ಕನ್ನಡಪ್ರಭ ವಾರ್ತೆ ಪರಶುರಾಂಪುರ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆ ವಿಮಾ ಕಂಪನಿಗಳು ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಬೆಳೆ ವಿಮೆ ಹಣ ಮತ್ತು ಬೆಳೆ ನಷ್ಟ ಪರಿಹಾರ ಮಂಜೂರು ಮಾಡಬೇಕು ಎಂದು ಕರ್ನಾಟಕ ಅಖಂಡ ರೈತ ಸಂಘ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ವಾಲಿ ತಿಳಿಸಿದರು.

ಚಳ್ಳಕೆರೆ ತಾಲೂಕು ಪರಶುರಾಮಪುರ ಹೋಬಳಿ ಕೇಂದ್ರದ ಚಳ್ಳಕೆರೆ ರಸ್ತೆಯ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ಚಳ್ಳಕೆರೆ ತಾಲೂಕು ಅಖಂಡ ಕರ್ನಾಟಕ ರೈತ ಸಂಘ, ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮ ಘಟಕಗಳು, ಹಾಗೂ ರಾಜ್ಯ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯ ಕಾರ್ಯಕಾರಣಿ ಸಭೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಕೆಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಚಿತ್ರದುರ್ಗ ಜಿಲ್ಲೆಗೆ ಬೆಳೆ ವಿಮೆ ಹಣ ಮಂಜೂರಾತಿ ನೀಡಬೇಕು ಆಂಧ್ರ ಗಡಿಯ ಪರಶುರಾಂಪುರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು. ಚಿತ್ರದುರ್ಗದಂತಹ ಬಯಲು ಸೀಮೆಗೆ ವರದಾನವಾದ ಭದ್ರ ಮೇಲ್ದಂಡೆ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಯಲ್ಲಿನ ಹಣವನ್ನು ಮಂಜೂರುಗೊಳಿಸಿ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರುಣಿಸಬೇಕು.

ತಾಲೂಕು ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ ಮಾತನಾಡಿ, ರಾಜ್ಯಮಟ್ಟದ ಸಮಾವೇಶ ಕೈಗೊಳ್ಳಲು ಪ್ರಮುಖ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತಂದು ರೈತರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು. ಈ ವರ್ಷದಿಂದ ರೈತರಿಗೆ ಕೃಷಿ ತೋಟಗಾರಿಕೆ ರೇಷ್ಮೆ ಇಲಾಖೆಗಳಿಗೂ ಸೇರಿದಂತೆ ಯಾವುದೇ ಕೃಷಿ ಪರಿಕರಗಳು ಪ್ರೋತ್ಸಾಹಕ ಯೋಜನೆಗಳನ್ನು ಜಾರಿಗೆ ತರುವಾಗ ಯಾವುದೇ ಮಾನದಂಡಗಳನ್ನು ಎಣಿಸದೆ ಎಲ್ಲರಿಗೂ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.


ಚಳ್ಳಕೆರೆ ತಾಲೂಕು ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಕೆ ಚಿಕ್ಕಣ್ಣ ಪ್ರಾಸ್ತವಿಕ ಮಾತನಾಡಿ, ರಾಜ್ಯ ಸಂಘದ ನಿರ್ದೇಶನದಂತೆ ರಾಜ್ಯ ರೈತ ಸಂಘದ ಕಾರ್ಯಕಾರಿಣಿ ಸಭೆಯನ್ನು ಪರಶುರಾಂಪುರದಲ್ಲಿ ಆಯೋಜಿಸಿ ರೈತರ ಸಂಕಷ್ಟಗಳಿಗೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮೇಲೆ ಒತ್ತಡ ತರಲು ಸಭೆಯಲ್ಲಿ ಒಮ್ಮತದಿಂದ ನಿರ್ಣಯಿಸಲಾಗಿದೆ.

ಮುಂಗಾರು ಹಂಗಾಮಿ ಅಗತ್ಯ ರೈತ ಚಟುವಟಿಕೆಗಳಿಗೆ ಪ್ರತಿ ರೈತರ ಖಾತೆಗೆ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಕನಿಷ್ಟ 10 ಸಾವಿರ ರು. ನೀಡಬೇಕು ಹಲವು ದಶಕಗಳ ಕನಸಾಗಿರುವ ಪರಶುರಾಂಪುರ ತಾಲೂಕು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಚಿತ್ರದುರ್ಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಾಂತ ಅಶೋಕ ಮಾತನಾಡಿ, ಸಿರಿಗೆರೆ ಶ್ರೀಗಳ ಸಲಹೆಯಂತೆ ರೈತರು ಸಂಘಟಿತರಾಗಿ ಒಕ್ಕೂರಿನಿಂದ ಹೋರಾಡಿದರೆ ಶ್ರೀಗಳು ನಮ್ಮ ಪರವಾಗಿ ಸರ್ಕಾರದ ಮೇಲೆ ಒತ್ತಡ ತರುವರು ಎಂದರು.

ತಾಲೂಕಿನ ಪರಶುರಾಮಪುರ ಮತ್ತು ಪಗಡಲಬಂಡೆ ಗ್ರಾಮ ಪಂಚಾಯಿತಿಯ ಹಳ್ಳಿಗಳಿಗೆ ಜೀರೋ ಬೆಳೆ ಎಂದು ಪರಿಗಣಿಸಿ ಬೆಳೆ ವಿಮೆ ಪಟ್ಟಿಗೆ ಸೇರ್ಪಡೆ ಮಾಡಬೇಕು, ರಾಜ್ಯ ಎಲ್ಲಾ ಜಿಲ್ಲೆ, ತಾಲೂಕು ಗ್ರಾಮ ಘಟಕಗಳ ಅಖಂಡ ಕರ್ನಾಟಕ ರೈತ ಸಂಘಗಳಿಗೆ ಬಲ ತುಂಬಿ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು. ಎಲ್ಲಾ ರೈತರು ಗ್ರಾಮದ ಮುಖ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ವಾಲಿ, ತಾಲೂಕ ಅಧ್ಯಕ್ಷ ಕೆ.ಚಿಕ್ಕಣ್ಣ, ಜಿಲ್ಲಾಧ್ಯಕ್ಷ ಶಾಂತ ಅಶೋಕ ಪ್ರಕಾಶ, ಸುಧೀಂದ್ರ ಕುಮಾರ, ಕರಿಬಸಪ್ಪ, ಬಸವರಾಜು, ಹಾವೇರಿ ಮಂಜಪ್ಪ, ಉಮೇಶ, ವಿರೂಪಾಕ್ಷಪ್ಪ, ಧಾರವಾಡ ಲಕ್ಷ್ಮಿದೇವಿ, ಸುವರ್ಣಹಳ್ಳಿ ಧರ್ಮೇಗೌಡರು ಉಳುವಪ್ಪ ತಿಮ್ಮಯ ಚನ್ನಕೇಶವ ಜಂಪಣ್ಣ ತಿಮ್ಮಣ್ಣ ರಮೇಶ ರಾಜಣ್ಣ ಹನುಮಂತಪ್ಪ ನವೀನ್‌ಗೌಡ, ಕರಿಯಣ್ಣ, ತಿಪ್ಪೇಸ್ವಾಮಿ, ಹನುಮಂತರಾಯ ಈರಣ್ಣ ರಾಜ್ಯದ ವೀರ ಜಿಲ್ಲೆ ತಾಲೂಕು ಘಟಕಗಳ ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.