ನಂದಿನಿ ಡೇರಿಯಿಂದ ಬನ್ನೂರು ಮುಖ್ಯರಸ್ತೆ ಮಾರ್ಗವಾಗಿ ಟೆರಿಷಿಯನ್ ಕಾಲೇಜು ವೃತ್ತ, ನೂತನ ಜಿಲ್ಲಾಧಿಕಾರಿ ಕಚೇರಿ ರಸ್ತೆ, ನಜರಬಾದ್ ಪೊಲೀಸ್ ಠಾಣೆ ಮಾರ್ಗವಾಗಿ ಕುಪ್ಪಣ್ಣ ಪಾರ್ಕ್ ನಲ್ಲಿ ಮೆರವಣಿಗೆ

ಕನ್ನಡಪ್ರಭ ವಾರ್ತೆ ಮೈಸೂರು "ನಮ್ಮ ನಂದಿನಿ ನಮ್ಮ ಹೆಮ್ಮೆ ", "ನಂದಿನಿ ಹಾಲು ಬಳಸಿ ರೈತರ ಹಿತ ಕಾಪಾಡಿ ", "ಕ್ಷೀರಕ್ರಾಂತಿಯ ಪಿತಾಮಹ ಡಾ. ವರ್ಗೀಸ್ ಕುರಿಯನ್ " ಇಂತಹ ನೂರಾರು ನಾಮಫಲಕಗಳನ್ನು ಹಿಡಿದು ಸಾರೋಟು ಹಾಗೂ ದ್ವಿಚಕ್ರವಾಹನಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಮೈಸೂರಿನಲ್ಲಿ ಸೋಮವಾರ ವಿಶ್ವ ಹಾಲು ದಿನವನ್ನು ಸಂಭ್ರಮಿಸಲಾಯಿತು.ನಗರದ ಆಲನಹಳ್ಳಿ ಬಡಾವಣೆಯಲ್ಲಿರುವ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿಯಮಿತ (ಮೈಮುಲ್) ಕಚೇರಿಯಿಂದ ವಿಶ್ವ ಹಾಲು ದಿನದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾ ಮೆರವಣಿಗೆಗೆ ಒಕ್ಕೂಟದ ಆಡಳಿತಾಧಿಕಾರಿ ಸಿ. ಪ್ರಸಾದ್ ರೆಡ್ಡಿ ಚಾಲನೆ ನೀಡಿದರು.ನಂದಿನಿ ಡೇರಿಯಿಂದ ಬನ್ನೂರು ಮುಖ್ಯರಸ್ತೆ ಮಾರ್ಗವಾಗಿ ಟೆರಿಷಿಯನ್ ಕಾಲೇಜು ವೃತ್ತ, ನೂತನ ಜಿಲ್ಲಾಧಿಕಾರಿ ಕಚೇರಿ ರಸ್ತೆ, ನಜರಬಾದ್ ಪೊಲೀಸ್ ಠಾಣೆ ಮಾರ್ಗವಾಗಿ ಕುಪ್ಪಣ್ಣ ಪಾರ್ಕ್ ನಲ್ಲಿ ಮೆರವಣಿಗೆ ಅಂತ್ಯಗೊಂಡಿತು.ಏಳು ಸಾರೋಟಗಳಲ್ಲಿ ನಂದಿನ ಉತ್ಪನ್ನದ ಭಿತ್ತಿ ಪತ್ರದ ಮೂಲಕ ಹಾಲಿನ ಮಹತ್ವಗಳ ಕುರಿತು ಅರಿವು ಮೂಡಿಸಲಾಯಿತು. ಅಲ್ಲದೆ, ಮೈಮುಲ್‌ ನ ಸಾವಿರಾರು ಮಂದಿ ದ್ವಿಚಕ್ರವಾಹನದಲ್ಲೂ ಮೆರವಣಿಗೆ ನಡೆಸಿ ಅರಿವು ಮೂಡಿಸುವ ಪ್ರಯತ್ನ ನಡೆಸಿದರು. ಪೌಷ್ಠಿಕಾಂಶಕ್ಕೆ ಹಾಲು ಮುಖ್ಯಈ ವೇಳೆ ಒಕ್ಕೂಟದ ಆಡಳಿತಾಧಿಕಾರಿ ಸಿ. ಪ್ರಸಾದ್ ರೆಡ್ಡಿ ಮಾತನಾಡಿ, 2001 ರಿಂದ ವಿಶ್ವಸಂಸ್ಥೆಯಿಂದ ವಿಶ್ವದಾದ್ಯಂತ ವಿಶ್ವ ಹಾಲು ದಿನ ಆಚರಿಸಿಕೊಂಡು ಬರುತ್ತಿದ್ದೇವೆ. ಇಂದು