ಪ್ರಾಯೋಗಿಕ ನಾಟಕ ಕಟ್ಟಿಕೊಡುವುದು ಸವಾಲು

| Published : Aug 13 2024, 12:45 AM IST

ಸಾರಾಂಶ

ತುಮಕೂರಿನಲ್ಲಿ ಕುಣಿ ಕುಣಿ ನವಿಲೆ ನಾಟಕಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ತುಮಕೂರುಪ್ರಾಯೋಗಿಕ ನಾಟಕಗಳನ್ನು ಪ್ರೇಕ್ಷಕರ ಮಂದೆ ಕಟ್ಟಿಕೊಡುವುದು ನಿರ್ದೇಶಕನಿಗೆ ಸವಾಲಿನ ಕೆಲಸ. ಸಾಮಾಜಿಕ, ಅದರಲ್ಲಿಯೂ ಪ್ರಾಯೋಗಿಕ ನಾಟಕಗಳಲ್ಲಿ ಸಂಭಾಷಣೆ, ಅಭಿನಯ, ಕಲಾವಿದರ ಭಾವಾಭಿನಯ ಎಲ್ಲವೂ ಒಟ್ಟಿಗೆ ಕೂಡಿದರೆ ಮಾತ್ರ ಪ್ರೇಕ್ಷಕರನ್ನು ಹಿಡಿದಿಡಲು ಸಾಧ್ಯ ಕಲಾಶ್ರೀ ಡಾ.ಲಕ್ಷ್ಮಣದಾಸ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕನ್ನಡ ಭವನದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ, ತುಮಕೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಪ್ರೊ.ಹೆಚ್.ಎಸ್.ವೆಂಕಟೇಶಮೂರ್ತಿ ಅವರ ಕುಣಿ ಕುಣಿ ನವಿಲೆ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಪೌರಾಣಿಕ ನಾಟಕಗಳಲ್ಲಿ ಪದ್ಯ, ಕಂದ ಪದ್ಯಗಳ ಮೂಲಕ ಹೇಗೋ ನಾಟಕವನ್ನು ತೂಗಿಸಬಹುದು. ಆದರೆ ಸಾಮಾಜಿಕ ನಾಟಕಗಳಲ್ಲಿ ಕಥಾವಸ್ತುವೇ ಪ್ರಧಾನವಾಗಿರುವ ಕಾರಣ. ಕಲಾವಿದರು ಭಾವ ತುಂಬಿ ಅಭಿನಯಿಸಿದಾಗ ಮಾತ್ರ ಪ್ರೇಕ್ಷಕರಿಂದ ಚಪ್ಪಾಳೆ ಗೌರವ ಸಿಗಲು ಸಾಧ್ಯ ಎಂದರು. ಶಿವಕುಮಾರ್ ತಿಮ್ಮಲಾಪುರ ಅವರ ನೇತೃತ್ವದ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಪ್ರಾಯೋಗಿಕ ನಾಟಕಗಳಿಗೆ ಹೆಸರಾದ ಸಂಸ್ಥೆ, ಹೊಸ ಹೊಸ ನಾಟಕಗಳನ್ನು ಈ ಭಾಗದ ಪ್ರೇಕ್ಷಕವರ್ಗಕ್ಕೆ ಪರಿಚಯಿಸಿದವರು. ಹಾಗೆಯೇ ಹೊಸ ಕಲಾವಿದರನ್ನು ರಂಗಭೂಮಿಗೆ ನೀಡಿದ ಕೊಡುಗೆ ಇವರಿಗೆ ಸಲ್ಲುತ್ತದೆ. ಇವರಿಗೆ ಸಾಥ ನೀಡುತ್ತಿರುವ ಕಾಂತರಾಜು ಕೌತುಮಾರನಹಳ್ಳಿ ಓರ್ವ ಉದ್ಯೋನ್ಮುಖ ನಿರ್ದೇಶಕ. ಇಂದಿನ ನಾಟಕದ ಸೀನರಿಗಳು ಗಮನಿಸಿದರೆ, ಇವರ ಕ್ರಿಯಾಶೀಲತೆ ನಮ್ಮ ಕಣ್ಣುಮುಂದೆ ಬರುತ್ತದೆ. ಇವರ ಈ ಕಲಾಸೇವೆ ಮತ್ತಷ್ಟು ಪಸರಿಸಲಿ ಎಂದು ಹಾರೈಸಿದರು. ಮಾರುತಿ ಎಜುಕೇಷನ್ ಟ್ರಸ್ಟ್ ನ ಕಾರ್ಯದರ್ಶಿ ಮುರುಳೀಧರ್ ಮಾತನಾಡಿ, ಕಳೆದ 3-4 ವರ್ಷಗಳಿಂದ ಸಂಸ್ಥೆಯ ಸಂಪರ್ಕದಲ್ಲಿರುವ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಗೆಳೆಯರು, ನಮ್ಮ ಶಾಲೆಯ ಮಕ್ಕಳಿಗೆ ನಾಟಕ ಮತ್ತಿತರರ ಲಲಿತ ಕಲೆಗಳ ತರಬೇತಿ ನೀಡುವ ಮೂಲಕ ಮಕ್ಕಳಲ್ಲಿ ಭಾಷಾ ಪ್ರಜ್ಞೆ, ವ್ಯಾಕರಣ ಬದ್ದ ಉಚ್ಛಾರಣೆ, ವಿಷಯ ಗ್ರಹಿಸುವ ವಿಧಾನ ಉದ್ದಿಪನಗೊಳ್ಳಲು ಹಾಗೂ ಸ್ಟೇಜ್ ಫೀಯರ್ ಹೋಗಲಾಡಿಸಲು ಸಹಕಾರಿಯಾಗಿದ್ದಾರೆ. ಇವರ ಪ್ರಯತ್ನ ನಿರೀಕ್ಷಿತ ಯಶಸ್ಸು ದೊರೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಕಾವ್ಯೇಸು ನಾಟಕಂ ರಮ್ಯಂ ಎಂಬ ಮಾತಿದೆ. ಲಲಿತ ಕಲೆಗಳಲ್ಲಿಯೇ ನಾಟಕಕ್ಕೆ ಮಹತ್ವದ ಸ್ಥಾನವಿದೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಮಕ್ಕಳಿಗೆ ತರಬೇತಿ ನೀಡಿ, ಅವರಿಂದ ನಾಟಕ ಪ್ರದರ್ಶನಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ. ನಾಟಕಗಳನ್ನು ಯಾರು ಉಳಿಸಬೇಕೋ, ಅವರನ್ನು ಗುರುತಿಸಿ, ರಂಗಕ್ಕೆ ಕರೆತಂದಿದ್ದಾರೆ. ಕುಣಿ ಕುಣಿ ನವಿಲೆ ನಾಟಕದ ಪಾತ್ರದಾರಿಗಳು ಈ ಕ್ಷಣವನ್ನು ಅವರ ಜೀವಿತದ ಕೊನೆಯವರೆಗೂ ಇರುತ್ತದೆ. ಕಾಂಕ್ರಿಟ್ ಕಾಡುಗಳಿಂದ ಪ್ರಾಣಿ ಪಕ್ಷಿ ಸಂಕುಲಕ್ಕೆ ದೊಡ್ಡ ಸವಾಲನ್ನು ಮನುಷ್ಯ ಹಾಕಿದ್ದಾನೆ. ಇದನ್ನು ಮಕ್ಕಳ ಮೂಲಕ ಹೇಳಲು ಹೊರಟಿದ್ದಾರೆ ಎಂದರು.ಮಾರುತಿ ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಸುಷ್ಮಾ ಎನ್.ಶರ್ಮ ಮಾತನಾಡಿ, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಕಳೆದ ೮ ತಿಂಗಳಿನಿಂದ ನಮ್ಮ ಮಕ್ಕಳಿಗೆ ರಂಗ ತರಬೇತಿ ನೀಡಿ, ಕುಣಿ ಕುಣಿ ನವಿಲೆ ನಾಟಕ ಪ್ರದರ್ಶನಕ್ಕೆ ಅವರನ್ನು ಸಜ್ಜುಗೊಳಿಸಿದ್ದಾರೆ.ಇದಕ್ಕೆ ಮಕ್ಕಳ ಪೋಷಕರ ಸಹಕಾರವೂ ಇದೆ.ನಮ್ಮ ಮಕ್ಕಳನ್ನು ನಿಮ್ಮನ್ನು ರಂಜಿಸಲಿದ್ದಾರೆ ಎಂಬ ನಂಬಿಕೆ ನಮ್ಮದು ಎಂದರು.

ಮಾರುತಿ ವಿದ್ಯಾಕೇಂದ್ರದ ಮಕ್ಕಳಿಗೆ ಸಾಹಿತಿ ಹೆಚ್.ಎಸ್.ವೆಂಕಟೇಶಮೂರ್ತಿ ಅವರು ರಚಿಸಿರುವ ಕುಣಿ ಕುಣಿ ನವಿಲೆ ನಾಟಕ ಪ್ರದರ್ಶನಗೊಂಡಿತು. ಈ ವೇಳೆ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ದ ಶಿವಕುಮಾರ್ ತಿಮ್ಮಲಾಪುರ, ಕಾಂತರಾಜು ಕೌತುಮಾರನಹಳ್ಳಿ, ರಂಗಸೊಗಡು ಕಲಾಟ್ರಸ್ಟ್ ನ ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.