ಸಾರಾಂಶ
ರಾಜ್ಯ ರೈತ ಸಂಘ, ಹಸಿರು ಸೇನೆ ಕರೆ ನಿಡಿದ್ದ ಹಿರಿಯೂರು ಬಂದ್ ಭಾಗಶಃ ಯಶಸ್ವಿ: ಸಿದ್ದವೀರಪ್ಪ
ಕನ್ನಡಪ್ರಭ ವಾರ್ತೆ ಹಿರಿಯೂರುತಾಲೂಕಿನ ಜೆಜಿ ಹಳ್ಳಿಯ ಗಾಯಿತ್ರಿ ಜಲಾಶಯ ಸೇರಿದಂತೆ ಐಮಂಗಲ ಹಾಗೂ ಕಸಬಾ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದ್ದ ಹಿರಿಯೂರು ಬಂದ್ ಬಹುತೇಕ ಯಶಸ್ವಿಯಾಯಿತು.
ಬೆಳಗ್ಗೆಯಿಂದಲೇ ನಗರದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ತಾಲೂಕು ವರ್ತಕರ ಸಂಘದಿಂದ ರೈತರ ಬಂದ್‌ಗೆ ಬೆಂಬಲ ವ್ಯಕ್ತಪಡಿಸಲಾಯಿತು.ಪ್ರತಿಭಟನಾ ಮೆರವಣಿಗೆಯ ನಂತರ ನೆಹರೂ ಮಾರುಕಟ್ಟೆ ಬಳಿಯ ಕಣಿವೆ ಮಾರಮ್ಮ ದೇವಸ್ಥಾನದ ಬಳಿ ಸಭೆ ನಡೆಸಿದರು.
ರಾಜ್ಯ ಕಾರ್ಯಾಧ್ಯಕ್ಷ ಸಿದ್ದವೀರಪ್ಪ ಮಾತನಾಡಿ, ಹಿರಿಯೂರು ರೈತರ ಚಳುವಳಿಯ ಬದ್ಧತೆ ಮೆಚ್ಚುವಂತಹದ್ದು. ಇಲ್ಲಿನ ದೀರ್ಘಕಾಲಿಕ ಹೋರಾಟಗಳು. ಸರ್ಕಾರದ ಕಾನೂನುಗಳು ಸರ್ಕಾರದ ವ್ಯವಸ್ಥೆಗಳು ಶ್ರೀ ಸಾಮಾನ್ಯರ ಪರವಾಗಿಲ್ಲ. ಕೇಂದ್ರ ಭದ್ರಾ ಯೋಜನೆಗೆ ನೀಡುತ್ತೇವೆ ಎಂದ ಹಣ ಬಿಡುಗಡೆ ಆಗಲಿಲ್ಲ. ಆದರೆ ಜನ ವಿಧಾನ ಸಭೆ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಿದರು.ರಾಜಕಾರಣಿಗಳಿಗೆ ಜನರ ಮತ ಬೇಕಷ್ಟೆ ಹೊರತು ಅಭಿವೃದ್ಧಿ ಬೇಕಿಲ್ಲ. ರೈತರನ್ನು ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಗಡೆಯ ದಾಳಗಳನ್ನಾಗಿಸಿಕೊಂಡಿವೆ.
ಇಡೀ ದೇಶಕ್ಕೆ ಅನ್ನ, ಬಟ್ಟೆ, ಹಾಲು, ಬೆಣ್ಣೆ, ತುಪ್ಪ, ಹಣ್ಣು ಹಂಪಲು ಹಂಚಿದ ರೈತರು ನೆಮ್ಮದಿಯಾಗಿ ಸುಖವಾಗಿ ಇರಬೇಕಿತ್ತು. ಆದರೆ ದುರಂತ ಎಂದರೆ ಇಂದು ರೈತರೇ ನೆಮ್ಮದಿಯಾಗಿಲ್ಲ. ಅಧಿಕಾರ ಇದ್ದಾಗ ಒಂದು ಅಧಿಕಾರ ಇಲ್ಲದಿದ್ದಾಗ ಒಂದು ಮಾತು ಆಡುವ ರಾಜಕಾರಣಿಗಳು ತುಂಬಿ ತುಳುಕುತ್ತಿದ್ದಾರೆ. ಇಂದು ಒಬ್ಬ ಡಿ ಗ್ರೂಪ್ ನೌಕರನಿಂದ ಹಿಡಿದು ಎಲ್ಲರ ಬದುಕಿಗೂ ಭದ್ರತೆ ಇದೆ. ಆದರೆ ರೈತರ ಬದುಕಿಗೆ ಯವುದೇ ಭದ್ರತೆ ಇಲ್ಲದಂತಾಗಿದೆ. ಅಗ್ಗದ ದರದಲ್ಲಿ ಆಹಾರ ಉತ್ಪನ್ನ ಕೊಟ್ಟು ಎಲ್ಲರನ್ನು ಸುಖವಾಗಿಟ್ಟಿರುವ ರೈತರು ಶೆಡ್‌ಗಳಲ್ಲಿ, ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ನೀರು ತೆಗೆದುಕೊಳ್ಳುವುದು ನಮ್ಮ ಹಕ್ಕು. ಆದರ ಜೊತೆಗೆ ನಾವೆಲ್ಲ ನಮ್ಮ ನಮ್ಮ ಬದುಕುಗಳನ್ನು ಕಟ್ಟಿಕೊಳ್ಳಬೇಕು. ಹಳ್ಳಿ ಹಳ್ಳಿಗಳಲ್ಲೂ ರೈತ ಸಂಘದ ಶಾಖೆ ಶುರುವಾಗಬೇಕು. ಮನೆ ಮನೆಗಳಲ್ಲೂ ರೈತರ ಬಗ್ಗೆ ಮಾತಾಡುವಂತಾಗಬೇಕು. ರೈತ ಸಂಘದ ಶಾಖೆಗಳಿಗೆ ಮಹಿಳೆಯರು ಹೆಚ್ಚಿನದಾಗಿ ಸೇರ್ಪಡೆಯಾಗಬೇಕು ಎಂದರು.ಬಂದ್ ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ ಮಾತನಾಡಿ,
ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಕಳೆದ 215 ದಿನಗಳಿಂದ ರೈತರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ರೈತರು ಬೀದಿಗೆ ಬಿದ್ದು ಚಳುವಳಿ ಶುರು ಮಾಡಿದ್ದಾರೆ. 2023ರಲ್ಲಿ ಮಳೆಯಿಲ್ಲದೇ ಕಲುವಳ್ಳಿ ಭಾಗದಲ್ಲಿ ಕೆರೆಗಳೆಲ್ಲ ಬತ್ತಿ ಹೋಗಿವೆ. ನಮ್ಮ ಜಿಲ್ಲೆ ಮತ್ತು ತಾಲೂಕು ಅಂತರ್ಜಲ ಮಟ್ಟದಲ್ಲಿ ಭಾರಿ ಇಳಿಕೆ ಕಂಡಿದೆ. ನಮ್ಮ ಮಣ್ಣಿನ ಕೆರೆ ತುಂಬಿಸಿ ಎಂದು ಮಾಡಿದ ಹೋರಾಟವನ್ನು ಸರ್ಕಾರ ಗಮನಿಸುತ್ತಿಲ್ಲ ಎಂದರು.ಜೆಜಿ ಹಳ್ಳಿ ಭಾಗದ ಜಿಪಂ ಸದಸ್ಯರಾಗಿದ್ದವರು ಸಹ ಕುಡಿಯುವ ನೀರಿನ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಮ್ಮನ್ನು ಆಳಿದ ಜನಪ್ರತಿನಿಧಿಗಳು ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹಿರಿಯೂರು ಬಂದ್ ವಿಷಯ ತಿಳಿದ ಸಿಎಂ ಹಾಗೂ ಇಲ್ಲಿನ ಸಚಿವರು ವಿಧಾನಸೌಧದಲ್ಲಿ ಸಭೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ. ಇದು ಸ್ವಾಗತಾರ್ಹ. ಆದರೆ ನಾಳೆ ಬರುವಾಗ ಮುಖ್ಯಮಂತ್ರಿಗಳಿಂದ ಕೆರೆಗೆ ನೀರು ಹರಿಸುವ ಆದೇಶ ತರಬೇಕು ಎಂದು ಆಗ್ರಹಿಸಿದರು.
ಈ ವೇಳೆ ತಹಸೀಲ್ದಾರ್ ರಾಜೇಶ್ ಕುಮಾರ್, ರೈತ ಮುಖಂಡರಾದ ಮಲ್ಲಿಕಾರ್ಜುನ್, ಬಸವರಾಜ್, ರಾಜ್ಯ ಕಾರ್ಯದರ್ಶಿ ನಿಜಲಿಂಗಪ್ಪ, ಚಂದ್ರಣ್ಣ, ಮಂಜುನಾಥ್, ರಘುನಾಥ್, ಈಶ್ವರಪ್ಪ, ಎಂ.ಆರ್. ಈರಣ್ಣ, ಅಶ್ವತ್ಥಪ್ಪ, ಅರಳಿಕೆರೆ ತಿಪ್ಪೇಸ್ವಾಮಿ, ಗೋವಿಂದಪ್ಪ, ಜಯರಾಮಣ್ಣ, ರಂಗಸ್ವಾಮಿ, ಅಮೀದ್ ಹುಸೇನ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ರೈತರು ಆಗಮಿಸಿದ್ದರು.ರೈತರ ಸಮಸ್ಯೆ ಬಗೆಹರಿಸಲಾಗುವುದು: ವೆಂಕಟೇಶ್ ನಾಯ್ಕ್
ರೈತರ ಮನವಿ ಪತ್ರ ಸ್ವೀಕರಿಸಿ ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್ ಮಾತನಾಡಿ, ನಾನು ಇದೇ ಜಿಲ್ಲೆಯವನಾಗಿದ್ದು ರೈತರು ಜೆಜಿ ಹಳ್ಳಿ ಹೋಬಳಿಯ ಕೆರೆಗೆ ನೀರು ಹರಿಸಲು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿರುವುದು ನನಗೆ ತಿಳಿದಿದೆ. ಈ ಭಾಗದ ಜನರ ನೀರಿನ ಸಮಸ್ಯೆಯ ಅರಿವು ನನಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗುವುದು. ನಿಮ್ಮ ಹೋರಾಟಕ್ಕೆ ಪ್ರತಿಫಲ ಸಿಗುವ ನಿರೀಕ್ಷೆಯಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಈ ಸಮಸ್ಯೆ ಬಗ್ಗೆ ಸಿಎಂ ಡಿಸಿಎಂ ಹಾಗೂ ಸಣ್ಣ ನೀರಾವರಿ ಸಚಿವರನ್ನು ಭೇಟಿ ಮಾಡಿ ಬಗ್ಗೆ ಚರ್ಚಿಸಿ ಮನವಿ ಮಾಡಿ ಅನುಧಾನ ನೀಡುವಂತೆ ಕೋರಿರುವ ವಿಚಾರ ನಿಮಗೆಲ್ಲ ತಿಳಿದಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ರೈತರ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಸಿ ರೈತರ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.