ಮದ್ದೂರು ತಾಲೂಕಿನ ಸಕ್ಕರೆ ಕಾರ್ಖಾನೆಗಳು ರೈತರಿಗೆ 50 ರು. ಪ್ರೋತ್ಸಾಹ ಧನ ನೀಡುವ ಸಂಬಂಧ ಎರಡು ಕಾರ್ಖಾನೆ ಅಧಿಕಾರಿಗಳೊಂದಿಗೆ ಸಾಧಕ ಭಾದಕ ಚರ್ಚಿಸಿ ಕ್ರಮ ವಹಿಸಲಾಗಿದೆ. ಮುಂದಿನ ವಾರದೊಳಗೆ ಕಾರ್ಖಾನೆ ಆರಂಭಿಸಿ ಕಬ್ಬು ಕಟಾವು ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ರೈತರಿಗೆ ಆಗುವ ನಷ್ಟವನ್ನು ತಪ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಳೆ ಬೆಳೆಯಬೇಡಿ ಎಂದು ಹೇಳಿದ್ದು, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ನಗರದ ಶಿವಪುರದ ಬೆಂಗಳೂರು- ಮೈಸೂರು ಹೆದ್ದಾರಿ ಇಕ್ಕಲೆಗಳಲ್ಲಿರುವ ಚರಂಡಿಯ ಹೂಳು ಹಾಗೂ ತ್ಯಾಜ ವೀಲೆವಾರಿಗೆ ಬಿಡುಗಡೆಯಾಗಿರುವ 1 ಕೋಟಿ ರು. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಅಣೆಕಟ್ಟೆಗಳಲ್ಲಿಯೂ ನೀರಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತೊಡುಕು ಉಂಟಾಗುವ ಜತೆಗೆ ಜಮೀನುಗಳಲ್ಲಿ ಬೇಸಾಯ ಮಾಡಿದರೆ ಬೆಳೆಗಳು ಒಣಗಿ ರೈತರಿಗೆ ಅಪಾರ ನಷ್ಟವಾಗುತ್ತದೆ. ಈ ಉದ್ದೇಶವಿಟ್ಟು ಸಿಎಂ ಮಾತನಾಡಿದ್ದಾರೆ ಎಂದರು.ಕಳೆದ ಬಾರಿ ಈ ಸಮಯಕ್ಕೆ ಕೆಆರ್‌ಎಸ್ ಜಲಾಶಯ ತುಂಬಿತ್ತು. ಆದರೆ, ಇಂದು 80 ಅಡಿ ಮಾತ್ರ ನೀರಿದೆ. ಜಲಾಶಯಕ್ಕೆ ನೀರು ಬಾರದೆ ಇದೇ ಪರಿಸ್ಥಿತಿ ಮುಂದುವರೆದರೆ ಬೆಳೆಗಳಿಗೆ ನೀರು ಎಲ್ಲಿಂದ ನೀಡೋದು. ವರುಣರಾಯ ಶೀಘ್ರವೇ ಸಮಸ್ಯೆಗೆ ಪರಿಹಾರ ನೀಡುಲಿ ತಿಳಿಸಿದರು.
ತಾಲೂಕಿನ ಸಕ್ಕರೆ ಕಾರ್ಖಾನೆಗಳು ರೈತರಿಗೆ 50 ರು. ಪ್ರೋತ್ಸಾಹ ಧನ ನೀಡುವ ಸಂಬಂಧ ಎರಡು ಕಾರ್ಖಾನೆ ಅಧಿಕಾರಿಗಳೊಂದಿಗೆ ಸಾಧಕ ಭಾದಕ ಚರ್ಚಿಸಿ ಕ್ರಮ ವಹಿಸಲಾಗಿದೆ. ಮುಂದಿನ ವಾರದೊಳಗೆ ಕಾರ್ಖಾನೆ ಆರಂಭಿಸಿ ಕಬ್ಬು ಕಟಾವು ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದರು.ವಿಪಕ್ಷ ನಾಯಕರು ಹೇಳಿದಂತೆ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡುವ ಪ್ರಶ್ನೆಯೇ ಇಲ್ಲ. ನಮಗೆ ಕುಡಿಯೋಕೆ ನೀರಿಲ್ಲ ತಮಿಳುನಾಡಿಗೆ ನೀರು ಎಲ್ಲಿಂದ ಬಿಡೋದು?. ಬೆಂಗಳೂರು ಹಾಗೂ ಮಂಡ್ಯ ಸೇರಿದಂತೆ ವಿವಿಧೆಡೆಗೆ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ರಾಮನಗರ ಜಿಲ್ಲೆಯಲ್ಲಿ ಎಸ್ಐಆರ್ ನೋಂದಣಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಕೇಂದ್ರ ಸಚಿವ ಎಚ್ಡಿಕೆ ಆರೋಪಕ್ಕೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅವರಿಗೆ ಆರೋಪ ಮಾಡುವುದು ಪ್ರತಿನಿತ್ಯದ ಕಾಯಕವಾಗಿದೆ. ಡಿ.ಕೆ.ಶಿವಕುಮಾರ್ ಸಿಎಂ ಆದ ಮೇಲೆ ಎಚ್.ಡಿ.ಕುಮಾರಸ್ವಾಮಿ ನಿದ್ದೆ ಮಾಡುವುದನ್ನೆ ಬಿಟ್ಟು ಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದರು.ನೋಂದಣಿಯಲ್ಲಿ ಯಾವುದೇ ಅಕ್ರಮ ನಡೆಯುತ್ತಿಲ್ಲ. ಕೆಲವು ಏರಿಯಾಗಳಲ್ಲಿ ಜಾಗದ ಕೊರತೆಯಿಂದಾಗಿ ಶಾಲೆ, ಅಂಗನವಾಡಿ, ವಿವಿಧ ಕಡೆಗಳಲ್ಲಿ ಗೊಂದಲಗಳ ಬಗ್ಗೆ ತಿಳಿಸಿ ಬಳಿಕ ನೋಂದಣಿ ಮಾಡಲಾಗುತ್ತಿದೆ. ದಾಖಲೆಗಳನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸಿಯೇ ನೋಂದಣಿ ಮಾಡುತ್ತಿದ್ದಾರೆ ಎಂದರು.
ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ನಗರಸಭಾ ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಮರಿದೇವರು, ಮೋಹನ್, ತಿಪ್ಪೂರು ಮನು, ಕೀರ್ತಿ, ಲೋಕೇಶ್, ದಿಲೀಪ್ ಮಹಾಲಿಂಗಣ್ಣ, ನಿತಿನ್, ಸಾದೊರಳಯ್ಯ, ಶಿವಪ್ಪ, ಹಾಜರಿದ್ದರು.