ಸಾರಾಂಶ
ಐಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ನೇತೃತ್ವದಲ್ಲಿ ಜರುಗಿದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವುದು, ಎರಡನೇ ಬೆಳೆಗಾಗಿ ಎಡದಂಡೆ ಎಷ್ಟು ಪ್ರಮಾಣದಲ್ಲಿ ನೀರನ್ನು ಬಿಡಬೇಕು ಎನ್ನುವುದು ಸೇರಿದಂತೆ ಹಲವಾರು ತೀರ್ಮಾನಗಳನ್ನು ನ.21ರಂದು ತೆಗೆದುಕೊಳ್ಳಲಾಗಿತ್ತು.
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಇಂದಿನಿಂದ ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ಜಿಲ್ಲೆ ವ್ಯಾಪ್ತಿಗೆ ಬರುವ ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ರೈತರಿಗೆ ನಿಗದಿತ ಪ್ರಮಾಣದಲ್ಲಿ ನೀರು ತಲುಪಿಸುವ ದೊಡ್ಡ ಸವಾಲು ಜಿಲ್ಲಾಡಳಿತದ ಮುಂದಿದೆ.ಕಳೆದ ನ.21 ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ, ಐಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ನೇತೃತ್ವದಲ್ಲಿ ಜರುಗಿದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವುದು, ಎರಡನೇ ಬೆಳೆಗಾಗಿ ಎಡದಂಡೆ ಎಷ್ಟು ಪ್ರಮಾಣದಲ್ಲಿ ನೀರನ್ನು ಬಿಡಬೇಕು ಎನ್ನುವುದು ಸೇರಿದಂತೆ ಹಲವಾರು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿತ್ತು.ಅದರಂತೆ ಡಿಸೆಂಬರ್ ಪೂರ್ಣ ಅವಧಿಯವರೆಗೆ ಕಾಲುವೆಗಳಿಗೆ 2500 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಅಷ್ಟೇ ಅಲ್ಲದೇ ಬರುವ 2025 ಜನವರಿ 1 ರಿಂದ ಮಾರ್ಚ್ 31, 2025ರ ವರೆಗೆ ಸುಮಾರು 90 ದಿನಗಳ ಕಾಲ 3850 ಕ್ಯೂಸೆಕ್ ನೀರು ಹರಿಸಲು ಸಹ ನಿರ್ಧರಿಸಲಾಗಿತ್ತು.ರೈತರ ಆತಂಕವೇನು?:
ಪ್ರತಿ ಐಸಿಸಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ನಿಗದಿತ ಪ್ರಮಾಣದಲ್ಲಿ ನೀರು ಹರಿಸಿದರೂ ಸಹ ರಾಯಚೂರು ಜಿಲ್ಲೆ ವ್ಯಾಪ್ತಿಗೆ ಬರುವ ಕೆಳಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ತರುವ ದೊಡ್ಡ ಸವಾಲೇ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳ ಮುಂದಿದೆ. ಪ್ರತಿ ಸಲ ಕಾಲುವೆಗೆ ನೀರು ಬಿಟ್ಟಾಗ ಅಚ್ಚುಕಟ್ಟಿನ ಮೇಲೆ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಿದರೂ ಸಹ ನೀರು ತಲುಪುವ ಖಾತರಿಯಿಲ್ಲದಕ್ಕೆ ರೈತರ ಆತಂಕಗೊಂಡಿದ್ದಾರೆ.ಟಿಎಲ್‌ಬಿಸಿ ಮೇಲ್ಭಾಗದಲ್ಲಿ ಅಕ್ರಮ ನೀರಾವರಿ, ನೀರಾವರಿ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ನಿರ್ಲಕ್ಷ್ಯದ ಜೊತೆಗೆ ಗೇಜ್ ನಿರ್ವಹಣೆಯಲ್ಲಿ ತೋರುವ ವೈಫಲ್ಯಗಳ ಪರಿಣಾಮ ವಾಗಿ ಕೆಳಭಾಗಕ್ಕೆ ನೀರು ಬರುತ್ತಿಲ್ಲ ಎನ್ನುವ ಆರೋಪ ರೈತರದ್ದಾಗಿದೆ. ಜಮೀನುಗಳಿಗೆ ನೀರು ಬೇಕೆಂದರೆ ಜಿಲ್ಲೆಯ ಮಾನ್ವಿ, ಸಿರವಾರ ಮತ್ತು ರಾಯಚೂರು ತಾಲೂಕು ವ್ಯಾಪ್ತಿಯ ಕೆಳಭಾಗದ ರೈತರು ಹೋರಾಟ ಮಾಡುವುದು ಅನಿವಾರ್ಯ ಎನ್ನುವ ಪರಿಸ್ಥಿತಿ ಇದೆ.
----ಬಾಕ್ಸ್:
ನೀರು ಒದಗಿಸುವ ಕಾಲಾವಧಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ 2024 ಡಿ.1ರಿಂದ 15ವರೆಗೆ 1500 ಕ್ಯುಸೆಕ್, 16 ರಿಂದ 31 ವರೆಗೆ 2,000 ಕ್ಯುಸೆಕ್, 2025 ಜ.1 ರಿಂದ ಜ.31 ವರೆಗೆ, ಫೆ.1 ರಿಂದ ಫೆ.28 ವರೆಗೆ, ಮಾ.1 ರಿಂದ ಮಾ.31 ವರೆಗೆ ತಲಾ 3,800 ಕ್ಯುಸೆಕ್ ನೀರನ್ನು ಹರಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ 2025 ಏ.1 ರಿಂದ ಏ.10 ವರೆಗೆ 1,650 ಕ್ಯುಸೆಕ್ ಇಲ್ಲವೇ, ಕಾಲುವೆಯಲ್ಲಿ ನೀರಿನ ಲಭ್ಯತೆಗನುಸಾರ ನೀರು ಬಿಡಲು ಸಭೆ ಒಪ್ಪಿದ್ದು ಅದರ ಪ್ರಕಾರವೇ ರವಿವಾರದಿಂದ ನೀರು ಹರಿಸಲಾಗುತ್ತಿದೆ.---
ಕೋಟ್:ಟಿಎಲ್‌ಬಿಸಿಗೆ ನಿಗದಿತ ಪ್ರಮಾಣದಲ್ಲಿ ನೀರು ಹರಿಸುವಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಲೇ ಬರುತ್ತಿದ್ದಾರೆ. ಜಿಲ್ಲೆ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯವರು ಅಚ್ಚುಕಟ್ಟು ಪ್ರದೇಶದಲ್ಲಿ ನಡೆಯುತ್ತಿರುವ ನೀರಿನ ಕಳ್ಳಟದ ಮೇಲೆ ತೀವ್ರ ನಿಗಾವಹಿಸಿ ಸಕಾಲಕ್ಕೆ ಕೆಳಭಾಗಕ್ಕೆ ನೀರು ಒದಗಿಸಿದ್ದಲ್ಲಿ, ರೈತರು ಉತ್ತಮ ಬೆಳಗಳನ್ನು ಬೆಳೆಯಲು ಸಾಧ್ಯವಾಗಲಿದೆ.- ನಿರಂಜನ್‌ರೆಡ್ಡಿ, ರೈತ ಮುಖಂಡ---30ಕೆಪಿಆರ್‌ಸಿಆರ್ 02: ತುಂಗಭದ್ರಾ ಎಡದಂಡೆ ಕಾಲುವೆಯ ನೋಟ (ಸಂಗ್ರಹ ಚಿತ್ರ)