ಸಾರಾಂಶ
ಹಾವೇರಿ: ನಗರದ ಹುಕ್ಕೇರಿಮಠದ ಲಿಂ. ಶಿವಬಸವ ಸ್ವಾಮಿಗಳ 79ನೇ ಮತ್ತು ಲಿಂ. ಶಿವಲಿಂಗ ಸ್ವಾಮಿಗಳ 16ನೇ ಪುಣ್ಯಸ್ಮರಣೆಯ ನಮ್ಮೂರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ಮಠದಲ್ಲಿ ಲಿಂಗೈಕ್ಯ ಉಭಯ ಶ್ರೀಗಳ ಗದ್ದುಗೆಗೆ, ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವೈವಿಧ್ಯಮಯ ಹೂಗಳಿಂದ ಆಕರ್ಷಕ ರೀತಿಯಲ್ಲಿ ಶೃಂಗಾರ ಮಾಡಲಾಗಿತ್ತು. ಬೆಳಗ್ಗೆಯೇ ಮಠದಲ್ಲಿ ಮಹಾ ರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ ಬಳಿಕ ಮಹಾಗಣಾರಾಧನೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬೆಳಗ್ಗೆಯಿಂದಲೇ ನೈವೇದ್ಯ ಮಾಡಿಕೊಂಡು ಮಠಕ್ಕೆ ಬಂದು ಉಭಯ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಸದಾಶಿವ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.ಸಂಜೆ 4ಕ್ಕೆ ಮಠದ ಆವರಣದಿಂದ ಆರಂಭವಾದ ಲಿಂ. ಶಿವಬಸವ ಶ್ರೀ ಹಾಗೂ ಲಿಂ. ಶಿವಲಿಂಗ ಶ್ರೀಗಳ ಭಾವಚಿತ್ರ ಮೆರವಣಿಗೆ ವಿವಿಧ ವಾದ್ಯ ವೈಭವಗಳೊಂದಿಗೆ ಆರಂಭಗೊಂಡಿತು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು. ಶ್ರೀಮಠದ ಆವರಣದಿಂದ ಹೊರಟ ಮೆರವಣಿಗೆ ಎಂ.ಜಿ. ರಸ್ತೆ ಮೂಲಕ ಮೇಲಿನಪೇಟೆ, ಹಳೇ ಅಂಚೆ ಕಚೇರಿ ರಸ್ತೆ, ಹಳವೂರು, ಹಳೆ ಅಂಚೆ ಕಚೇರಿ ರಸ್ತೆ, ಹಳೆ ಎಸ್‌ಪಿ ಕಚೇರಿ ರಸ್ತೆ, ಕಲ್ಲು ಮಂಟಪ ರಸ್ತೆ, ಚಂದ್ರಾಪಟ್ಟಣ, ಅಕ್ಕಿಪೇಟೆ, ಏಲಕ್ಕಿ ಓಣಿ, ಪುರದ ಓಣಿ ಮೂಲಕ ಶ್ರೀಮಠಕ್ಕೆ ಮರಳಿತು. ರಥ ಸಂಚರಿಸಿದ ಮಾರ್ಗದುದ್ದಕ್ಕೂ ಭಕ್ತರು ನೀರು ಹಾಕಿ, ರಂಗೋಲಿ ಬಿಡಿಸಿ ಮೆರವಣಿಗೆಗೆ ಸ್ವಾಗತ ಕೋರಿದರು. ಮಾರ್ಗದುದ್ದಕ್ಕೂ ಭಕ್ತರು ಉಭಯ ಶ್ರೀಗಳಿಗೆ ಪುಷ್ಪಾರ್ಚನೆ ಮಾಡಿ, ಕೈಮುಗಿದು ಧನ್ಯತಾ ಭಾವ ವ್ಯಕ್ತಪಡಿಸಿದರು. ರಾತ್ರಿ 12ರ ವರೆಗೂ ಮಠದತ್ತ ಭಕ್ತಸಾಗರ ಹರಿದುಬಂದಿತು.
ಮಧ್ಯಾಹ್ನ 12ರಿಂದ ರಾತ್ರಿ 12ರ ವರೆಗೂ ಪ್ರಸಾದ ವಿತರಣೆ ನಡೆಯಿತು. ಹುಕ್ಕೇರಿಮಠದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಭಕ್ತರು ಸೇರಿದಂತೆ ನೂರಾರು ಸ್ವಯಂಸೇವಕರು ಈ ಜಾತ್ರಾ ಮಹೋತ್ಸವ ನಿರ್ವಹಣೆಯಲ್ಲಿ ಪಾಲ್ಗೊಂಡರು.ವಿವಿಧ ಕಲಾ ತಂಡಗಳ ಮೆರುಗು: ಮೆರವಣಿಯಲ್ಲಿ ವೈವಿಧ್ಯಮಯ ಕಲಾ ತಂಡಗಳು ಪಾಲ್ಗೊಳ್ಳುವ ಮೂಲಕ ಮೆರವಣಿಗೆ ಮೆರಗು ಹೆಚ್ಚಿಸಿದವು. ಮೆರವಣಿಗೆಯಲ್ಲಿ ಆನೆ, ಸ್ತಬ್ಧ ಚಿತ್ರಗಳು ಸೇರಿದಂತೆ 10ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು. ತಮಿಳುನಾಡು ಜಾಂಜ್ ಮೇಳ, ಮಹಿಳಾ ತಾಳ ಮೇಳ, ಡೊಳ್ಳು ಕುಣಿತ, ನಂದಿಕೋಲು ಕುಣಿತ, ಸಮಾಳ ಮೇಳ (ಪುರವಂತಿಕೆ), ರಾಣಿಬೆನ್ನೂರಿನ ಬ್ಯಾಂಡ್ ಸೆಟ್, ಇಜಾರಿಲಕಮಾಪುರದ ಜಾಂಜ್ ಮೇಳ, ಜಮಖಂಡಿಯ ಕರಡಿ ಮಜಲು, ಹುಕ್ಕೇರಿಮಠದ ಸದಾಶಿವ ಗೊಂಬೆ ಬಳಗ ಸೇರಿದಂತೆ ವಿವಿಧ ಕಲಾ ತಂಡಗಳು ಅದ್ಧೂರಿ ಮೆರವಣಿಗೆಗೆ ಸಾಕ್ಷಿಯಾದವು.