೨೦೧೮ ರಲ್ಲೇ ಎಚ್ಚರಿಸಿದ್ದ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ..!

| Published : Jan 09 2024, 02:00 AM IST

೨೦೧೮ ರಲ್ಲೇ ಎಚ್ಚರಿಸಿದ್ದ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ..!
Share this Article
  • FB
  • TW
  • Linkdin
  • Email

ಸಾರಾಂಶ

ಗಣಿ ಲಾಭಿಗೆ ಮಣಿದಿದ್ದ ರಾಜ್ಯ ಸರ್ಕಾರ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದ್ದ ವರದಿಯನ್ನು ಮುಚ್ಚಿಟ್ಟಿತ್ತು. ಅದನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಪ್ರಯತ್ನ ಮಾಡಲೂ ಇಲ್ಲ. ಈ ವರದಿಯನ್ವಯ ಕೆಆರ್‌ಎಸ್‌ ಅಣೆಕಟ್ಟು ಸುತ್ತ ಗಣಿ ಚಟುವಟಿಕೆ ನಿಷೇಧಿಸುವುದಕ್ಕೂ ಮುಂದಾಗಲಿಲ್ಲ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಗಣಿಗಾರಿಕೆಗೆ ಅವಕಾಶ ನೀಡುತ್ತಲೇ ಬಂದಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯಕೃಷ್ಣರಾಜಸಾಗರ ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಜಲಾಶಯ ಸುತ್ತ ೨೦ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲ ಗಣಿ ಚಟುವಟಿಕೆಗಳನ್ನು ನಿಷೇಧಿಸುವಂತೆ ಕೆಆರ್‌ಎಸ್ ಬಳಿ ಸ್ಥಾಪಿಸಲಾಗಿರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ೨೦೧೮ರಲ್ಲೇ ಜಿಲ್ಲಾಡಳಿತಕ್ಕೆ ವರದಿ ನೀಡಿ ಎಚ್ಚರಿಸಿತ್ತು.

ಕೆಆರ್‌ಎಸ್ ಸುತ್ತಮುತ್ತ ೨೦೧೮ರ ಸೆ.೨೫ರಂದು ಸಂಭವಿಸಿದ್ದ ಗಣಿ ಸ್ಫೋಟ ಭಾರೀ ನಡುಕ ಹುಟ್ಟಿಸಿತ್ತು. ಪಾಂಡವಪುರ ತಾಲೂಕು ಬೇಬಿ ಬೆಟ್ಟದ ಕಾವಲ್ ಪ್ರದೇಶದಲ್ಲಿ ಗಣಿ ಸ್ಫೋಟ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಸುರಕ್ಷತೆ ಕುರಿತು ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳುವುದು ಹಾಗೂ ಅಣೆಕಟ್ಟೆ ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಸರ್ವೆ ನಡೆಸಿ ಅಣೆಕಟ್ಟೆಗೆ ಅಪಾಯ ಸೃಷ್ಟಿಸುವ ಎಲ್ಲ ರೀತಿಯ ಗಣಿ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ ರೆಡ್ಡಿ ನಿರ್ದೇಶನ ನೀಡಿದ್ದರು.

ಸೆ.೨೫ರಂದು ಮಧ್ಯಾಹ್ನ ೨.೪೦ರ ಸಮಯದಲ್ಲಿ ೬ ಸೆಕೆಂಡ್‌ಗಳ ಅಂತರದಲ್ಲಿ ಎರಡು ಬಾರಿ ಬೇಬಿ ಬೆಟ್ಟಲ್ ಕಾವಲ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿತ್ತು ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿಖರವಾಗಿ ಗುರುತಿಸಿತ್ತು. ಅಲ್ಲದೆ, ಉಪಗ್ರಹ ಚಿತ್ರಗಳು ಹಾಗೂ ಕಂಪನದ ಪ್ರಮಾಣ ದಾಖಲಾಗಿರುವ ಚಿತ್ರಗಳನ್ನು ವರದಿಯೊಂದಿಗೆ ಬಿಡುಗಡೆ ಮಾಡಿತ್ತು.

