ಮಕ್ಕಳ ಪ್ರತಿಭೆ ಒರೆಗೆ ಹಚ್ಚಲು ಶಿಬಿರ ಸಹಕಾರಿ

| Published : Feb 23 2024, 01:52 AM IST

ಸಾರಾಂಶ

ಮಕ್ಕಳೇ ಚಿತ್ರ ಬಿಡಿಸಿ ತಮ್ಮ ಕಲ್ಪನೆಗೆ ಹೊಸ ಬಣ್ಣ ಬಳೆಯುತ್ತಿದ್ದಾರೆ. ಚಿತ್ರಗಳನ್ನು ಹಾಳೆಗಳಲ್ಲಿ ಕತ್ತರಿಸಿ ಹೊಸ ರೂಪ ಕೊಡುತ್ತಿದ್ದಾರೆ.

ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮ । ಮಕ್ಕಳಿಂದ ವಿವಿಧ ಚಟುವಟಿಕೆ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಮಕ್ಕಳ ಪ್ರತಿಭೆ ಒರೆಗೆ ಹಚ್ಚಿ, ಚಿತ್ರ ಬಿಡಿಸಿ, ಕಥೆ ಬರೆದು, ಕವಿತೆ ರಚಿಸಿ ಪತ್ರಕರ್ತರಂತೆ ಸಂದರ್ಶನ ಮಾಡುವ ಕಲೆ ಕರಗತ ಮಾಡುವ ಅಪರೂಪದ ಶಿಬಿರ ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನಲ್ಲಿ ನಡೆಯುತ್ತಿದ್ದು, ನೂರು ಮಕ್ಕಳು ಈ ಸಂಭ್ರಮದಲ್ಲಿ ತಲ್ಲೀನರಾಗಿದ್ದಾರೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಮೂರು ದಿನಗಳ ಮಕ್ಕಳ ಸಾಹಿತ್ಯ ಸಂಭ್ರಮ-೨೦೨೪ ಅರ್ಥಪೂರ್ಣವಾಗಿ ಮಕ್ಕಳ ಪ್ರತಿಭೆ ಗುರುತಿಸಿ ಗೌರವಿಸುವ ಕಾರ್ಯಕ್ಕೆ ಮುಂದಾಗಿದೆ.

ಮಕ್ಕಳೇ ಚಿತ್ರ ಬಿಡಿಸಿ ತಮ್ಮ ಕಲ್ಪನೆಗೆ ಹೊಸ ಬಣ್ಣ ಬಳೆಯುತ್ತಿದ್ದಾರೆ. ಚಿತ್ರಗಳನ್ನು ಹಾಳೆಗಳಲ್ಲಿ ಕತ್ತರಿಸಿ ಹೊಸ ರೂಪ ಕೊಡುತ್ತಿದ್ದಾರೆ. ಮಕ್ಕಳೇ ಕಥೆ ಹೆಣೆದು ತಮ್ಮ ಮನದಾಳದ ಭಾವ ಬಿತ್ತರಿಸುತ್ತಿದ್ದಾರೆ. ಕವಿತೆ ಬರೆದು ವಾಚಿಸುತ್ತಿದ್ದಾರೆ. ಇದಕ್ಕೂ ಮಿಗಿಲಾಗಿ ರಾಜಕಾರಣಿಗಳು, ವೈದ್ಯರು, ಸಾಹಿತಿಗಳು,ಶಿಕ್ಷಣ ಪ್ರೇಮಿಗಳನ್ನು ಸಂದರ್ಶಿಸುತ್ತಿದ್ದಾರೆ. ನಾಟಕ ಬರೆದು ಆಡುತ್ತಿದ್ದಾರೆ. ಹಾಡು ಹೇಳುವುದರಲ್ಲಿಯೂ ಅವರು ಕಮ್ಮಿ ಇಲ್ಲ.

