪ್ರವೇಶಿಸಿದ್ದರಿಂದ ಚುನಾವಣಾ ಕಣ ರಂಗೇರುವಂತೆ ಮಾಡಿದ್ದರು.
ಮೋಲ್ನೋಟಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಯೋಗೇಶ್ವರ್ ಹಾಗೂ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ನಡುವೆ ಸ್ಪರ್ಧೆ ಕಂಡು ಬಂದರೂ ವಾಸ್ತವವಾಗಿ ಡಿ.ಕೆ.ಸಹೋದರರು ಮತ್ತು ದೇವೇಗೌಡರ ಕುಟುಂಬದ ನಡುವಿನ ಯುದ್ಧದಂತೆ ಭಾಸವಾಗಿತ್ತು. ಕೊನೆಗೆ ಉಪಚುನಾವಣೆಯ ಅಗ್ನಿ ಪರೀಕ್ಷೆಯಲ್ಲಿ ನಿಖಿಲ್ ಸೋಲುವ ಮೂಲಕ ದೊಡ್ಡಗೌಡರ ಕುಟುಂಬ ರಾಜಕೀಯವಾಗಿ ಹಿನ್ನಡೆ ಅನುಭವಿಸುವಂತಾಯಿತು.
ಬೊಂಬೆನಾಡಿನಲ್ಲಿ ಮೋಡಿ ಮಾಡದ ದೊಡ್ಡ ಗೌಡರು:
ಮಾಜಿ ಸಚಿವ ಕಾಂಗ್ರೆಸ್ ನ ಸಿ.ಪಿ.ಯೋಗೇಶ್ವರ್ ವಿರುದ್ಧ ಸ್ಪರ್ಧಿಸಿದ್ದ ತಮ್ಮ ಮೊಮ್ಮಗ, ಜೆಡಿಎಸ್ ಹುರಿಯಾಳು ನಿಖಿಲ್ ಕುಮಾರಸ್ವಾಮಿ ಪರವಾಗಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಹಗಲಿರುಳು ಭರ್ಜರಿ ಮತಬೇಟೆ ನಡೆಸಿದರು.
ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ವಿಪಕ್ಷ ನಾಯಕ ಅಶೋಕ್ , ಸಂಸದ ಡಾ.ಸಿ.ಎನ್.ಮಂಜುನಾಥ್ ಸೇರಿದಂತೆ ಅನೇಕರು ದೇವೇಗೌಡರಿಗೆ ಸಾಥ್ ನೀಡಿದರು. ನಿಖಿಲ್ ರವರ ತಾಯಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಪತ್ನಿ ರೇವತಿ ಕೂಡ ಅಖಾಡಕ್ಕಿಳಿದು ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡಿದ್ದರು.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಸಹೊದ್ಯೋಗಿಗಳು ಕ್ಷೇತ್ರದಲ್ಲಿ ಉಳಿದು ಪ್ರಚಾರ ಮಾಡಿದ್ದರು.
ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿಯವರು ಸಮಾವೇಶ - ಪ್ರಚಾರ ನಡೆಸಿದ ದಿನಗಳಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಚನ್ನಪಟ್ಟಣದಲ್ಲಿ ಪ್ರಚಾರ ನಡೆಸಿದ್ದರು. ಕೊನೆಯ ದಿನ ಕಾಂಗ್ರೆಸ್ ಹಾಗೂ ಜೆಡಿಎಸ್ - ಬಿಜೆಪಿ ಮೈತ್ರಿ ಪಕ್ಷಗಳು ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದರು.
ಈ ಉಪಚುನಾವಣೆಯಲ್ಲಿ ಹಣ ಬಲ ಸಾಕಷ್ಟು ಪ್ರಯೋಗ ಆಗಿದೆ. ಮಾಜಿ ಪ್ರಧಾನಿ ದೇವೇಗೌಡರು ಸಾಕಷ್ಟು ಪ್ರಭಾವವನ್ನು ಬೀರಿದ್ದರು. ಆದರೆ, ಅದ್ಯಾವುದು ಅಭ್ಯರ್ಥಿಯ ಆಯ್ಕೆ ಮೇಲೆ ಪರಿಣಾಮ ಬೀರಿಲ್ಲ. ಎರಡು ಚುನಾವಣೆಗಳಲ್ಲಿ ಸೋಲು ಕಂಡಿದ್ದ ಯೋಗೇಶ್ವರ್ ಪರವಾದ ಸಿಂಪತಿ, ಮನೆ ಮಗ, ಅಧಿಕಾರದಲ್ಲಿದ್ದಾಗ ಮಾಡಿದ ನೀರಾವರಿ ಯೋಜನೆಗಳು, ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಮನ್ನಣೆ ನೀಡಿರುವುದು ಸ್ಪಷ್ಟವಾಗಿದೆ.
