ಸಾರಾಂಶ
ಪಟ್ಟಣದ ಮೇನ್ ಬಜಾರನಲ್ಲಿ ಇರುವುದರಿಂದ ಇದು ಶುರುವಾದರೇ ವಾರದ ಸಂತೆಗೆ ಬರುವ ಜನರಿಗೆ ಘಟಕದಿಂದ ಶುದ್ಧ ಕುಡಿಯುವ ನೀರು ದೊರೆಯುತ್ತದೆ.
ಅಬ್ದುಲಘನಿ ಎಂ.ದೇವರಮನಿ
ಕನ್ನಡಪ್ರಭ ವಾರ್ತೆ ಆಲಮೇಲಪಟ್ಟಣದ ವಾರ್ಡ್ ನಂ.05ರ ವ್ಯಾಪ್ತಿಯ ದೇವಿ ಗುಡಿ ಹತ್ತಿರವಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಎರಡ್ಮೂರು ವರ್ಷಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ದುರಸ್ತಿಯಾಗದೇ ನಿರುಪಯುಕ್ತವಾಗಿದೆ.
2022-23ನೇ ಸಾಲಿನಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಈ ಘಟಕವು, ಆರಂಭಗೊಂಡು ಐದಾರು ತಿಂಗಳಲ್ಲಿ ಕೆಟ್ಟು ನಿಂತಿರುವುದು ಒಂದೆಡೆಯಾದರೆ, ಇದಾದ ಹಲವು ತಿಂಗಳು ಕಳೆದರೂ ದುರಸ್ತಿ ಕಾಣದಿರುವುದು ದುರಂತವೇ ಸರಿ ಎಂದು ಸ್ಥಳೀಯರು ಗೊಣಗುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಘಟಕವು ಪಟ್ಟಣದ ಮೇನ್ ಬಜಾರನಲ್ಲಿ ಇರುವುದರಿಂದ ಇದು ಶುರುವಾದರೇ ವಾರದ ಸಂತೆಗೆ ಬರುವ ಜನರಿಗೆ ಘಟಕದಿಂದ ಶುದ್ಧ ಕುಡಿಯುವ ನೀರು ದೊರೆಯುತ್ತದೆ.ಮನವಿಗೂ ಸ್ಪಂದಿಸಿಲ್ಲ:
ಈ ಘಟಕದಿಂದ ಕನಿಷ್ಠ 2 ವಾರ್ಡ್ ಜನರಿಗೆ ಸೇರಿದಂತೆ ಘಟಕ ಪಟ್ಟಣ ಪಂಚಾಯಿತಿಯಿಂದ ಕೂಗಳತೆಯ ದೂರದಲ್ಲಿ ಇರುವುದರಿಂದ ಪಂಚಾಯಿತಿಗೆ ಬರುವ ಜನರಿಗೂ ಇದು ಆಸರೆಯಾಗಿದೆ. ಘಟಕ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತಾತ್ಸಾರ:
ಪಟ್ಟಣ ಪಂಚಾಯಿತಿ ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ನೀರಿನ ಘಟಕದಿಂದ ಒಂದು ಹನಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಸರಿಯಾಗಿ ನಿರ್ವಹಣೆ ಮಾಡದೇ ಇರುವ ಕಾರಣದಿಂದ ಜನರು ಕಲುಷಿತ ನೀರು ಬಳಸಬೇಕಾದ ಪರಿಸ್ಥಿತಿ ಎದುರಾಗಿದೆ. ಈಗ ಬೇಸಿಗೆ ಕಾಲ ನಲ್ಲಿಯಲ್ಲಿ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಹಾಗಾಗಿ ಕೂಡಲೇ ಇದನ್ನು ದುರಸ್ತಿಗೊಳಿಸಿ ಇಲ್ಲಿನ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಆದರೆ ಸರಿಯಾಗಿ ನಿರ್ವಹಣೆ ಮಾಡದೇ ಇರುವ ಕಾರಣ ಇದು ಕೆಟ್ಟು ನಿಂತಿದೆ. ವಾರ್ಡಿನವರು ಕಲುಷಿತ ನೀರು ಬಳಸಬೇಕಾದ ಪರಿಸ್ಥಿತಿ ಎದುರಾಗಿದೆ. ಪಪಂ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದ್ದೆ. ಈ ಸಮಸ್ಯೆ ಬಗ್ಗೆ ಸೂಕ್ತ ಕ್ರಮ ವಹಿಸಿ ಘಟಕ ದುರಸ್ತಿಗೊಳಿಸಬೇಕು.
ಸಾಧೀಕ ಗೌಂಡಿ, ವಿನಾಯಕ ಕಲಶೆಟ್ಟಿ, ನಿವಾಸಿಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದು ಖುದ್ದಾಗಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ ಆದಷ್ಟೂ ಬೇಗ ದುರಸ್ತಿ ಮಾಡಿಸುತ್ತೇನೆ.
ಸುರೇಶ ನಾಯಕ, ಮುಖ್ಯಾಧಿಕಾರಿಗಳು, ಪಪಂ ಆಲಮೇಲ