ಆರೋಗ್ಯ ಅತಿಮುಖ್ಯವಾಗಿದೆ. ಆರೋಗ್ಯವಾಗಿರಲು ಪೌಷ್ಠಿಕಾಂಶ ಬಹುಮುಖ್ಯವಾಗಿದೆ. ಅಂತಹ ಪೌಷ್ಠಿಕಾಂಶ ಸಿಗಲು ಹಾಲು ಬಹು ಮುಖ್ಯವಾಗಿದೆ. ಆರೋಗ್ಯವಾಗಿ ಇದ್ದಾಗ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬರಲ್ಲೂ ಹಾಲಿನ ಮಹತ್ವದ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಹಾಲು ಒಂದು ಸಂಪೂರ್ಣ ಆಹಾರಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಸುರೇಶ್ ನಾಯ್ಕ್ ಮಾತನಾಡಿ, ವಿಶ್ವದಾದ್ಯಂತ ಹಾಲಿನ ಉತ್ಪಾದನೆ ಹೆಚ್ಚಳ ಆಗುತ್ತಿದೆ. ಹಾಲು ಎಂದರೆ ರೈತರು ಎಂದರ್ಥ, ಅವರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಉತ್ಪಾದನೆಯಾದ ಹಾಲನ್ನು ಬಳಸುವುದಕ್ಕೆ ಜನರಲ್ಲಿ ಹಾಲಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ಹಾಲು ಒಂದು ಸಂಪೂರ್ಣ ಆಹಾರವಾಗಿದೆ. ಹಾಲಿನಲ್ಲಿ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಅಂಶಗಳು ಇವೆ. ಒಂದೊಂದು ಧಾನ್ಯದಲ್ಲಿ ಒಂದೊಂದು ವಿಟಮಿನ್ ಇದೆ. ಆದರೆ, ಹಾಲಿನಲ್ಲಿ ಸಂಪೂರ್ಣ ವಿಟಮಿನ್ ಇದೆ. ಎಲ್ಲಾ ಪೋಷಕಾಂಶಗಳು ಒಟ್ಟಾಗಿರುವ ಕಾರಣಕ್ಕಾಗಿ ಹಾಲನ್ನು ಒಂದು ಸಂಪೂರ್ಣ ಗುಣಮಟ್ಟದ ಆಹಾರ ಎನ್ನಲಾಗುತ್ತಿದೆ ಎಂದರು. ಮೈಸೂರು ಜಿಲ್ಲೆಯಾದ್ಯಂತ 5.50 ಲಕ್ಷ ಜಾನುವಾರುಗಳು ಹಾಲಿನ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾವೆ. ನಗರದಲ್ಲಿ ಯಾಕೆ ಹಾಲಿನ ಉತ್ಪಾದನೆ ಹೆಚ್ಚು ಎಂದರೆ ನಗರ ಭಾಗದಲ್ಲಿ ಜನಸಂದಣಿ ಹೆಚ್ಚಾಗಿದೆ. ಗ್ರಾಮಾಂತರ ಭಾಗದಲ್ಲಿ ಮೊದಲು ಮನೆ ಹಾಗೂ ಸ್ಥಳೀಯರಲ್ಲಿ ಬಳಸಿಕೊಂಡು ಉಳಿದಿದ್ದನ್ನು ಮಾರುಕಟ್ಟೆಗೆ ನೀಡುತ್ತಾರೆ. ಹೀಗಾಗಿ ಉಳಿಯುವ ಹಾಲನ್ನು ಸ್ಥಳೀಯವಾಗಿ ಬಳಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು.ಮೈಮುಲ್ ಆಡಳಿತ ವಿಭಾಗ ವ್ಯವಸ್ಥಾಪಕಿ ಸೌಮ್ಯಾ ಮಾತನಾಡಿ, ಹೆಚ್ಚು ನಂದಿನಿ ಉತ್ಪನ್ನಗಳನ್ನು ಬಳಸಿದಷ್ಟು ರೈತರ ಹಿತ ಕಾಪಾಡಿದಂತೆ ಆಗುತ್ತದೆ. ನಮ್ಮಲ್ಲಿ 300 ಹೆಚ್ಚು ಮಹಿಳಾ ಸೊಸೈಟಿಗಳು ನಡೆಸುತ್ತಿರುವುದೇ ಮಹಿಳಾ ಸಬಲೀಕರಣಕ್ಕೆ ಉದಾಹರಣೆಯಾಗಿದೆ. ಮೈಸೂರು ಡೇರಿಯಲ್ಲೂ ಅತಿ ಹೆಚ್ಚು ಮಹಿಳಾ ಸಿಬ್ಬಂದಿಗಳಿರುವ ಮೂಲಕ ಮಹಿಳಾ ಸಬಲೀಕರಣ ಆಗಿದೆ. ಅದೇ ರೀತಿ ಸಮಾಜದ ಎಲ್ಲಾ ಕಡೆಗಳಲ್ಲಿಯೂ ಮಹಿಳಾ ಸಬಲೀಕರಣ ಆಗಬೇಕಿದೆ ಎಂದರು.ಮೈಮುಲ್ ಎಂಜಿನಿಯರಿಂಗ್ ವಿಭಾಗದ ವ್ಯವಸ್ಥಾಪಕಿ ಗಿರಿಜಾ ಮಾತನಾಡಿ, ಪ್ರತಿಯೊಬ್ಬರು ನಿತ್ಯ ನಂದಿನಿ ಹಾಲನ್ನೇ ಹೆಚ್ಚಾಗಿ ಬಳಸುವ ಮೂಲಕ ರೈತರನ್ನು ಬೆಳೆಸಬೇಕಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ನಂದಿನಿ ಉತ್ಪನ್ನಗಳನ್ನು ನಿಮ್ಮ ಕಾರ್ಯಕ್ರಮಗಳಲ್ಲಿ ಇತರರಿಗೂ ಬಳಸುವಂತೆ ಹೇಳಿ ಎಂದು ಕೋರಿದರು. ಮೈಮುಲ್ ಪ್ರಧಾನ ವ್ಯವಸ್ಥಾಪಕ ಜಯಶಂಕರ್, ವ್ಯವಸ್ಥಾಪಕರಾದ ಕರಿ ಬಸವರಾಜು, ಬಬಿತಾ, ಉಪ ವ್ಯವಸ್ಥಾಪಕರು, ಅಧಿಕಾರಿಗಳು, ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.----ಕೋಟ್...ಕೆಲವು ಖಾಸಗಿ ಸಂಘಟನೆಗಳಿಂದ ಹಾಲಿನ ಕಲಬೆರೆಕೆ ಆಗುತ್ತಿದೆ. ನಂದಿನಿಯಲ್ಲಿ ಶೇ.100 ರಷ್ಟು ಶುದ್ಧವಾಗಿದೆ. ಹಾಲು ಪ್ರಪಂಚದಲ್ಲಿಯೇ ಮೂರನೇ ಬ್ರಾಂಡ್ ಆಗಿ ಮಹತ್ವ ಪಡೆದಿದೆ. ವಿಶ್ವದಲ್ಲೇ ಅತಿಹೆಚ್ಚು ಹಾಲು ಉತ್ಪಾದನೆಯಲ್ಲಿ ದೇಶ ಮೊದಲ ಸ್ಥಾನದಲ್ಲಿದೆ.- ಸಿ. ಪ್ರಸಾದ್ ರೆಡ್ಡಿ, ಆಡಳಿತಾಧಿಕಾರಿ, ಮೈಮುಲ್----ಆರ್ ಸಿಬಿ ಕ್ರಿಕೆಟ್ ತಂಡ ನಮ್ಮ ನಂದಿನಿ ಪ್ರಾಯೋಜಕತ್ವ ಬಳಸಿಕೊಂಡ ಬಳಿಕ ಅವರಿಗೆ ಅದೃಷ್ಠ ಹೆಚ್ಚಾಗಿ ವಿಜಯಶಾಲಿಯಾಗಿರುವುದು ನಮ್ಮ ನಂದಿನಿ ನಮ್ಮ ಹೆಮ್ಮೆ ಎಂಬಂತೆ ಗೌರವ ಹೆಚ್ಚಿಸಿದೆ. ಆರ್ ಸಿಬಿ ಗೆಲುವಿನ ಶಕ್ತಿ ಹಿಂದೆ ನಂದಿನಿಯ ಶಕ್ತಿಯಿದೆ.- ಕೆ.ಎನ್. ಸುರೇಶ್ ನಾಯ್ಕ್, ಎಂಡಿ, ಮೈಮುಲ್