ಕೆಆರ್‌ಎಸ್ ಅಣೆಕಟ್ಟೆಯಿಂದ ೧೦.೫ ಕಿ.ಮೀ. ಅಂತರದಲ್ಲಿ ಈ ಸ್ಫೋಟ ಸಂಭವಿಸಿರುವುದಾಗಿ ತಿಳಿಸಿತ್ತಲ್ಲದೇ, ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಕಾವಲ್ ಪ್ರದೇಶದಲ್ಲೇ ಎರಡೂ ಸ್ಫೋಟಗಳು ಉಂಟಾಗಿವೆ. ಕೇವಲ ಆರು ಸೆಕೆಂಡ್ ಅಂತರದಲ್ಲಿ ಎರಡು ಗಣಿ ಸ್ಫೋಟ ಸಂಭವಿಸಿದೆ. ಒಂದು ಸ್ಫೋಟ ಮಧ್ಯಾಹ್ನ ೨ ಗಂಟೆ ೩೭ ನಿಮಿಷ ೨೧ ಸೆಕೆಂಡ್‌ಗೆ ಸಂಭವಿಸಿದರೆ, ಮತ್ತೊಂದು ಸ್ಫೋಟ ೨ ಗಂಟೆ ೩೭ ನಿಮಿಷ ೨೭ ಸೆಕೆಂಡ್‌ಗೆ ಸಂಭವಿಸಿದೆ. ಬದಲಾದ ತೀವ್ರತೆಯಿಂದ ಅದರ ಪ್ರಮಾಣವನ್ನು ಗಮನಿಸಲು ಸಾಧ್ಯವಾಗಿಲ್ಲ ಎಂದು ಹೇಳಿತ್ತು.

ಕೆಆರ್‌ಎಸ್ ಬಳಿ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸ್ಥಾಪನೆಯಾದಂದಿನಿಂದ ಸ್ಫೋಟ ಸಂಭವಿಸಿದ ಸೆ.೨೫ರವರೆಗೆ ಈ ಪ್ರಮಾಣದ ಸ್ಫೋಟದ ತೀವ್ರತೆ ಎಂದೂ ಸಹ ದಾಖಲಾಗಿರಲಿಲ್ಲ. ಇದು ಗಣಿಗಾರಿಕೆ ಪ್ರದೇಶದಲ್ಲಿ ನಡೆದ ಸ್ಫೋಟದಿಂದ ಉಂಟಾಗಿರುವ ಶಬ್ಧ. ಇದಕ್ಕಾಗಿ ತೀವ್ರ ಪ್ರಮಾಣದ ಸ್ಫೋಟಕವನ್ನು ಬಳಕೆ ಮಾಡಲಾಗಿದೆ ಎಂದು ಹೇಳಿತ್ತು.

ಕೆಆರ್‌ಎಸ್ ಸುತ್ತ ನಡೆಯುತ್ತಿರುವ ಗಣಿಗಾರಿಕೆ ಹಾಗೂ ಸ್ಫೋಟದಿಂದ ಅಣೆಕಟ್ಟೆಗೆ ಅಪಾಯ ಉಂಟಾಗಿದೆಯೇ ಇಲ್ಲವೇ ಎಂಬುದನ್ನು ಈಗಲೇ ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳುವುದು ಉತ್ತಮ. ಏಕೆಂದರೆ. ಕೃಷ್ಣರಾಜಸಾಗರ ಜಲಾಶಯ ನಿರ್ಮಾಣಗೊಂಡು ೮೦ ವರ್ಷ ಕಳೆದಿದೆ. ಈ ಅಣೆಕಟ್ಟೆಯಿಂದ ನೂರಾರು ನಗರಗಳಿಗೆ ನೀರು ಪೂರೈಕೆಯಾಗುತ್ತಿದೆ. ಕರ್ನಾಟಕ ಹಾಗೂ ತಮಿಳುನಾಡಿನ ರೈತರ ವ್ಯವಸಾಯಕ್ಕೆ ಅನುಕೂಲ ಕಲ್ಪಿಸಿಕೊಟ್ಟಿದೆ. ಗಣಿಗಾರಿಕೆಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ಪರಿಶೀಲನೆ ನಡೆಸುವುದು ಉತ್ತಮ ಎಂದು ಸಲಹೆ ನೀಡಿತ್ತು.

ಕೆಆರ್‌ಎಸ್ ಅಣೆಕಟ್ಟು ಸುರಕ್ಷಾ ಸಮಿತಿಯನ್ನು ರಚನೆ ಮಾಡಿ ಅಣೆಕಟ್ಟು ಸುತ್ತಲಿನ ೨೦ ಕಿ.ಮೀ. ಸುತ್ತಳತೆಯಲ್ಲಿ ವೀಕ್ಷಣೆ ನಡೆಸಿ ಸರ್ವೆ ಮಾಡುವ ಮೂಲಕ ಅಣೆಕಟ್ಟೆಗೆ ಅಪಾಯ ಉಂಟುಮಾಡುವ ಎಲ್ಲ ರೀತಿಯ ಚಟುವಟಿಕೆಗಳನ್ನು ನಿಯಂತ್ರಿಸಬೇಕು ಎಂದು ನಿರ್ದೇಶನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಚ್ಚಿಟ್ಟಿದ್ದ ಸರ್ಕಾರ:

