ಶ್ರೀಗ್ರಾಮ ದೇವತೆಯರ ರಥೋತ್ಸವ ಸಂಪನ್ನ

| Published : Jul 04 2025, 11:48 PM IST

ಸಾರಾಂಶ

ಗೋಕಾಕ ಗ್ರಾಮದೇವತೆಯ 5ನೇ ದಿನವಾದ ಶುಕ್ರವಾರ ಶ್ರೀಗ್ರಾಮ ದೇವತೆಯರ ರಥೋತ್ಸವ ಲಕ್ಷಾಂತರ ಭಕ್ತಸಾಗರ ನಡುವೆ ಅತ್ಯಂತ ವಿಜೃಂಭಣೆಯಿಂದ ಅಂತ್ಯಗೊಂಡಿತು.

ಕನ್ನಡಪ್ರಭ ವಾರ್ತೆ ಗೋಕಾಕ

ಗೋಕಾಕ ಗ್ರಾಮದೇವತೆಯ 5ನೇ ದಿನವಾದ ಶುಕ್ರವಾರ ಶ್ರೀಗ್ರಾಮ ದೇವತೆಯರ ರಥೋತ್ಸವ ಲಕ್ಷಾಂತರ ಭಕ್ತಸಾಗರ ನಡುವೆ ಅತ್ಯಂತ ವಿಜೃಂಭಣೆಯಿಂದ ಅಂತ್ಯಗೊಂಡಿತು.

ನಗರದ ಕ್ರೀಮ್ ಕಾರ್ನರ್ (ಅಜಂತಾ ಕೂಟ)ನಿಂದ ರಥೋತ್ಸವ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಿ ಕಡಬಗಟ್ಟಿ ರಸ್ತೆಯ ಶ್ರೀ ಮೆರಕನಟ್ಟಿ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಮಧ್ಯಾಹ್ನ 2.30 ಕ್ಕೆ ತಲುಪಿತು. ರಥೋತ್ಸವ ಮಾಜಿ ಜಾತ್ರಾ ಕಮಿಟಿಯ ಅಧ್ಯಕ್ಷ ದಿ.ಲಕ್ಷ್ಮಣರಾವ ಜಾರಕಿಹೊಳಿ ಅವರ ನಿವಾಸಕ್ಕೆ ತಲುಪುತ್ತಿದ್ದಂತೆ ಜಾರಕಿಹೊಳಿ ಕುಟುಂಬದ ಸದಸ್ಯರು ಶ್ರೀದೇವಿಗೆ ಪುಷ್ಪಮಾಲೆ ನೀಡಿ ಉಡಿತುಂಬಿ ದೇವರ ಕೃಪೆಗೆ ಪಾತ್ರರಾದರು. ಮಧ್ಯಾಹ್ನ 4 ಗಂಟೆಗೆ ಇನ್ನೊಂದು ರಥ ಚೌಧರಿ (ಬಾಫನಾ)ಕೂಟನಿಂದ ಪ್ರಾರಂಭವಾಗಿ ಸಂಜೆ 7 ಗಂಟೆಗೆ ಗುರುವಾರ ಪೇಠೆಯ ಶ್ರೀಮಹಾಲಕ್ಷ್ಮೀ ದೇವಿಯ ದೇವಸ್ಥಾನಕ್ಕೆ ತಲುಪಿತು. ರಥೋತ್ಸವದ ಬೀದಿಗಳ ಉದ್ದಕ್ಕೂ ಭಕ್ತರು ಸೇರಿದ್ದರು. ವಿವಿಧ ವಾದ್ಯಮೇಳ, ಕಲಾ ತಂಡಗಳು ಜನರನ್ನು ಮನರಂಜಿಸಿದವು. ನಗರದಲ್ಲೆಡೆ ಶುಕ್ರವಾರ ಭಕ್ತರು ಭಂಡಾರದಲ್ಲಿ ಮಿಂದೆದ್ದರು.ರಥೋತ್ಸವದಲ್ಲಿ ಶಾಸಕ ಹಾಗೂ ಶ್ರೀಮಹಾಲಕ್ಷ್ಮೀದೇವಿ ಜಾತ್ರಾ ಕಮಿಟಿಯ ಅಧ್ಯಕ್ಷ ರಮೇಶ ಜಾರಕಿಹೊಳಿ, ಶಾಸಕ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಹಿರಿಯ ರಾಜಕೀಯ ಮುಖಂಡ ಅಶೋಕ ಪೂಜಾರಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ, ಯುವನಾಯಕರಾದ ಸಂತೋಷ ಜಾರಕಿಹೊಳಿ, ಅಮರನಾಥ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಸನತ ಜಾರಕಿಹೊಳಿ ಭಾಗವಹಿಸಿದರು.ರಥೋತ್ಸವ ಹಿನ್ನೆಲೆ ಹಲವೆಡೆ ಟ್ರಾಫೀಕ್:

ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ರಥೋತ್ಸವ ಕೊನೆಯ ದಿನವಾದ ಶುಕ್ರವಾರ ನಗರದ ಮಹರ್ಷಿ ವಾಲ್ಮೀಕಿ ವೃತ್ತ, ಹಳೆಯ ಕಚೇರಿ ಕೂಟ್ (ಕೃಷ್ಣಮೂರ್ತಿ ಪುರಾಣಿಕ ವೃತ್ತ) ದಿಂದ ನಗರಕ್ಕೆ ಆಗಮಿಸುವ ವಾಹನಗಳನ್ನು ತಡೆಹಿಡಿಯಲಾಯಿತು. ಇಲ್ಲಿಯ ಎನ್‌ಎಸ್‌ಎಫ್ ರಸ್ತೆ, ಶ್ರೀಲಕ್ಷ್ಮೀ ಚಿತ್ರ ಮಂದಿರ, ಆದಿಜಾಂಭವ ನಗರ ಬಳಿ ಸೇರಿ ವಿವಿಧೆಡೆ ಸ್ವಲ್ಪ ಪ್ರಮಾಣದಲ್ಲಿ ಟ್ರಾಫೀಕ್ ತೊಂದರೆಯುಂಟಾಯಿತು.