ಯುವ ಸಮುದಾಯದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಅತಿ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಎಐ ತಂತ್ರಜ್ಞಾನ ಹಾಗೂ ಅಂತರ್ಜಾಲದ ಸಾಧಕ ಬಾಧಕಗಳ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು.

ಕನ್ನಡಪ್ರಭ ವಾರ್ತೆ ಗದಗ

ಯುವ ಸಮುದಾಯದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಅತಿ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಎಐ ತಂತ್ರಜ್ಞಾನ ಹಾಗೂ ಅಂತರ್ಜಾಲದ ಸಾಧಕ ಬಾಧಕಗಳ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು. ಸೈಬರ್ ಅಪರಾಧಗಳು ಹಾಗೂ ಅಂತರ್ಜಾಲದ ದುರ್ಬಳಕೆಯಿಂದಾಗುವ ಅಪಾಯಗಳ ಕುರಿತು ಎಚ್ಚರಿಕೆ ವಹಿಸಿ, ಸಮಾಜದಲ್ಲಿ ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಎಸ್ಪಿ ಮಿಥುನ್ ಎಚ್.ಎನ್. ಹೇಳಿದರು.

ಗದಗ ನಗರದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಕಾಲೇಜು ಒಕ್ಕೂಟ, ಜಿಮ್‌ ಖಾನಾ ಹಾಗೂ ಎನ್.ಎಸ್.ಎಸ್. ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎಚ್. ಪಾಟೀಲ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಶಿಸ್ತು, ಬದ್ಧತೆ ಹಾಗೂ ಜ್ಞಾಪಕ ಶಕ್ತಿಯನ್ನು ಹೇಗೆ ವೃದ್ಧಿಸಿಕೊಳ್ಳಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪದ್ಮಾವತಿ ಮಾನೆ ಮಾತನಾಡಿ, ವಿದ್ಯಾರ್ಥಿ ಜೀವನವು ಅತ್ಯಂತ ಅಮೂಲ್ಯವಾಗಿದ್ದು, ಪ್ರತಿಯೊಬ್ಬರೂ ಶಿಸ್ತು ಮತ್ತು ಸಂಯಮವನ್ನು ಕಾಯ್ದುಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಆರ್.ಡಿಪಿಆರ್. ವಿವಿ ಕುಲಪತಿ ಪ್ರೊ. ಡಾ. ಸುರೇಶ್ ವಿ. ನಾಡಗೌಡ ಮಾತನಾಡಿ, ಕಾಲೇಜು ವಿದ್ಯಾರ್ಥಿ ಒಕ್ಕೂಟದ ಮಹತ್ವವನ್ನು ವಿವರಿಸುತ್ತಾ, ವಿದ್ಯಾರ್ಥಿಗಳು ಪುಸ್ತಕದ ಜ್ಞಾನದೊಂದಿಗೆ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಸಮಾಜಕ್ಕೆ ಮಾದರಿಯಾಗುವಂತಹ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಎಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯದ ಅಧ್ಯಕ್ಷರು, ವಕೀಲರು ಹಾಗೂ ಕೆ.ಎಸ್.ಎಲ್.ಯು ಸಿಂಡಿಕೇಟ್ ಕೌನ್ಸಿಲ್ ಸದಸ್ಯ ಎಸ್.ಕೆ. ಪಾಟೀಲ ಮಾತನಾಡಿದರು.

ಇದೇ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತಾರದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಸನ್ಮಾನಿಸಲಾಯಿತು. ಪರಶುರಾಮ ಕಳಗಣ್ಣವರ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಪ್ರಾಂಶುಪಾಲೆ ಪಲ್ಲವಿ ಎಸ್. ಬುಯ್ಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ವಕೀಲರಾದ ಎಸ್.ಕೆ. ನದಾಫ್, ಪ್ರಾಧ್ಯಾಪಕ ಎಸ್.ಐ. ಅಣ್ಣಿಗೇರಿ, ಎಂ.ವಿ. ಹಿರೇಮಠ, ಬಿ.ಎ. ಹಿರೇಮಠ, ಶ್ರೀಕಾಂತ್ ಐಲಿ, ಮಹಾಂತೇಶ್ ಮಡ್ಡಿ, ಬಸಮ್ಮ ಎಚ್., ಚೈತ್ರಾ ಗೌಡರ, ನಿವೇದಿತಾ ಮಾಲಿಪಾಟೀಲ, ರೇಷ್ಮಾ ಲಕ್ಷ್ಮೇಶ್ವರ, ನೀಲಾಂಬಿಕಾ ಹಿರೇಮಠ, ಸಾಂಸ್ಕೃತಿಕ ವಿಭಾಗದ ಸಂಯೋಜಕ ನಾಜಿಮಾ ಮುಲ್ಲಾ ಮತ್ತು ನಿಸಾರ್ ಅಹಮದ್, ವಿದ್ಯಾರ್ಥಿ ಪ್ರತಿನಿಧಿ ಸಕ್ರಪ್ಪ ಗೌಡರ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಕಾನೂನು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಇಂದಿನ ಯುವಜನತೆ ಕೃತಕ ಬುದ್ಧಿಮತ್ತೆ ಹಾಗೂ ಅಂತರ್ಜಾಲವನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಅದರ ಲಾಭ-ಹಾನಿಗಳನ್ನು ಅರಿತು ಕಾನೂನಿನ ಚೌಕಟ್ಟಿನಲ್ಲಿ ಜವಾಬ್ದಾರಿಯುತವಾಗಿ ಬಳಸಬೇಕು.

ಮಿಥುನ್ ಎಚ್.ಎನ್. ಎಸ್ಪಿ