ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಅತಿವೃಷ್ಠಿಯಿಂದ ರೈತ ಬೆಳೆದ ಬೆಳೆ ಸಂಪೂರ್ಣ ಹಾನಿಯಾಗಿವೆ. ರೈತನ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂಧಿಸಿ ಪರಿಹಾರ ಘೋಷಣೆ ಮಾಡಿದೆ. ಅದರಂತೆ ಕೇಂದ್ರ ಸರ್ಕಾರ ಶೀಘ್ರ ಪರಿಹಾರ ಘೋಷಣೆ ಮಾಡಬೇಕು ಎಂದು ಶಾಸಕ ಅಶೋಕ ಮನಗೂಳಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಸಿಂದಗಿ ವಲಯ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಿಸಿ ಮಾತನಾಡಿದರು. ರಾಜ್ಯದಲ್ಲಿ ಸಿಂದಗಿ ಮತ್ತು ಆಲಮೇಲ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಸಿಂದಗಿ ತಾಲೂಕಿನಲ್ಲಿ ಅತಿ ಮಳೆಯಿಂದ ಆಲಮೇಲ ತಾಲೂಕಿನಲ್ಲಿ ಅತಿ ಮಳೆ ಮತ್ತು ನೆರೆ ಹಾವಳಿಯಿಂದ ರೈತ ಬೆಳೆ ಸಂಪೂರ್ಣ ಹಾಳಾಗಿವೆ. ಈಗಾಗಲೇ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಿ ಮಾಹಿತಿ ನೀಡಿವೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹಾಗೂ ಅಧಿಕಾರಿಗಳು ಬೆಳೆ ಹಾನಿ ವೀಕ್ಷಣೆ ಮಾಡಿದ್ದಾರೆ ಎಂದರು.ಬೆಳೆ ಹಾನಿಯಾದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ವಿಜಯಪುರ ಜಿಲ್ಲೆಯಲ್ಲಿ ಆದ ಬೆಳೆ ಹಾನಿ ಬಗ್ಗೆ ಮನವರಿಕೆ ಮಾಡಲಾಯಿತು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯಪುರ ಜಿಲ್ಲೆಯ ಭೀಮಾ ತೀರದ ಹಳ್ಳಿಗಳನ್ನು ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಒಣ ಬೇಸಾಯದ ಪ್ರತಿ ಹೆಕ್ಟೇರಿಗೆ ₹ 8500, ನೀರಾವರಿ ಬೇಸಾಯದ ಪ್ರತಿ ಹೆಕ್ಟೇರಿಗೆ ₹ 8500 ಹಾಗೂ ಬಹುವಾರ್ಷಿಕ ಬೆಳೆಗೆ ₹ 8500 ಪರಿಹಾರ ಘೋಷಣೆ ಮಾಡಿದ್ದಾರೆ. ಗರಿಷ್ಠ 2 ಹೆಕ್ಟೇರ್‌ಗೆ ಪರಿಹಾರ ನಿಡಲು ಘೋಷಣೆ ಮಾಡಿದ್ದಾರೆ. ಅದರಂತೆ ಕೇಂದ್ರ ಸರ್ಕಾರ ಶೀಘ್ರದಲ್ಲಿ ಬೆಳೆ ಹಾನಿ ಪರಿಹಾರ ಘೋಷಣೆ ಮಾಡಬೇಕು ರೈತರ ಸಂಕಷ್ಟಕ್ಕೆ ಸ್ಪಂಧಿಸಬೇಕು. ಕೇಂದ್ರ ಸರ್ಕಾರ ಶೀಘ್ರ ಬೆಳೆ ಹಾನಿ ಸಮೀಕ್ಷೆಗೆ ತಂಡ ಕಳುಹಿಸಬೇಕು ಎಂದು ಒತ್ತಾಯಿಸಿದರು.ಕೃಷಿ ಇಲಾಖೆಯ ತಾಂತ್ರಿಕ ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ 2025-26ನೇ ಸಾಲಿನ ಹಿಂಗಾರು ಹಂಗಾಮಿನ ಬಿತ್ತನೆ ಬೀಜದ ದಾಸ್ತಾನು ಮತ್ತು ಬಿತ್ತನೆ ಗುರಿಯ ವಿವರ ತಿಳಿಸಿದರು. ಕೃಷಿ ಅಧಿಕಾರಿ ಎಲ್.ಆರ್.ರಾಠೋಡ, ಅಧೀಕ್ಷಕ ಶಿವಣ್ಣ ಗೊಂಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಪ್ರಗತಿಪರ ರೈತ ಭಾಗಪ್ಪಗೌಡ ಪಾಟೀಲ ಆಹೇರಿ, ಕೆಡಿಪಿ ಸದಸ್ಯ ಗಂಗಾಧರ ಚಿಂಚೋಳ್ಳಿ, ಕೃಷಿಕ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಪೂಜಾರ, ತಾಲೂಕಾ ಉಪಾಧ್ಯಕ್ಷ ಬಸಯ್ಯ ಹಿರೇಮಠ, ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.