ಸಾರಾಂಶ
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಅವಾಚ್ಯ ಶಬ್ದ ಬಳಸಿದ ಆರೋಪ ಸಂಬಂಧ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ವಿರುದ್ಧದ ಪ್ರಕರಣದ ತನಿಖೆ ಕುರಿತು ಕಾನೂನಿನ ಜಿಜ್ಞಾಸೆಯೊಂದು ಇದೀಗ ಸಿಐಡಿಗೆ ಎದುರಾಗಿದೆ.
ಸಚಿವರಿಗೆ ನಿಂದನೆ ಹಾಗೂ ಇದಕ್ಕೆ ಪ್ರತಿಯಾಗಿ ಶಾಸಕ ರವಿ ಮೇಲಿನ ಹಲ್ಲೆ ಕೃತ್ಯಗಳ ಕುರಿತು ಘಟನಾ ಸ್ಥಳದ ಮಹಜರು ನಡೆಸಲು ಯಾರಿಂದ ಅನುಮತಿ ಪಡೆಯಬೇಕು ಎಂಬುದು ಸಿಐಡಿ ಅಧಿಕಾರಿಗಳಿಗೆ ತಲೆಬಿಸಿ ತಂದಿದೆ. ಈ ಸಂಬಂಧ ರಾಜ್ಯ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರ ಸಲಹೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.
ಸಿಐಡಿ ಜಿಜ್ಞಾಸೆ ಏನು?:
1.ವಿಧಾನಪರಿಷತ್ ಕಲಾಪದ ವೇಳೆ ಸಚಿವರಿಗೆ ಅಸಂಸದೀಯ ಪದವನ್ನು ಬಳಸಿ ರವಿ ನಿಂದಿಸಿದ್ದಾರೆ ಎಂಬ ಆರೋಪವಿದೆ. ಈ ಕೃತ್ಯ ಸದನದೊಳಗೆ ನಡೆದಿರುವ ಕಾರಣ ಸ್ಥಳ ಮಹಜರ್‌ಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ಅನುಮತಿ ಪಡೆಯಬೇಕೇ?
2. ಸಚಿವರಿಗೆ ನಿಂದಿಸಿದ ಕಾರಣಕ್ಕೆ ವಿಧಾನಸಭೆಯ ಮೊಗಸಾಲೆಯಲ್ಲಿ ರವಿ ಅವರ ಮೇಲೆ ಸಚಿವರ ಬೆಂಬಲಿಗರು ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳವು ವಿಧಾನಸಭಾ ಸ್ವೀಕರ್ ಯು.ಟಿ.ಖಾದರ್ ಅವರ ವ್ಯಾಪ್ತಿಗೆ ಬರುವ ಕಾರಣ ಈ ಕುರಿತ ಸ್ಥಳ ಮಹಜರ್‌ಗೆ ಸ್ಪೀಕರ್‌ರಿಂದ ಅನುಮತಿ ಪಡೆಯಬೇಕೇ?
3. ವಿಧಾನಪರಿಷತ್ ಕಲಾಪ ಮುಗಿದ ನಂತರ ಘಟನೆ ನಡೆದಿರುವ ಕಾರಣ ವಿಧಾನಸಭಾ ಕಟ್ಟಡದ ನಿರ್ವಹಣೆ ಹೊಣೆಗಾರಿಕೆ ಹೊತ್ತಿರುವ ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ (ಡಿಎಪಿಆರ್)ಯಿಂದ ಮಹಜರು ಅನುಮತಿ ಪಡೆಯಬಹುದೇ?
ಈ ಪ್ರಮುಖ ಪ್ರಶ್ನೆಗಳು ಸಿಐಡಿ ಅಧಿಕಾರಿಗಳಿಗೆ ಎದುರಾಗಿವೆ. ಇದರ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಿದ ನಂತರ ಪ್ರಕರಣದ ತನಿಖೆ ಮುಂದುವರೆಸಲು ಅಧಿಕಾರಿಗಳು ಚಿಂತಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಮಹಜರು ಪ್ರಕ್ರಿಯೆ ಯಾಕೆ?:
ಅಪರಾಧ ಪ್ರಕರಣಗಳಲ್ಲಿ ಕೃತ್ಯ ನಡೆದ ಘಟನಾ ಸ್ಥಳದ ಮಹಜರು ಪ್ರಕ್ರಿಯೆ ತನಿಖೆಯ ಬಹುಮುಖ್ಯ ಭಾಗ. ಆರೋಪಿಯನ್ನು ಕರೆದೊಯ್ದು ಕೃತ್ಯದ ಮರು ಸೃಷ್ಟಿ ಮಾದರಿಯಲ್ಲೇ ಮಾಹಿತಿ ಸಂಗ್ರಹಿಸಲಾಗುತ್ತದೆ. ಇನ್ನು ಮಹಜರ್ ಪ್ರಕ್ರಿಯೆಗೆ ಸಾಕ್ಷಿದಾರರಾಗಿ ಸರ್ಕಾರಿ ಅಧಿಕಾರಿಯೊಬ್ಬರ ಸಹಿ ಸಹ ಪಡೆಯಲಾಗುತ್ತದೆ. ವಿಚಾರಣೆ ಹಂತದಲ್ಲಿ ಪ್ರಮುಖ ದಾಖಲೆಯಾಗಿ ಇದೂ ಪರಿಗಣಿಸಲ್ಪಡುತ್ತದೆ. ಸಚಿವರಿಗೆ ನಿಂದನೆ ಹಾಗೂ ವಿಧಾನಪರಿಷತ್ ಸದಸ್ಯ ರವಿ ಮೇಲೆ ಹಲ್ಲೆ ಕೃತ್ಯಗಳು ವಿಧಾನಸಭೆಯಲ್ಲಿ ನಡೆದಿರುವ ಕಾರಣ ಕಾನೂನಿನ ತಾಂತ್ರಿಕ ತೊಡಕು ತನಿಖಾಧಿಕಾರಿಗಳಿಗೆ ಎದುರಾಗಿದೆ.