ಮುಯ್ಯಿಗೆ ಮುಯ್ಯಿ: ಅಂದು ತಾಯಿ, ಇಂದು ಮಗನಿಗೆ ಸೋಲುಣಿಸಿದ ಯೋಗೇಶ್ವರ್:
ರಾಜ್ಯದ ಮಟ್ಟಿಗೆ ಹೆಚ್ಚು ಸದ್ದು ಮಾಡಿದ್ದು ಹೈವೋಲ್ಟೇಜ್ ಕಣ ಚನ್ನಪಟ್ಟಣ. ತುರುಸಿನ ಸ್ಪರ್ಧೆಯಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲುವಿನ ನಗಾರಿ ಬಾರಿಸಿದರು. ಕಾಂಗ್ರೆಸ್ ರೂಪಿಸಿದ ಚಕ್ರವ್ಯೂಹ ಬೇಧಿಸುವಲ್ಲಿ ನಿಖಿಲ್ ಕುಮಾರಸ್ವಾಮಿ 3ನೇ ಬಾರಿ ವಿಫಲರಾಗಿದ್ದಾರೆ. ಅಂದು ತಾಯಿಯನ್ನು ಸೋಲಿಸಿದ್ದ ಯೋಗೇಶ್ವರ್ ಈಗ ಪುತ್ರನನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ.
ಸಿ.ಪಿ.ಯೋಗೇಶ್ವರ್ ಅವರು ಕಳೆದ ಎರಡೂ ಬಾರಿ ಕುಮಾರಸ್ವಾಮಿ ವಿರುದ್ಧ ಸೋಲು ಕಂಡಿದ್ದರೂ ಸಹ ಅನಿತಾ ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದಾರೆ. ಅದರಲ್ಲೂ 2024ರ ಉಪ ಚುನಾವಣೆಯನ್ನು ಎಚ್. ಡಿ. ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡು ಪುತ್ರನನ್ನು ಗೆಲ್ಲಿಸಬೇಕು ಎಂದು ಪಣ ತೊಟ್ಟಿದ್ದರು. ಆದರೆ, ಡಿಕೆ ಬ್ರದರ್ಸ್ ಹೆಣೆದ ತಂತ್ರದಿಂದ ದಳಪತಿಗಳ ಎಲ್ಲಾ ಲೆಕ್ಕಚಾರಗಳು ಉಲ್ಟಾ ಆಗಿವೆ.
ಎಚ್ಡಿಕೆ ವಿರುದ್ಧದ 2 ಸೋಲಿನ ಸೇಡು ತೀರಿಸಿಕೊಂಡ ಸೈನಿಕ:
ಚನ್ನಪಟ್ಟಣದಲ್ಲಿ ಸಿ. ಪಿ. ಯೋಗೇಶ್ವರ 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅನಿತಾ ಕುಮಾರಸ್ವಾಮಿಯನ್ನು ಸೋಲಿಸಿದ್ದರು. ಅನಿತಾ ಕುಮಾರಸ್ವಾಮಿ 73,635 ಮತಗಳನ್ನು ಪಡೆದುಕೊಂಡಿದ್ದರೆ, ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿದ್ದ ಸಿ. ಪಿ. ಯೋಗೇಶ್ವರ 80,099 ಮತಗಳನ್ನು ಪಡೆದು ಜಯಗಳಿಸಿದ್ದರು. ನಂತರ ಕುಮಾರಸ್ವಾಮಿ 2018 ಮತ್ತು 2023 ವಿಧಾನಸಭೆ ಚುನಾವಣೆಯಲ್ಲಿ ಯೋಗೇಶ್ವರ್ ಅವರನ್ನು ಸೋಲಿಸಿದ್ದರು. ಇದೀಗ ಉಪಚುನಾವಣೆಯಲ್ಲಿ ಯೋಗೇಶ್ವರ್ ಮತ್ತೆ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರನ್ನು ಸೋಲಿಸಿದ್ದಾರೆ. ತಾಯಿ ಮಗನಿಗೆ ಸೋಲಿನ ರುಚಿ ತೋರಿಸುವ ಮೂಲಕ ಕುಮಾರಸ್ವಾಮಿ ವಿರುದ್ಧದ 2 ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. ಅಲ್ಲಿಗೆ ಲೆಕ್ಕ ಚುಕ್ತವಾದಂತಾಗಿದೆ.