ಕನ್ನಡಪ್ರಭ ವಾರ್ತೆ ಹಾಸನ

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವುದು, ವಿದ್ಯುತ್ ತಿದ್ದುಪಡಿ ಕಾಯ್ದೆ, ಬೀಜ ಮಸೂದೆ, ಭೂಸ್ವಾಧೀನ ತಿದ್ದುಪಡಿ ಸೇರಿದಂತೆ ವಿವಿಧ ಕಾಯ್ದೆಗಳ ರದ್ದುಪಡಿಸುವುದು, ಅಮೇರಿಕಾ-ಭಾರತ ವ್ಯಾಪಾರ ಒಪ್ಪಂದವನ್ನು ವಿರೋಧಿಸುವುದು ಸೇರಿದಂತೆ ಹಲವು ಬೇಡಿಕೆಗಳ ಮುಂದಿಟ್ಟುಕೊಂಡು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಕಾರ್ಮಿಕ- ರೈತ ವಿವಿಧ ಸಂಘಟನೆಯಿಂದ ಗುರುವಾರ ಅಂಚೆ ಕಚೇರಿ ಮುತ್ತಿಗೆ, ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.

ಇದೇ ವೇಳೆ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು), ಸಂಯುಕ್ತ ಹೋರಾಟ ಕರ್ನಾಟಕ (ಎಸ್‌ಎಚ್‌ಕೆ) ಹಾಗೂ ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು ಉತ್ಪಾದನೆ ಮತ್ತು ಸೇವೆಗಳನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ಮುಷ್ಕರ ಬೆಂಬಲಿಸಿ ರಸ್ತೆ ತಡೆ, ಪಿಕೆಟಿಂಗ್, ಬೃಹತ್ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆಗಳನ್ನು ನಡೆಸಲಾಗಿದೆ. ರಾಜ್ಯ ಸರ್ಕಾರ ಕಾರ್ಮಿಕ ಸಂಹಿತೆಗಳಿಗೆ ಸೇವಾ ನಿಯಮಾವಳಿ ರಚಿಸಬಾರದು ಹಾಗೂ ಜನವಿರೋಧಿ ಮಸೂದೆಗಳನ್ನು ಜಾರಿಗೊಳಿಸಬಾರದೆಂದು ಒತ್ತಾಯವಾಗಿದೆ. ೨೯ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ೪ ಸಂಹಿತೆಗಳನ್ನು ಜಾರಿಗೆ ತಂದಿರುವುದು ಕಾರ್ಮಿಕರ ಹಕ್ಕುಗಳಿಗೆ ಧಕ್ಕೆ ತರುತ್ತಿದೆ. ಗುತ್ತಿಗೆ ಕಾರ್ಮಿಕರ ಮಿತಿ ಹೆಚ್ಚಳ, ಕಾರ್ಖಾನೆಗಳ ವ್ಯಾಖ್ಯಾನ ಬದಲಾವಣೆಗಳಿಂದ ಬಹುತೇಕ ಕಾರ್ಮಿಕರು ವೇತನ, ಇಎಸ್‌ಐ, ಪಿಎಫ್, ಗ್ರಾಚ್ಯುಟಿ ಹಾಗೂ ಬೋನಸ್ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿಸಲಾಗಿದೆ. ಕನಿಷ್ಠ ವೇತನದ ಖಾತ್ರಿ ಇಲ್ಲದೆ ತಳಹಂತದ ಕೂಲಿ ಪರಿಷ್ಕರಣೆ ಮಾಡಿರುವುದನ್ನು ಖಂಡಿಸುತ್ತೇವೆ. ೩೦೦ಕ್ಕಿಂತ ಕಡಿಮೆ ಕಾರ್ಮಿಕರಿರುವ ಕಾರ್ಖಾನೆಗಳಿಗೆ ಸ್ಥಾಯಿ ಆದೇಶ ಅನ್ವಯಿಸದಿರುವುದು, ನಿಗದಿತ ಅವಧಿಯ ಉದ್ಯೋಗ ಪದ್ಧತಿ ಜಾರಿಗೆ ತಂದಿರುವುದು, ಮುಷ್ಕರ ಹಕ್ಕಿನ ಮೇಲೆ ನಿಯಂತ್ರಣ ಹೇರಿರುವುದು ಕಾರ್ಮಿಕ ವಿರೋಧಿ ಕ್ರಮಗಳೆಂದು ಆರೋಪಿಸಲಾಗಿದೆ. ನರೇಗಾ ಯೋಜನೆ ದುರ್ಬಲಗೊಳಿಸುವುದು, ವಿದ್ಯುತ್ ಖಾಸಗೀಕರಣ, ರೈತರ ಭೂಸ್ವಾಧೀನ ತಿದ್ದುಪಡಿ ಮತ್ತು ಬೆಂಬಲ ಬೆಲೆ ನೀಡದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಸಾಮಾನ್ಯ ಜನರ ಸಂಕಷ್ಟಗಳಿಗೆ ಪರಿಹಾರವಿಲ್ಲದೆ ಬಂಡವಾಳಗಾರರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಟೀಕಿಸಿದರು. ರಾಜ್ಯ ಸರ್ಕಾರವೂ ಕಾರ್ಮಿಕ ಸಂಹಿತೆಗಳಿಗೆ ಕರಡು ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಲಾಗುವುದು ಎಂದು ಹೇಳಿದರು. ಮುಷ್ಕರದಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಎಐಟಿಯುಸಿ ಜಿಲ್ಲಾಧ್ಯಕ್ಷ ಎಂ.ಸಿ. ಡೋಂಗ್ರೆ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್. ಆರ್‌. ನವೀನ್ ಕುಮಾರ್‌, ರೈತ ಮುಖಂಡ ಬಾಬು, ಬ್ಯಾಂಕ್ ನೌಕರರ ಸಂಘದ ಪರಮಶಿವಯ್ಯ, ಆರ್‌. ಕುಮಾರ್‌, ದಲಿತ ಮುಖಂಡರಾದ ರಾಜಶೇಖರ್‌, ಈರೇಶ್ ಇರೆಹಳ್ಳಿ, ವಿಮಾನೌಕರರ ಸಂಘದ ವಿಶ್ವನಾಥ್, ರವಿಕುಮಾರ್, ಸಂವಿಧಾನ ಓದು ಅಭಿಯಾನದ ರಾಜು ಗೊರೂರು, ಸಿಐಟಿಯು ಅರವಿಂದ್, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಇತರರು ಉಪಸ್ಥಿತರಿದ್ದರು.