ಸ್ವೀಕರ್ ಸಮ್ಮತಿಸಿ, ಸಭಾಪತಿ ನಿರಾಕರಿಸಿದರೆ?
ಒಂದು ವೇಳೆ ಸ್ಥಳ ಮಹಜರ್‌ಗೆ ಹಲ್ಲೆ ಪ್ರಕರಣದಲ್ಲಿ ವಿಧಾನಸಭೆ ಸ್ಪೀಕರ್ ಖಾದರ್ ಅವರು ಅನುಮತಿ ನೀಡಿದರೆ, ಆಕ್ಷೇಪಾರ್ಹ ಪದ ಬಳಕೆ ಘಟನೆ ಸದನದೊಳಗೆ ನಡೆದಿರುವುದರಿಂದ ತಮ್ಮ ವಿವೇಚನಾಧಿಕಾರ ಬಳಸಿ ತೀರ್ಮಾನಿಸುವುದಾಗಿ ಹೇಳಿ ನಿಂದನೆ ಪ್ರಕರಣದಲ್ಲಿ ಮಹಜರ್‌ಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ನಿರಾಕರಿಸಿದರೆ ಕಾನೂನಾತ್ಮಕವಾಗಿ ಮಾತ್ರವಲ್ಲ ರಾಜಕೀಯವಾಗಿ ಸಹ ದೊಡ್ಡ ಸಮಸ್ಯೆ ಎದುರಾಗಲಿದೆ ಎಂಬ ತಲೆಬಿಸಿ ಸಹ ಸಿಐಡಿ ಅಧಿಕಾರಿಗಳಿಗೆ ಇದೆ ಎನ್ನಲಾಗಿದೆ.
ಈ ಎಲ್ಲ ಕಾನೂನು ತೊಡಕುಗಳ ನಿವಾರಣೆಗೆ ಅಡ್ವೋಕೇಟ್ ಜನರಲ್ ಶಶಿಕಿರಣ್ ಅವರೊಂದಿಗೆ ಸುದೀರ್ಘವಾಗಿ ಸಮಾಲೋಚಿಸಿದ ಬಳಿಕ ತನಿಖೆ ಸಾಗುವ ದಿಕ್ಕು ನಿರ್ಧಾರವಾಗಲಿದೆ ಎಂದು ತಿಳಿದು ಬಂದಿದೆ.
ವಿಡಿಯೋ ಕೋರಿ ಸ್ಪೀಕರ್‌ಗೆ ಪತ್ರ
ಇನ್ನು ವಿಧಾನಸಭಾ ಮಂಡಲದ ಅಧಿವೇಶನದ ವಿಡಿಯೋ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಕೋರಿ ಸ್ಪೀಕರ್ ಹಾಗೂ ಸಭಾಪತಿ ಅವರಿಗೆ ಸಿಐಡಿ ಅಧಿಕಾರಿಗಳು ಪತ್ರ ಬರೆಯಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.
ಉಭಯ ಸದನಗಳ ಕಲಾಪಗಳು ವಿಧಾನಸಭಾ ಕಾರ್ಯಾಲಯದ ಮೂಲಕವೇ ನೇರ ಪ್ರಸಾರವಾಗಲಿದೆ. ವಿಧಾನಸಭೆ ಹಾಗೂ ಪರಿಷತ್ ವೆಬ್‌ಸೈಟ್‌ಗಳಲ್ಲೇ ಇದು ನೇರ ಪ್ರಸಾರವಾಗಲಿದ್ದು, ಎರಡೂ ಸದನಗಳ ಕಲಾಪಗಳ ವಿಡಿಯೋಗಳನ್ನು ಚಂದನ ಹಾಗೂ ಖಾಸಗಿ ಸುದ್ದಿವಾಹಿನಿಗಳಿಗೆ ವಿಧಾನಸಭೆಯ ಕಾರ್ಯಾಲಯದಿಂದ ಹಂಚಿಕೆಯಾಗುತ್ತವೆ. ಈ ನೇರ ಪ್ರಸಾರದ ಹಕ್ಕುಗಳನ್ನು ವಿಧಾನಸಭಾ ಕಾರ್ಯಾಲಯವೇ ಹೊಂದಿದೆ. ಹೀಗಾಗಿ ಸಚಿವರಿಗೆ ನಿಂದನೆ ಪ್ರಕರಣದಲ್ಲಿ ಅಸಲಿ ವಿಡಿಯೋ ನೀಡುವಂತೆ ಕೋರಿ ಸಭಾಪತಿ ಅವರಿಗೆ ಹಾಗೂ ಹಲ್ಲೆ ಪ್ರಕರಣದಲ್ಲಿ ಮೊಗಸಾಲೆಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗೆ ಸ್ಪೀಕರ್ ಅವರಿಗೆ ಸಿಐಡಿ ಪತ್ರ ಬರೆಯಲಿದೆ ಎನ್ನಲಾಗಿದೆ.
ಈಗಾಗಲೇ ಸದನದಲ್ಲಿ ನಿಂದನೆ ಹಾಗೂ ಹಲ್ಲೆ ಕುರಿತು ಕೆಲ ಮೂಲಗಳಿಂದ ದೃಶ್ಯಾವಳಿಗಳು ಸಿಕ್ಕಿವೆ. ಆದರೆ ಅಸಲಿ ವಿಡಿಯೋಗಳು ಪತ್ತೆಯಾದರೆ ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಪಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.