ರಥದ ಗಾಲಿಗೆ ಜೋಡಣೆ ಮಾಡಿದ ಕಟ್ಟಿಗೆಯ ಇರಸು ಹಳೆಯದಾಗಿದ್ದರಿಂದ ಭಾರವನ್ನು ತಡೆದುಕೊಳ್ಳಲಾರದೆ ತುಂಡಾಗಿದ ಎನ್ನಲಾಗಿದೆ. ಕಟ್ಟಿಗೆ ಇರಸು ತುಂಡಾಗುತ್ತಿದಂತೆ ಗಾಲಿಯು ಕಟ್ಟಿಗೆಗೆ ಸಿಲುಕಿ ವಾಲಿಕೊಂಡು ನಿಂತಿತು.

ರೋಣ: ತಾಲೂಕಿನ ಹೊನ್ನಿಗನೂರು ಗ್ರಾಮದ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವದ ರಥೋತ್ಸವ ಸಂದರ್ಭದಲ್ಲಿ ಚಲಿಸುತ್ತಿದ್ದ ರಥದ ಇರಸು (ಗಾಲಿಗೆ ಜೋಡಿಸಿದ ಕಟ್ಟಿಗೆ) ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.​ಪ್ರತಿವರ್ಷದಂತೆ ಈ ಬಾರಿಯೂ ಬುಧವಾರ ಹೊನ್ನಿಗನೂರು ಗ್ರಾಮದಲ್ಲಿ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಯೋಜಿಸಲಾಗಿತ್ತು. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು, ರಥ ಎಳೆಯಲು ಕಾಯುತ್ತಿದ್ದರು. ಸಕಲ ವಾದ್ಯಮೇಳಗಳು, ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ರಥೋತ್ಸವಕ್ಕೆ ಚಾಲನೆ ದೊರೆತು, ಭಕ್ತರು ಜಯಘೋಷಗಳೊಂದಿಗೆ ತೇರನ್ನು ಎಳೆಯುತ್ತಿದ್ದ ವೇಳೆ ದಿಢೀರ್ ರಥದ ಮುಂದಿನ ಗಾಲಿಗೆ ಜೋಡಿಸಿದ ಕಟ್ಟಿಗೆಯ ಇರಸು ತುಂಡಾಗಿದೆ. ಈ ವೇಳೆ ರಥದ ಮೇಲೆ ಐವರು ಪೂಜಾರಿಗಳು ಸೇರಿ ಜನರಿದ್ದರು. ರಥ ಎಳೆಯಲು ನೂರಾರು ಭಕ್ತರಿದ್ದರು.​ಘಟನೆಗೆ ಕಾರಣ: ಪ್ರಾಥಮಿಕ ಮಾಹಿತಿ ಹಾಗೂ ಸ್ಥಳೀಯರ ಪ್ರಕಾರ, ರಥದ ಗಾಲಿಗೆ ಜೋಡಣೆ ಮಾಡಿದ ಕಟ್ಟಿಗೆಯ ಇರಸು ಹಳೆಯದಾಗಿದ್ದರಿಂದ ಭಾರವನ್ನು ತಡೆದುಕೊಳ್ಳಲಾರದೆ ತುಂಡಾಗಿದ ಎನ್ನಲಾಗಿದೆ. ಕಟ್ಟಿಗೆ ಇರಸು ತುಂಡಾಗುತ್ತಿದಂತೆ ಗಾಲಿಯು ಕಟ್ಟಿಗೆಗೆ ಸಿಲುಕಿ ವಾಲಿಕೊಂಡು ನಿಂತಿತು.

ಇದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ. ಜಾತ್ರೆಗೂ ಮುನ್ನ ರಥದ ಸದೃಢತೆಯನ್ನು ಸಮರ್ಪಕವಾಗಿ ಪರಿಶೀಲಿಸದೆ ಇರುವುದು ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಗಾಲಿಯ ಇರಸು ಮುರಿದು ರಥ ಒಂದು ಕಡೆಗೆ ವಾಲುವುದನ್ನು ಕಂಡ ಭಕ್ತರು ಗಾಬರಿಗೊಂಡು ಚದುರಿದರು. ಅದೃಷ್ಟವಶಾತ್ ರಥವು ಸಂಪೂರ್ಣವಾಗಿ ಉರುಳಿ ಬೀಳದ ಕಾರಣ ಮತ್ತು ಸ್ಥಳದಲ್ಲಿದ್ದ ಯುವಕರು ತಕ್ಷಣವೇ ಎಚ್ಚೆತ್ತುಕೊಂಡಿದ್ದರಿಂದ ಯಾವುದೇ ಪ್ರಾಣಾಪಾಯ ಅಥವಾ ಸಾರ್ವಜನಿಕರಿಗೆ ಗಾಯಗಳಾಗಿಲ್ಲ.