ನೂರು ಮಕ್ಕಳಿಗೆ ೪ ಗುಂಪುಗಳಲ್ಲಿ ೧೧ ಜನ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ಮಾಡುತ್ತಿದ್ದಾರೆ. ಕೈಯಲ್ಲಿ ಪೆನ್ಸಿಲ್ ಹಿಡಿದು ಚಿತ್ರ ಬರೆಯುವ, ಕತ್ತರಿ ಹಿಡಿದು ಪ್ರಾಣಿ ಪಕ್ಷಿ ಆಕಾರ ಕೊಡುವ, ಹೆಜ್ಜೆ ಹಾಕಿ ಕುಣಿಯುವ, ನಾಟಕ ಮಾಡುವ ಅವರ ಪ್ರತಿಭೆ ಒರೆಗೆ ಹಚ್ಚುವ ಅತ್ಯಂತ ಅರ್ಥಪೂರ್ಣ ಶಿಬಿರ ಎಂಬುದರಲ್ಲಿ ಸಂದೇಹವೇ ಇಲ್ಲ.

ತಾಪಂ ಎಲ್ಲ ವ್ಯವಸ್ಥೆ ಮಾಡುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸಿದೆ. ಭಾರತ ಜ್ಞಾನ ವಿಜ್ಞಾನ ಸಮಿತಿ ಉಸ್ತುವಾರಿ ನೋಡುತ್ತಿದೆ. ಪ್ರತಿ ವರ್ಷ ಇಂತಹ ಶಿಬಿರ ನಡೆದರೆ ಮಕ್ಕಳಲ್ಲಿ ಹೊಸ ಉತ್ಸಾಹ, ಪ್ರತಿಭೆಯ ಬೆಳವಣಿಗೆಗೆ ಸಹಕರಿಯಾಗಬಲ್ಲದು.

ಶಿಬಿರ ಅರ್ಥಪೂರ್ಣಗೊಳಿಸುವಲ್ಲಿ ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳಾದ ಎಸ್.ವಿ. ಹೊಸಮನಿ, ಎಚ್. ಸುಧಾ, ರಂಜಿತಾ ಶೇಟ್, ಎ.ಎನ್. ಯೋಗೀಂದ್ರಾಚಾರ್ಯ, ಪ್ರಕಾಶ ಚವ್ಹಾಣ, ಬಾಲಚಂದ್ರ ಅಂಬಿಗೇರ, ನಿಂಗಪ್ಪ ಸಾಳುಂಕೆ, ರಾಘವೇಂದ್ರ ಕೊಂಡೋಜಿ, ಎಂ.ಎಸ್. ಅಮರದ, ಶ್ರೀಕಾಂತ ಹುಲಮನಿ, ಸುರೇಶ ಬೆಳಗಾಂವಕರ ಪರಿಶ್ರಮ ಫಲ ನೀಡಿದೆ.ಮಕ್ಕಳನ್ನು ಈಗಲೇ ದೂರದೃಷ್ಠಿ ನೀಡಿ ಬೆಳೆಸಿದರೆ ನಾಳೆ ಈ ನಾಡಿನ ಮೆಚ್ಚುಗೆಯ ಪ್ರಜೆಗಳಾಗಬಲ್ಲರು. ಪಠ್ಯದ ಹೊರತಾಗಿಯೂ ನಮ್ಮನ್ನು ಆವರಿಸಿದ ಪ್ರತಿಭೆಗೆ ಸಮಾಜದಲ್ಲಿ ಗೌರವವಿದೆ ಎಂಬುದನ್ನು ಮನವರಿಕೆ ಮಾಡಬೇಕು.ಇದು ಕೇವಲ ಶಿಬಿರಗಳಲ್ಲಿ ಮಾತ್ರವಲ್ಲ. ಶಾಲೆಯ ದಿನಗಳಲ್ಲಿಯೂ ಮಕ್ಕಳನ್ನು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕು. ಈ ಶಿಬಿರ ಒಂದು ಹೊಸ ಜಾಗೃತಿ ಮೂಡಿಸಿದೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ.