ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೋಣಸಾಲೆ ವ್ಯಾಪ್ತಿಯ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಎರಡು ಕುಟುಂಬಗಳನ್ನು ಮಾಲೀಕರು ಜೀತಕ್ಕೆ ಇರಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಗ್ರಾಮದಲ್ಲಿ ಎರಡು ಕುಟುಂಬಗಳನ್ನು ಜಾನುವಾರಗಳ ಸಾಕಾಣಿಕೆ ಬಳಸಿಕೊಳ್ಳುತ್ತಿದಾರೆ ಎಂಬ ಮಾಹಿತಿ ಮೇರೆಗೆ ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ ಹಾಗೂ ತಹಸೀಲ್ದಾರ್ ಸೋಮಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ ಜೀತದಾಳುಗಳಾಗಿ ದುಡಿಯುತಿದ್ದ ಬಿಜಾಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕು ಗೊಲ್ಲರ ಉಕ್ಕಲಿ ಗ್ರಾಮದ ರಮೇಶ್ ಪುತ್ರ ಯಲ್ಲಪ್ಪ 27, ಆತನ ಹೆಂಡತಿ ಶ್ವೇತ(27) ಹಾಗೂ ವೆಂಕಟೇಶ್ ಬಿನ್ ಕುಮಾರ್ (24) ಕೋಣಸಾಲೆ, ಹೆಂಡತಿ ಗೀತಾ ದಂಪತಿಗಳ ಮಕ್ಕಳನ್ನು ಅಧಿಕಾರಿಗಳ ತಂಡ ರಕ್ಷಣೆ ಮಾಡಿ ಮಂಡ್ಯ ತಾಲೂಕು ಯತ್ತಗದಹಳ್ಳಿ ಜ್ಞಾನಸಿಂಧು ವೃದ್ಧಾಶ್ರಮಕ್ಕೆ ಕಳುಹಿಸಿದೆ.
2 ಕುಟುಂಬಗಳನ್ನು ಕಳೆದ 5 ವರ್ಷಗಳಿಂದ ಬಲವಂತವಾಗಿ ಜೀತಕ್ಕಿರಿಸಿಕೊಂಡು ಹೊರಗಿನ ಸಂಪರ್ಕಕ್ಕೆ ಬಿಡದೇ ಬಿಡದಿರುವ ಬಗ್ಗೆ ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ಫೆವಾರ್ಡ್ ಮಂಡ್ಯ)ಕ್ಕೆ ಜೀತ ವಿಮುಕ್ತಿ ಸದಸ್ಯರಿಂದ ಮಾಹಿತಿ ತಿಳಿದು ಬಂದಿದೆ.ಈ ಬಗ್ಗೆ ದೂರು ನೀಡಿದ ಪರಿಣಾಮ ಜಿಲ್ಲಾಧಿಕಾರಿಗಳು, ಉಪವಿಭಾಗಧಿಕಾರಿಗಳಿಗೆ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಮೇರೆಗೆ ಆ.6 ರಂದು ಸಂಜೆ 6.50 ಗಂಟೆಗೆ ಎಸಿ ಶಿವಮೂರ್ತಿ, ತಹಸೀಲ್ದಾರ್ ಕೆ.ಎಸ್.ಸೋಮಶೇಖರ್, ವಿ ಹೆಲ್ಸ್ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ರಾಣಿಚಂದ್ರಶೇಖರ್, ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು, ಹಾಗೂ ಹೊಭಾಳೆ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಸವರಾಜು ಕೋಣಸಾಲೆ ಗ್ರಾಮಕ್ಕೆ ತೆರಳಿ ಪರಿಶೀಲನೆ ಮಾಡಿದೆ.
ಕೋಣಸಾಲೆ ಗ್ರಾಮದ ನಾಗರಾಜು ಪುತ್ರ ಮುರಳಿ (40) ಹಂದಿ ಸಾಕಾಣಿಕಾ ಕೇಂದ್ರ ನಡೆಸುತ್ತಿದ್ದರು. ಈ ಎರಡು ಕುಟುಂಬಗಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು.ಬಿಜಾಪುರ ಜಿಲ್ಲೆಯ ರಮೇಶ ಬಿನ್ ಯಲ್ಲಪ್ಪ (27), ಹೆಂಡತಿ ಶ್ವೇತ (25) , ಇಬ್ಬರು 12 ವರ್ಷ ಮತ್ತು 8 ವರ್ಷದ ಹೆಣ್ಣು ಮಕ್ಕಳಿದ್ದು ಶಾಲೆಗೆ ಹೋಗುತ್ತಿದ್ದು ಇವರನ್ನು ವಿಚಾರಿಸಿದಾಗ ತಮ್ಮಿಂದ ಯಾವುದೇ ಬಲವಂತದ ಕೆಲಸ ಮಾಡಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಆದರೆ, ಮತ್ತೊಂದು ಕುಟುಂಬ ವೆಂಕಟೇಶ್ ಬಿನ್ ಕುಮಾರ್ (24) ಕೋಣಸಾಲೆ, ಹೆಂಡತಿ ಗೀತಾ ಇವರಿಗೆ 4 ಮತ್ತು 3 ವರ್ಷದ ಇಬ್ಬರು ಮಕ್ಕಳಿದ್ದು, ಇವರನ್ನು ವಿಚಾರಿಸಿದಾಗ ಮಾಲೀಕ ಮುರಳಿ ತಮ್ಮನ್ನು 7 ವರ್ಷಗಳಿಂದ ಕೆಲಸಕ್ಕೆ ಇಟ್ಟುಕೊಂಡಿದ್ದು, ಪ್ರತೀ ತಿಂಗಳಿಗೆ ಇಬ್ಬರಿಗೂ ಸೇರಿ 15 ಸಾವಿರ ಸಂಬಳವನ್ನು ಕೊಡುತ್ತಿದ್ದಾರೆ.ಸಾಲವಾಗಿ 1 ಲಕ್ಷ ರು ಕೊಟ್ಟಿದ್ದು ಅದು ಬಡ್ಡಿ ಸೇರಿ 2.35 ಲಕ್ಷ ರು. ಆಗಿದೆ. ತಮಗೆ ಹೊರಗೆ ಹೋಗಲು ಬಿಡದೇ ಬಲವಂತದಿಂದ ಕೆಲಸ ಮಾಡಿಸುತ್ತಿದ್ದಾರೆ. ವಾರಕ್ಕೆ ಒಂದು ಸಾರಿ ಮಾತ್ರ ದವಸ ಧಾನ್ಯಗಳನ್ನು ತರಲು ಗಂಡನನ್ನು ಮಾತ್ರ ಹೊರಗೆ ಬಿಡುತ್ತಿದ್ದಾರೆ. ಕೆಲಸ ಮಾಡದಿದ್ದರೆ ಹೊಡೆಯುವುದು ಮತ್ತು ಬೈಯ್ಯುವುದು ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ನಂತರ ಎಲ್ಲರ ಹೇಳಿಕೆ ಪಡೆದು ಸ್ಥಳ ಮಹಜರ್ ನಡೆಸಿದ ಮೇರೆಗೆ ಸದರಿ ವ್ಯಕ್ತಿಗಳು ಜೀತದಾಳುಗಳಾಗಿ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಮಾಲೀಕರಾದ ಮುರಳಿ, ಕಾರ್ಮಿಕರಾದ ವೆಂಕಟೇಶ ಮತ್ತು ಗೀತಾ ರವರು ಪ.ಜಾತಿಗೆ ಸೇರಿದ್ದಾರೆ. ಆದರೂ ಜೀತ ಪದ್ಧತಿಯಂತೆ ಕೆಲಸ ಮಾಡಿಸುತ್ತಿದ್ದಾರೆ. ಆದ್ದರಿಂದ ಮಾಲೀಕ ಮುರಳಿ ಬಿನ್ ನಾಗರಾಜು ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.