ಸಾರಾಂಶ
ಪೊಲೀಸ್ ಠಾಣೆಯಲ್ಲಿ ಕ.ಸಾ.ಪದಿಂದ ಕಾರ್ತಿಕ ಮಾಸದಲ್ಲಿ ಸಾಹಿತ್ಯ ಸಂಭ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕನ್ನಡದಲ್ಲೇ ವ್ಯವಹಾರ ಮಾಡಬೇಕೆಂಬ ಅಭಿಯಾನ ಪ್ರಾರಂಭಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಯತ್ನ ಶ್ಲಾಘನೀಯ ಎಂದು ಪೊಲೀಸ್ ಠಾಣಾಧಿಕಾರಿ ನಿರಂಜನ ಗೌಡ ತಿಳಿಸಿದರು.
ಶುಕ್ರವಾರ ಪೊಲೀಸ್ ಠಾಣೆ ಆವರಣದಲ್ಲಿ ತಾಲೂಕು ಕಸಾಪ ಏರ್ಪಡಿಸಿದ್ದ ಕಾರ್ತಿಕ ಮಾಸದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರದ ಆಶಯದಂತೆ ಎಲ್ಲಾ ವ್ಯವಹಾರ ಗಳನ್ನು ಕನ್ನಡದಲ್ಲೇ ಮಾಡಬೇಕು ಎಂಬ ಉದ್ದೇಶವನ್ನು ಕಸಾಪ ಕೈಗೆತ್ತಿಕೊಂಡಿದೆ. ಬ್ಯಾಂಕುಗಳಲ್ಲಿ ಕನ್ನಡ ಬಳಸಿ ಎಂಬ ಆಂದೋಲನ ಸಹ ಪ್ರಾರಂಭಿಸಿರುವುದು ಒಳ್ಳೆಯ ಉದ್ದೇಶವಾಗಿದೆ. ಕಸಾಪ ಕಾರ್ಯಕ್ರಮ ಗಳಿಗೆ ಪೊಲೀಸರ ಬೆಂಬಲ ಸದಾ ಇರುತ್ತದೆ. ನರಸಿಂಹರಾಜಪುರದಲ್ಲಿ ಎಲ್ಲಾ ಧರ್ಮದವರು ಕನ್ನಡ ಭಾಷೆಯನ್ನೇ ಬಳಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಸ್.ಎಸ್.ಸಂತೋಷಕುಮಾರ್ ಮಾತನಾಡಿ, ಸಂಘ ಸಂಸ್ಥೆಗಳಿಗೆ, ಜನಸಮಾನ್ಯರಿಗೆ ಮೀಸಲಾಗಿದ್ದ ಕನ್ನಡ ಭಾಷೆಯನ್ನು ಕಸಾಪ ಸರ್ಕಾರಿ ಇಲಾಖೆಗಳಲ್ಲಿ ಪ್ರಸರಿಸುವ ಪ್ರಯತ್ನ ಮಾಡುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಪೋಲಿಸರಿಗೂ, ಸಾಹಿತ್ಯಕ್ಕೂ ನಂಟನ್ನು ಕಲ್ಪಿಸಿದೆ. ಪೊಲೀಸ್ ಇಲಾಖೆಯಲ್ಲಿ ತಮ್ಮ ಬಳಿ ಪ್ರಥಮವಾಗಿ ಬರುವ ವ್ಯಾಜ್ಯಗಳನ್ನು ಠಾಣಾ ಹಂತ ದಲ್ಲಿಯೇ ಮುಗಿಸಿ ಜನ ಸ್ನೇಹಿ ಪೊಲೀಸರಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಒಂದು ಕಾಲದಲ್ಲಿ ಪೊಲೀಸ್ ಠಾಣೆಗೆ ಬರುವುದಕ್ಕೆ ಹೆದರುತ್ತಿದ್ದ ಜನರಿಗೆ ಈಗ ಜನ ಸ್ನೇಹಿ ಪೊಲೀಸ್ ಠಾಣೆಯ ನ್ನಾಗಿ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಕಸಾಪದಿಂದ ಇಂದು ಪೊಲೀಸ್ ಠಾಣೆಯಲ್ಲಿ ಸಾಧಕರಿಗೆ ಸನ್ಮಾನ ಹಮ್ಮಿಕೊಂಡಿದ್ದೇವೆ. ಮುಂದೆ ಪ್ರತಿ ಸರ್ಕಾರಿ ಇಲಾಖೆಯಲ್ಲಿಯೂ ಕನ್ನಡದ ಕಂಪು ಹರಡಲು ಸಿದ್ಧತೆ ನಡೆಸಿಕೊಂಡಿದ್ದೇವೆ. ಕಸಾಪದಿಂದ ಎಲೆ ಮರೆ ಕಾಯಿಯಂತೆ ಇರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುವುದು. ಮುಂದೆ ಎಲ್ಲಾ ಕನ್ನಡ ಮನಸ್ಸುಗಳ, ಸಂಘ ಸಂಸ್ಥೆಗಳ ಸಹಕಾರದಿಂದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರು ಆಕಸ್ಮಿಕವಾಗಿ ಬಿಟ್ಟು ಹೋಗುವ ಬೆಲೆ ಬಾಳುವ ವಸ್ತುಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹಿಂದಿರುಗಿಸಿ ಪ್ರಾಮಾಣಿಕತೆ ಮರೆಯುತ್ತಿರುವ ಸರ್ಕಾರಿ ಬಸ್ಸಿನ ಕಂಡಕ್ಟರ್ ಯಲ್ಲಾಲಿಂಗ ಪಾಟೀಲ್ ಮತ್ತು ಅವರಿಗೆ ಸಹಕಾರ ನೀಡುವ ಅವರ ಪತ್ನಿ ಕವಿತರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿದ್ದ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್‌ಶೆಟ್ಟಿ, ಕಸಾಪ ಕಸಬಾ ಹೋಬಳಿ ಅಧ್ಯಕ್ಷೆ ಜುಬೇದ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಬ್ರಮಣ್ಯ, ಕಸಾಪ ಜಿಲ್ಲಾ ಸಾಂಸ್ಕೃತಿಕ ರಾಯಬಾರಿ ಕಣಿವೆ ವಿನಯ್, ನಿವೃತ್ತ ಯೋಧ ಡೇವಿಸ್, ವಾಲ್ಮೀಕಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿದರು ಜಿಲ್ಲಾ ಕಸಾಪ ಸಂಚಾಲಕ ನಂಜುಂಡಪ್ಪ,ತಾ. ಕಸಾಪ ಕಾರ್ಯದರ್ಶಿ ಮಂಜಪ್ಪ,ತಮ್ಮಯ್ಯ, ಪುರುಶೋತ್ತಮ್ ಉಪಸ್ಥಿತರಿದ್ದರು.