ತಾರಿಹಾಳ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ನಲ್ಲಿ ಮೂಲಸೌಲಭ್ಯಗಳ ಕೊರತೆಯಷ್ಟೇ ಅಲ್ಲ. ಅಲ್ಲಿನ ಸಿಬ್ಬಂದಿಗಳಿನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಿಲ್ಲ.
ಶಿವಾನಂದ ಗೊಂಬಿ
ಹುಬ್ಬಳ್ಳಿ:ಇಲ್ಲಿನ ತಾರಿಹಾಳ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ನಲ್ಲಿ ಮೂಲಸೌಲಭ್ಯಗಳ ಕೊರತೆಯಷ್ಟೇ ಅಲ್ಲ. ಅಲ್ಲಿನ ಸಿಬ್ಬಂದಿಗಳಿನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಿಲ್ಲ. ಪಾಲಿಟೆಕ್ನಿಕ್ ಕಾಲೇಜ್ನ್ನು ಸರ್ಕಾರ ತನ್ನ ವಶಕ್ಕೆ ಪಡೆದು ಬರೋಬ್ಬರಿ 8 ವರ್ಷವೇ ಗತಿಸಿದರೂ ಅಲ್ಲಿನ ನೌಕರರು ಇನ್ನೂ ಅನುದಾನಿತ ಕಾಲೇಜು ಸಿಬ್ಬಂದಿಗಳಾಗಿ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ!
ಇದು. ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಕೈ ಗನ್ನಡಿಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಆರಂಭವಾದ ಖಾಸಗಿ ಸಂಸ್ಥೆ ಶುರು ಮಾಡಿದ್ದ ಕಾಲೇಜನ್ನು ಬಳಿಕ 2019ರಲ್ಲಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. 2021-22ರಿಂದ ಕಂಪ್ಯೂಟರ್ ಸೈನ್ಸ್, ಇ ಆ್ಯಂಡ್ ಸಿ, ಇಐ, ಸಿವಿಲ್ ಡಿಪ್ಲೊಮಾ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ಸರ್ಕಾರಿ ಶುಲ್ಕವನ್ನು ಪಡೆಯಲಾಗುತ್ತಿದೆ.ಮೊದಲಿಗೆ ಅನುದಾನ ರಹಿತವಾಗಿದ್ದ ಕಾಲೇಜ್ನಲ್ಲಿ ಬರೋಬ್ಬರಿ 91ಕ್ಕೂ ಅಧಿಕ ಸಿಬ್ಬಂದಿ ಇದ್ದರು. ಇದೀಗ ಬೋಧಕರು 18, ಬೋಧಕೇತರ 24, ಆಫೀಸ್ ಸ್ಟಾಫ್ 8 ಸೇರಿ ಒಟ್ಟು 50 ಜನರಿದ್ದಾರೆ. ಇನ್ನು 5 ಜನ ಅತಿಥಿ ಉಪನ್ಯಾಸಕರಿದ್ದಾರೆ.
50 ಜನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಸರ್ಕಾರಿ ಸೌಲತ್ತು ಕೊಟ್ಟಿಲ್ಲ. ಹೀಗಾಗಿ ಯಾವಾಗ ಸಂಬಳ ಆಗುತ್ತದೆ ಎಂಬುದು ಸಿಬ್ಬಂದಿಗೆ ಗೊತ್ತಿಲ್ಲ. ಒಂದೊಂದು ತಿಂಗಳು 5ನೇ ತಾರೀಖಿಗೆ ವೇತನ ಸಿಕ್ಕರೆ, ಮತ್ತೊಂದು ತಿಂಗಳು 15 ಅಥವಾ 20ರಂದು ವೇತನವಾಗುತ್ತದೆ.ಯಾವ್ಯಾವ ಸೌಲಭ್ಯ:
