ಬಸವನಬಾಗೇವಾಡಿ ಪಟ್ಟಣದ ಉತ್ತರಾದಿ ಮಠದಲ್ಲಿ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವದ ನಿಮಿತ್ತ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಉತ್ತರಾದಿ ಮಠದಲ್ಲಿ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವದ ನಿಮಿತ್ತ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀಮಠವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.ಪ್ರತಿ ದಿನ ಕ್ಷೀರಾಭಿಷೇಕ ವಿಶೇಷ ಅಲಂಕಾರ, ಮಹಾಮಂಗಳಾರತಿ ಪಲ್ಲಕ್ಕಿ ಸೇವೆ ಹಾಗೂ ತೀರ್ಥಪ್ರಸಾದ ಮುಂತಾದ ಸೇವೆಗಳನ್ನು ವಿಜೃಂಭಣೆಯಿಂದ ನಡೆಸಲಾಯಿತು. ಜೊತೆಗೆ ಸಂಜೆ ಪಂಚ ಸುಳಾದಿ, ಪಲ್ಲಕ್ಕಿ ಉತ್ಸವ, ಸಂಗೀತ ಸೇವೆ, ಅಷ್ಟಾವಧಾನ ಸೇವೆ, ತೊಟ್ಟಲು ಸೇವೆ ಹಾಗೂ ಸ್ವಸ್ತಿವಾಚನಗಳು ಜರುಗಿದವು.
ಅರ್ಚಕ ವಾದಿರಾಜಾಚಾರ್ಯ ಯಜುರ್ವೇದಿ ಅವರ ನೇತೃತ್ವದಲ್ಲಿ ರಾಯರ ವೃಂದಾವನಕ್ಕೆ ಕ್ಷೀರಾಭಿಷೇಕ, ತುಳಸಿ ಅರ್ಚನೆ, ವಿಶೇಷ ಅಲಂಕಾರ ಹಾಗೂ ಅಷ್ಟೋತ್ತರ ಮುಂತಾದ ಕಾರ್ಯಕ್ರಮ ನಡೆದವು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಯರ ಅಷ್ಟೋತ್ತರಕ್ಕಿರುವ ಅಗಮ್ಯ ಮಹಿಮೆ ಕೊಂಡಾಡುತ್ತ ಅವರ ಅನುಗ್ರಹ ಎಲ್ಲ ಭಕ್ತರಿಗೂ ದೊರಕುವಂತಾಗಲಿ ಎಂದು ಪ್ರಾರ್ಥಿಸಿದರು.ಉತ್ತರಾರಾಧನೆಯ ದಿನ ವೈಭವದಿಂದ ರಾಯರ ಜಯಘೋಷ ಹಾಗೂ ಭಜನೆಯೊಂದಿಗೆ ರಥೋತ್ಸವ ನಡೆಯಿತು. ಶ್ರೀಮಠದ ಅಧ್ಯಕ್ಷ ವಸಂತಾಚಾರ್ಯ ಇಂಗಳೇಶ್ವರ ಅವರು ತಮ್ಮ ತಂದೆ-ತಾಯಿ ಹಾಗೂ ಧರ್ಮಪತ್ನಿಯ ಸ್ಮರಣಾರ್ಥವಾಗಿ ಶ್ರೀಮಠಕ್ಕೆ ಫ್ರಿಡ್ಜ್ ನ್ನು, ಪ್ರಲ್ಹಾದ ವಿಠಲರಾವ ಕುಲಕರ್ಣಿ (ಬೆಂಗಳೂರು) ಅವರು ರಾಯರ ವೃಂದಾವನಕ್ಕೆ ಬೆಳ್ಳಿಯ ಹಾರ ಹಾಗೂ ರಾಮ ಗುರುರಾಜ ಕುಲಕರ್ಣಿ (ಬೆಂಗಳೂರು) ಅವರು ಬೆಳ್ಳಿಯ ಸಮೆಗಳನ್ನು ದೇಣಿಗೆಯಾಗಿ ನೀಡಿದರು.
ಮೂರು ದಿನಗಳ ಅನ್ನಸಂತರ್ಪಣೆ ಹಾಗೂ ಸಮಸ್ತ ಸೇವಾ ಕೈಂಕರ್ಯಗಳನ್ನು ಸದ್ಭಕ್ತರಾದ ಎ.ಆರ್.ಕುಲಕರ್ಣಿ, ಎಂ.ಜಿ.ಕುಲಕರ್ಣಿ, ಅನಿಲ ಕುಲಕರ್ಣಿ, ಆನಂದ ಕುಲಕರ್ಣಿ, ಮಧುಕರ ಚೌಧರಿ, ಕುಲಕರ್ಣಿ ಪರಿವಾರ (ಮರ್ಚೆಂಟ್) ಸದ್ಭಕ್ತರು ನೆರವೇರಿಸಿದರು. ಕಮಿಟಿಯ ಎಲ್ಲ ಪದಾಧಿಕಾರಿಗಳು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಭಕ್ತವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾದರು.