ಸಾರಾಂಶ
ದಾವಣಗೆರೆ : ಅಲಿಬಾಬಾ ಮತ್ತು 40 ಕಳ್ಳರ ಕಥೆಯ ತದ್ರೂಪದಂತೆ ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಸಂಪುಟ ಸದಸ್ಯರಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ವಾಗ್ದಾಳಿ ನಡೆಸಿದರು.
ನಗರದ ಶ್ರೀ ಜಯದೇವ ವೃತ್ತದ ನಾಟ್ಯಚಾರ್ಯ ಶ್ರೀನಿವಾಸ ಕುಲಕರ್ಣಿ ರಸ್ತೆಯಲ್ಲಿ ಸೋಮವಾರ ಬಿಜೆಪಿ ಹಮ್ಮಿಕೊಂಡಿದ್ದ ಮೂರನೇ ಹಂತದ ಜನಾಕ್ರೋಶ ಯಾತ್ರೆಯ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ಖಜಾನೆ ಖಾಲಿ ಆಯ್ತು ಅಂತಾ ನೇರವಾಗಿ ಜನರ ಕಿಸೆಗೆ ಕೈ ಹಾಕುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. 48 ಅಗತ್ಯ ವಸ್ತುಗಳ ಬೆಲೆ ಏರಿಸಿದ್ದಾರೆ. ಕರಾವಳಿ ಜಿಲ್ಲೆಗಳ 350 ಕಿಮೀ ಸಮುದ್ರದ ಅಲೆಗಳು ಹಾಗೂ ಗಾಳಿಗಷ್ಟೇ ಸಿದ್ದರಾಮಯ್ಯ ಸರ್ಕಾರ ತೆರಿಗೆ ವಿಧಿಸಿಲ್ಲ ಎಂದು ವ್ಯಂಗ್ಯವಾಡಿದರು.
ರಾಜಕೀಯ ಪಕ್ಷಗಳು ಪ್ರತಿಪಕ್ಷದಲ್ಲಿ ಇದ್ದಾಗಲೂ ಜನಪರ ಕೆಲಸ ಮಾಡಬೇಕು. ಸಿದ್ದರಾಮಯ್ಯ ನಡೆದಿದ್ದೇ ಹಾದಿ ಅಂತಾ ಬಿಟ್ಟರೆ ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ಕಣ್ಣೀರಿನಲ್ಲಿ ಕೈತೊಳೆಯಬೇಕಾಗುತ್ತದೆ. ಅದಕ್ಕಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ ಆರಂಭಿಸಿದ್ದೇವೆ. ಸಿದ್ದರಾಮಯ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ನಿಶ್ಚಯ ಮಾಡಿದ್ದೇವೆ. ನೀವು ನಮ್ಮ ಜೊತೆ ಬನ್ನಿ ಎಂದು ಜನತೆಗೆ ಮನವಿ ಮಾಡಿದರು.
ಕಾನೂನು ಸುವ್ಯವಸ್ಥೆಗೆ ಭಂಗ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗವಾಗುತ್ತಿದೆ. ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರೀಕ್ಷಕ ಓಂಪ್ರಕಾಶ ತಮ್ಮದೇ ಮನೆಯಲ್ಲಿ ಹತ್ಯೆಯಾಗುತ್ತಾರೆ. ಹಸುಗಳ ಕೆಚ್ಚಲು ಕೊಯ್ಯುವ ಕೆಲಸವಾಗುತ್ತಿದೆ. ಹಾಡಹಗಲೇ ಉಳ್ಳಾಲದಲ್ಲಿ ಸಹಕಾರ ಬ್ಯಾಂಕ್‌ನಿಂದ ₹12 ಕೋಟಿ ದರೋಡೆ ಮಾಡಲಾಗುತ್ತದೆ. ರಾಜಕೀಯ ವಿರೋಧಿಗಳ ವಿರುದ್ಧ ರಾಜಕೀಯ ತಂತ್ರಗಾರಿಕೆ ಮಾಡಿ, ಆತ್ಮಹತ್ಯೆಗೆ ಪ್ರಚೋದಿಸುತ್ತಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಮತ್ತು 40 ಜನರ ತಂಡವು ರಾಜ್ಯದ ವಿವಿಧ ಇಲಾಖೆ, ಕಚೇರಿಗಳಲ್ಲಿ ನೇಮಕಾತಿಯನ್ನೇ ಮಾಡದೇ, ಕಮಿಷನ್, ಹಣ ಎತ್ತುವಳಿಗೆ ಏಜೆಂಟರನ್ನು ನೇಮಿಸಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅದ್ಭುತ ನಾಟಕಕಾರ. ಹಿರಣ್ಣಯ್ಯ ನಾಟಕ ಕಂಪನಿ ಒಂದೇ ನಾಟಕವನ್ನು ನೂರು ಪ್ರದರ್ಶನ ನೀಡಿ, ಸಂಭ್ರಮಿಸುತ್ತಿದ್ದುದನ್ನು ನೋಡಿದ್ದೇವೆ. ಆದರೆ, ಸಿದ್ದರಾಮಯ್ಯ ಸರ್ಕಾರ ವಾಲ್ಮೀಕಿ ನಿಗಮದ ಹಗರಣ, ಮುಡಾ ಸೈಟ್ ಹಗರಣ, ಪರಿಶಿಷ್ಟರಿಗೆ ಮೀಸಲಾತಿ, ₹40 ಸಾವಿರ ಕೋಟಿ ರು., ಕಾನೂನು ಸುವ್ಯವಸ್ಥೆ ವಿಷಯ ಬುಡಕ್ಕೆ ಬಂದರೆ, ಸಿಎಂ ಕುರ್ಚಿಗೆ ಕಂಟಕ ತಂದಿದೆ ಎಂದಾಗ ಒಂದೊಂದು ಹೊಸ ನಾಟಕ ಶುರು ಮಾಡುತ್ತಾರೆ ಎಂದು ಡಿವಿಎಸ್ ವ್ಯಂಗ್ಯವಾಡಿದರು.
ವಿಧಾನಸೌಧದಿಂದ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುತ್ತೇವೆ
ಅದ್ಭುತ ನಾಟಕಕಾರ ಸಿದ್ದರಾಮಯ್ಯ ಜೊತೆಗೆ ಡಿ.ಕೆ.ಶಿವಕುಮಾರ, ರಾಜಣ್ಣ, ಡಾ.ಜಿ.ಪರಮೇಶ್ವ, ಸತೀಶ ಜಾರಕಿಹೊಳಿ ಇತರರು ನಾಟಕದಲ್ಲಿ ತಾವೂ ನಾಯಕರೆಂದು ನಾಟಕ ಮಾಡುತ್ತಾರೆ. ದಯನೀಯ ಸ್ಥಿತಿಗೆ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ಕೊಂಡೊಯ್ಯುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಕುರುಕ್ಷೇತ್ರ ಇದೇ ದಾವಣಗೆರೆಯಿಂದ ಶುರುವಾಗುತ್ತಿದೆ. ವಿಧಾನಸೌಧದ ಮೂರನೇ ಮಹಡಿಯಿಂದ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವವರೆಗೂ ಬಿಜೆಪಿಯ ಕುರುಕ್ಷೇತ್ರ ಯುದ್ಧ ನಿಲ್ಲುವುದಿಲ್ಲ ಎಂದು ಸದಾನಂದ ಗೌಡ ಮಧ್ಯ ಕರ್ನಾಟಕದಿಂದ ರಣಕಹಳೆ ಮೊಳಗಿಸಿದರು.