ಹಾಗಂತ ಸರ್ಕಾರಿ ಸಂಬಳ ಹಾಗೂ ಈಗ ಪಡೆಯುತ್ತಿರುವ ಸಂಬಳದಲ್ಲಿ ಹೆಚ್ಚೇನೋ ವ್ಯತ್ಯಾಸವಿಲ್ಲ. ಹೆಚ್ಚು ಕಡಿಮೆ ಸಮನಾಗಿಯೇ ಇದೆ. ಆದರೆ, ಸರ್ಕಾರಿ ನೌಕರರನ್ನಾಗಿ ಪರಿಗಣಿಸಿದರೆ ಕೆಲ ಸೌಲಭ್ಯ ಸಿಗುತ್ತವೆ. ಪ್ರಮುಖವಾಗಿ ನಿಗದಿತ ಆಸ್ಪತ್ರೆಗಳಲ್ಲಿ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ, ರಾಜ್ಯದ ಬೇರೆ ಕಾಲೇಜುಗಳಿಗೆ ವರ್ಗಾವಣೆ ಪಡೆಯುವ ಅವಕಾಶ ಜತೆಗೆ ಬಡ್ತಿ ದೊರೆಯುತ್ತದೆ. ಒಂದು ವೇಳೆ ಕರ್ತವ್ಯದಲ್ಲಿದ್ದಾಗ ಮೃತರಾದರೆ ಅವಲಂಬಿತರಿಗೆ ಅನುಕಂಪದ ನೌಕರಿ ಕೊಡಬಹುದು. ಈ ಎಂಟು ವರ್ಷದಲ್ಲಿ ನಾಲ್ಕೈದು ಜನ ಸಿಬ್ಬಂದಿ ಮೃತಪಟ್ಟಿದ್ದಾರಂತೆ. ಆದರೆ ಅವರ ಅವಲಂಬಿತರೂ ಅನುಕಂಪದ ನೌಕರಿಯಿಂದ ವಂಚಿತರಾಗಿದ್ದಾರೆ. ಸರ್ಕಾರ ಇವರನ್ನು ತಮ್ಮ ನೌಕರರೆಂದು ಪರಿಗಣಿಸದ ಕಾರಣ ಈ ಎಲ್ಲ ಸೌಲಭ್ಯಗಳು ಇವರಿಗೆ ಮರೀಚಿಕೆ ಆಗಿವೆ.ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಮಾತ್ರ ಶೂನ್ಯವಾಗಿದೆ. ಈ ಕಾಲೇಜು ಸರ್ಕಾರಿಯೋ? ಅನುದಾನಿತವೋ ಎಂಬುದೇ ತಿಳಿಯುತ್ತಿಲ್ಲ ಎಂಬ ಮಾತು ನೌಕರರ ವರ್ಗದ್ದು.
ಸರ್ಕಾರವೇ ಬಿಲ್ ಪಾವತಿಸುತ್ತೆ: ನೌಕರರಷ್ಟೇ ಅನುದಾನಿತ ಸಿಬ್ಬಂದಿ ಎಂದು ಪರಿಗಣಿಸಿದೆ. ಆದರೆ, ಇಲ್ಲಿನ ವಿದ್ಯುತ್ ಬಿಲ್, ಸ್ಟೇಷನರಿ, ಜತೆಗೆ ಅತಿಥಿ ಉಪನ್ಯಾಸಕರಿಗೆ ಸರ್ಕಾರವೇ ಗೌರವಧನ ಪಾವತಿಸುತ್ತದೆ. ಆದರೆ, ನೌಕರರ ಬಗ್ಗೆ ಅಷ್ಟೇ ಏಕೆ ಈ ತಾರತಮ್ಯ ಎಂಬ ಪ್ರಶ್ನೆ ನೌಕರರದ್ದು. ಇದಕ್ಕೆ ಉತ್ತರ ಮಾತ್ರ ಸಿಗುತ್ತಿಲ್ಲ.ಇದೀಗ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಸೇರಿದಂತೆ ಜನಪ್ರತಿನಿಧಿಗಳು ತಾಂತ್ರಿಕ ಶಿಕ್ಷಣ ಇಲಾಖೆಗೆ ಪತ್ರ ಬರೆದು ಸಿಬ್ಬಂದಿಗಳನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ. ಇನ್ನಾದರೂ ತಾಂತ್ರಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕೆಂಬುದು ನೌಕರರ ಒಕ್ಕೊರಲಿನ ಆಗ್ರಹ.
ತಾರಿಹಾಳದ ಸರ್ಕಾರಿ ಪಾಲಿಟೆಕ್ನಿಕ್ನ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಕುರಿತಂತೆ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ.ಹರೀಶಕುಮಾರ, ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