ಗಣಿ ಲಾಭಿಗೆ ಮಣಿದಿದ್ದ ರಾಜ್ಯಸರ್ಕಾರ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದ್ದ ವರದಿಯನ್ನು ಮುಚ್ಚಿಟ್ಟಿತ್ತು. ಅದನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಪ್ರಯತ್ನ ಮಾಡಲೂ ಇಲ್ಲ. ಈ ವರದಿಯನ್ವಯ ಕೆಆರ್‌ಎಸ್‌ ಅಣೆಕಟ್ಟು ಸುತ್ತ ಗಣಿ ಚಟುವಟಿಕೆ ನಿಷೇಧಿಸುವುದಕ್ಕೂ ಮುಂದಾಗಲಿಲ್ಲ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಗಣಿಗಾರಿಕೆಗೆ ಅವಕಾಶ ನೀಡುತ್ತಲೇ ಬಂದಿತ್ತು.

ಎರಡು ಬಾರಿ ಪರೀಕ್ಷಾರ್ಥ ಸ್ಫೋಟ ರದ್ದು೨೦೧೮ರ ಸೆ.೨೫ರಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯಗಳಿರುವ ಸಾಧ್ಯತೆ ಕುರಿತು ವರದಿ ನೀಡಿದ ನಂತರ ೨೯ ಜನವರಿ ೨೦೧೯ರಂದು ಸೆಂಟ್ರಲ್ ವಾಟರ್ ಅಂಡ್ ಪವರ್ ರೀಸರ್ಚ್ ಸ್ಟೆಷನ್ ಪುಣೆ ವಿಜ್ಞಾನಿಗಳ ತಂಡ ಪ್ರಾಯೋಗಿಕ ಸ್ಫೋಟ ಪರೀಕ್ಷೆಗೆ ಆಗಮಿಸಿತ್ತು.ಪ್ರಯೋಗಾತ್ಮಕ ಪರೀಕ್ಷೆಗೆ ಆಗಮಿಸಿದ್ದ ಹುಲಿಕೆರೆ ಬಳಿ ಇರುವ ಹೆರಿಟೇಜ್ ಶೆಲ್ಟರ್ ಹೋಟೆಲ್‌ನಲ್ಲಿ ತಂಗಿದ್ದರು. ಕೆಆರ್‌ಎಸ್ ಉಳಿಸಿ ಜನಾಂದೋಲನ ಸಮಿತಿಯವರ ತೀವ್ರ ವಿರೋಧದಿಂದ ಸೆಂಟ್ರಲ್ ವಾಟರ್ ಅಂಡ್ ಪವರ್ ರೀಸರ್ಚ್ ಸ್ಟೆಷನ್ ವಿಜ್ಞಾನಿಗಳಾದ ಎ.ಕೆ ಘೋಷ್, ವಿಜಯಘೋಡ್ಕೆ, ರಿಸರ್ಚ್ ಅಸಿಸ್ಟೆಂಟ್ ರಾಜೇಂದ್ರ ಗುರ್ಜಾರ್, ಲ್ಯಾಬ್ ಟೆಕ್ನಿಷಿಯನ್ ನಿಖಿಲ್ ತರಾಡೆ ಹೋಟೆಲ್ ಬಿಟ್ಟು ಹೊರ ಬರಲಿಲ್ಲ. ಪರೀಕ್ಷೆ ನಡೆಸದೆ ವಾಪಸಾಗಿದ್ದರು. ಮತ್ತೆ ೨೦೨೨ರ ಜುಲೈ ೨೫ ರಿಂದ ೩೧ರವರೆಗೆ ಬೇಬಿ ಬೆಟ್ಟದಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಲು ರಾಜ್ಯಸರ್ಕಾರ ನಿರ್ಧರಿಸಿತ್ತು. ಇದಕ್ಕಾಗಿ ಕೆಆರ್‌ಎಸ್ ಜಲಾಶಯಕ್ಕೆ ಜಾರ್ಖಂಡ್‌ನ ಧನಬಾದ್‌ನಿಂದ ವಿಶೇಷ ತಂಡವೊಂದು ಆಗಮಿಸಿತ್ತು. ಅದೂ ಕೂಡ ಯಶಸ್ವಿಯಾಗಿ ನಡೆದಿರಲಿಲ್ಲ.