ಸೌಹಾರ್ದತೆ ಹಾಗೂ ಸಹಬಾಳ್ವೆಯ ನೆಲೆಯಾಗಿರುವ ಬೀದರ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಪ್ರತಿನಿಧಿಗಳು ನೀಡಿದ ಗೌರವ ಮತ್ತು ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹ್ಯಾರಿಸ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೀದರ್
ಸಮುದಾಯದ ಪ್ರೀತಿ, ವಿಶ್ವಾಸ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರು ಹಾಗೂ ಶಾಸಕರಾದ ಎನ್.ಎ.ಹ್ಯಾರಿಸ್ ನುಡಿದರು.ಕರ್ನಾಟಕ ಅಲ್ಪಸಂಖ್ಯಾತ ಶಾಸಕರ ವೇದಿಕೆಯಿಂದ ಮಂಗಳವಾರ ಬೀದರ್ ನಗರದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ನೆಲೆಯಾಗಿರುವ ಬೀದರ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಪ್ರತಿನಿಧಿಗಳು ನೀಡಿದ ಗೌರವ ಮತ್ತು ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕರ್ನಾಟಕದಾದ್ಯಂತ ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಶಾಸಕರ ವೇದಿಕೆಯು ಆತ್ಮೀಯತೆಯಿಂದ ಬೀದರ್‌ಗೆ ಆಹ್ವಾನಿಸಿ ಸನ್ಮಾನಿಸಿರುವುದು ತಮ್ಮ ರಾಜಕೀಯ ಜೀವನದ ಪ್ರಮುಖ ಕ್ಷಣಗಳಲ್ಲಿ ಒಂದಾಗಿದೆ ಎಂದು ಎನ್.ಎ. ಹ್ಯಾರಿಸ್ ಬಣ್ಣಿಸಿದರು.
ಈ ಸನ್ಮಾನವನ್ನು ಕೇವಲ ಅಭಿನಂದನೆಯಾಗಿ ಸ್ವೀಕರಿಸುವುದಿಲ್ಲ. ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ, ಹಕ್ಕುಗಳ ರಕ್ಷಣೆ ಹಾಗೂ ಸಮುದಾಯದಲ್ಲಿ ಒಗ್ಗಟ್ಟು ಮತ್ತು ಪ್ರಗತಿಗಾಗಿ ಇನ್ನಷ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಹೊಣೆಗಾರಿಕೆಯಾಗಿ ಸ್ವೀಕರಿಸುತ್ತೇನೆ ಎಂದು ಅವರು ತಿಳಿಸಿದರು.ಎರಡು ದಿನಗಳ ಪ್ರವಾಸ: ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಿಗೆ ಎರಡು ದಿನ ಪ್ರವಾಸ ಕೈಗೊಂಡಿದ್ದ ಎನ್.ಎ.ಹ್ಯಾರಿಸ್ ಅವರು ಕಾಂಗ್ರೆಸ್ ಪಕ್ಷದ ಹಲವು ಮುಖಂಡರನ್ನು, ಕಾರ್ಯಕರ್ತರನ್ನು ಸ್ಥಳೀಯ ಜನಪ್ರತಿನಿಧಿಗಳನ್ನು, ಧಾರ್ಮಿಕ ನಾಯಕರುಗಳನ್ನು ಭೇಟಿ ಮಾಡಿದರು. ಹಲವು ಶ್ರದ್ಧಾಕೇಂದ್ರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಮಂಗಳವಾರ ಬೀದರ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಎನ್.ಎ.ಹ್ಯಾರಿಸ್ ಅವರಿಗೆ ಯುವ ಕಾಂಗ್ರೆಸ್ ಹಾಗೂ ಬೀದರ್ ಜನರಿಂದ ಅದ್ಧೂರಿ ಸ್ವಾಗತ ದೊರೆ ಯಿತು. ಮೊದಲಿಗೆ ಸಿಖ್ ಧರ್ಮದ ಪವಿತ್ರ ಯಾತ್ರಾ ಕೇಂದ್ರ ಗುರುನಾನಕ್ ಝೀರಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.ಬಳಿಕ ಸೆಂಟ್ ಪೌಲ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ಗೆ ಪ್ರಯಾಣ ಬೆಳೆಸಿ, ಚರ್ಚ್‌ನ ಧಾರ್ಮಿಕ ಮುಖಂಡರು ಹಾಗೂ ಸಮುದಾಯದ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. ಬೀದರ್ ನಗರದ ಶಾಹೀನ್ ಗ್ರೂಪ್ ಶಿಕ್ಷಣ ಸಂಸ್ಥೆಗೆ ತೆರಳಿ, ಸಮೂಹದ ಮುಖ್ಯಸ್ಥರು ಸೇರಿದಂತೆ ಹಲವರೊಂದಿಗೆ ಚರ್ಚಿಸಿದರು. ಬಳಿಕ ನಗರದ ಮನಿಯಾರ್ ತಾಲೀಮ್ ನಲ್ಲಿರುವ ಜಾಮಿಯಾ ಇಸ್ಲಾಮಿಯಾ ಮದೀನತ್ ಉಲ್ ಉಲೂಮ್ ನಲ್ಲಿ ಮದರಸಾ ಪ್ರತಿನಿಧಿಗಳು ಮತ್ತು ಉಲೇಮಾ ಗಳೊಂದಿಗೆ ಸಂವಾದ ನಡೆಸಿದರು.
ಬೀದರಿನ ಹೀಲಿಂಗ್ ಟ್ರೀ ಆಸ್ಪತ್ರೆಯಲ್ಲಿ ಸರ್ಕಾರೇತರ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು, ಶಿಕ್ಷಣ ತಜ್ಞರು ಹಾಗೂ ನಾಗರಿಕ ಸಮಾಜದ ಪ್ರತಿನಿಧಿ ಗಳೊಂದಿಗೆ ಆಯೋಜಿಸಿದ್ದ ಮಹತ್ವದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದರ ಜೊತೆಗೆ ಬೀದರಿನ ಉರ್ದು ಮಾಧ್ಯಮ ಹಾಗೂ ಪತ್ರಿಕಾ ಮಿತ್ರರನ್ನು ಭೇಟಿಯಾಗಿ ಮಾತನಾಡಿದರು.ನೂತನವಾಗಿ ಆರಂಭಗೊಂಡ ಅರ್ವಿತಾ ಆಸ್ಪತ್ರೆಯ ಶುಭಾರಂಭ ಸಮಾರಂಭದಲ್ಲಿ ಪಾಲ್ಗೊಂಡು, ಆಸ್ಪತ್ರೆಯ ಮಾಲೀಕರು ಹಾಗೂ ಆಡಳಿತ ಮಂಡಳಿಗೆ ಶುಭ ಕೋರಿದರು. ಸರ್ವಧರ್ಮ ಸಮನ್ವಯದ ಪ್ರತೀಕವಾದ ಹಜರತ್ ಮುಲ್ತಾನಿ ಬಾದ್ ಷಾ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಮನ್ನಾಎಖ್ಖೇಳ್ಳಿಯ ಡಾ.ಅಂಬೇಡ್ಕರ್ ವೃತ್ತದಲ್ಲಿ ನಡೆದ ಯುವ ಕಾಂಗ್ರೆಸ್ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಬಳಿಕ ಕಲಬುರಗಿಯತ್ತ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಅಲ್ಪಸಂಖ್ಯಾತ ಶಾಸಕರ ವೇದಿಕೆಯ ಜಂಟಿ ಕಾರ್ಯದರ್ಶಿಯೂ ಆದ ಬಿಲ್ಕಿಸ್ ಬಾನು, ಶಾಸಕರಾದ ರಹೀಂ ಖಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನ್ನಾನ್ ಸೇಠ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಫರೀದ್ ಖಾನ್ ಸೇರಿದಂತೆ ಇನ್ನಿತರರು ಹಾಜರಿದ್ದರು.