ಹಾನಗಲ್ಲ ಪುರಸಭೆ ಕುರ್ಚಿಗಾಗಿ ಶುರುವಾಗಿದೆ ಪೈಪೋಟಿ

| Published : Aug 09 2024, 12:51 AM IST

ಸಾರಾಂಶ

ಹಾಗನಲ್ಲ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಸಾಮಾನ್ಯ ಅಧ್ಯಕ್ಷ, ಹಿಂದುಳಿದ ಬ ವರ್ಗದ ಮಹಿಳೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿದೆ. ಸಾಮಾಜಿಕ ನ್ಯಾಯದ ದಂಡ ಶಾಸಕ ಶ್ರೀನಿವಾಸ ಮಾನೆ ಅವರ ಕೈಯಲ್ಲಿದೆ.

ಹಾನಗಲ್ಲ: ಇಪ್ಪತ್ಮೂರು ಸದಸ್ಯ ಬಲ ಹೊಂದಿದ ಹಾನಗಲ್ಲ ಪುರಸಭೆಗೆ ಸಾಮಾನ್ಯ ಅಧ್ಯಕ್ಷ, ಹಿಂದುಳಿದ ಬ ವರ್ಗದ ಮಹಿಳೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿರುವುದರಿಂದ ಸದಸ್ಯರಲ್ಲಿ ತೀವ್ರ ಪೈಪೋಟಿ ಇದೆ. ಹೈಕಮಾಂಡ್ ನಿರ್ಣಯವೇ ಸೈ ಎಂಬ ಕೈ ಸದಸ್ಯರಲ್ಲಿ ಒಮ್ಮತಾಭಿಪ್ರಾಯ ಮೂಡಿದಂತಿದೆ. ಸಾಮಾಜಿಕ ನ್ಯಾಯದ ದಂಡ ಶಾಸಕ ಶ್ರೀನಿವಾಸ ಮಾನೆ ಅವರ ಕೈಯಲ್ಲಿದೆ.

೪ ಬಿಜೆಪಿ, ಓರ್ವ ಪಕ್ಷೇತರ ಸದಸ್ಯರನ್ನು ಹೊರತುಪಡಿಸಿ ೧೮ ಸದಸ್ಯರು ಕಾಂಗ್ರೆಸ್‌ನವರಾಗಿದ್ದಾರೆ. ಹಾಲಿ ಸದಸ್ಯರಲ್ಲಿ ಖುರ್ಷಿದ ಹುಲ್ಲತ್ತಿ, ನಾಗಪ್ಪ ಸವದತ್ತಿ, ವಿಕಾಸ ನಿಂಗೋಜಿ ಅಧ್ಯಕ್ಷರಾಗಿ ಇದೇ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಲು ಭಾರೀ ಪೈಪೋಟಿ ನೀಡಿದ ರಾಧಿಕಾ ದೇಶಪಾಂಡೆ, ವೀಣಾ ಗುಡಿ, ಮಹೇಶ ಪವಾಡಿ ಮತ್ತೆ ಪೈಪೋಟಿಯ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಮಮತಾ ಆರೆಗೊಪ್ಪ, ಎಸ್.ಕೆ. ಪೀರಜಾದೆ, ವಿರೂಪಾಕ್ಷಪ್ಪ ಕಡಬಗೇರಿ, ಪರಶುರಾಮ ಖಂಡೂನವರ ಕೂಡ ಅಧ್ಯಕ್ಷರಾಗುವ ಆಕಾಂಕ್ಷೆ ಹೊಂದಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯೆ ವೀಣಾ ಗುಡಿ ಮಾತ್ರ ಮೀಸಲಾತಿಗೆ ಒಳಪಡಲಿದ್ದಾರೆ. ಅವರು ಕೂಡ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿಯೂ ಇದ್ದಾರೆ. ಇದರಲ್ಲಿ ಹೈಕಮಾಂಡಗೆ ಯೋಚಿಸಿ ನಿರ್ಣಯಿಸುವ ಸೂಕ್ಷ್ಮತೆ ಎದುರಾಗಿದೆ.

ಸಾಮಾಜಿಕ ನ್ಯಾಯದ ನೆಲೆಯಲ್ಲಿ ಹಾನಗಲ್ಲ ಪುರಸಭೆ ಆದಾಗಿನಿಂದ ಇಲ್ಲಿನ ಬ್ರಾಹ್ಮಣ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಲಭಿಸಿಲ್ಲ ಎಂಬ ಚರ್ಚೆ ನಡೆಯುತ್ತಿದೆ. ಹಾಗೇನಾದರೂ ಆದಲ್ಲಿ ರಾಧಿಕಾ ದೇಶಪಾಂಡೆ ಅಧ್ಯಕ್ಷರಾಗುವುದು ಬಹುತೇಕ ಖಚಿತ. ಅಧ್ಯಕ್ಷರಾಗಲು ಭಾರೀ ಅಕಾಂಕ್ಷೆ ಹೊಂದಿರುವ ಮಹೇಶ ಪವಾಡಿ ಇದೇ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ ಎಂಬ ಚರ್ಚೆಯೂ ಇದೆ. ಇನ್ನು ವೀಣಾ ಗುಡಿ ಅವರಿಗೆ ಉಪಾಧ್ಯಕ್ಷ ಸ್ಥಾನ ಖಚಿತ ಎಂತಾದರೂ ಅಧ್ಯಕ್ಷರಾಗುವ ಹಂಬಲ ಹೊಂದಿದ್ದಾರೆ. ಉಪಾಧ್ಯಕ್ಷರಾಗಲು ಅವರೊಬ್ಬರೇ ಅಧಿಕೃತ ಮೀಸಲು ಅಭ್ಯರ್ಥಿಯಾಗಿರುವುದರಿಂದ ಹೈಕಮಾಂಡ್ ಅವರ ಮನವೊಲಿಸುವ ಸಾಧ್ಯತೆ ಇದೆ.

ಇದೇ ಅವಧಿಯಲ್ಲಿ ಕಾಂಗ್ರೆಸ್‌ನ ೧೮ ಸದಸ್ಯರಲ್ಲಿ ಮಹೇಶ ಪವಾಡಿ, ಶಂಶಿಯಾಬಾನು ಬಾಳೂರ, ರವಿ ಹನುಮನಕೊಪ್ಪ ಉಪಾಧ್ಯಕ್ಷರಾಗಿ ಅವಕಾಶ ಪಡೆದಿದ್ದಾರೆ. ಈಗಿರುವ ಪುರಸಭೆ ಸದಸ್ಯರಲ್ಲಿ ಸರ್ವರಬಾಷಾ ಪೀರಜಾದೆ, ಹಸೀನಾಬಿ ನಾಯಕನವರ, ನಾಗಪ್ಪ ಸವದತ್ತಿ, ಖುರ್ಷಿದ ಅಹಮ್ಮದ್ ಹುಲ್ಲತ್ತಿ, ಅನಂತವಿಕಾಸ ನಿಂಗೋಜಿ ಹಿಂದೆ ಅಧ್ಯಕ್ಷರಾಗಿದ್ದವರಾಗಿದ್ದಾರೆ.

ಅವಧಿ ಹಂಚಿಕೆ: ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಈಗ ಉಳಿದಿರುವ ಅವಧಿ ಕೇವಲ ೧೩ ತಿಂಗಳು. ಅದರಲ್ಲಿಯೇ ಮತ್ತೆ ಅವಧಿ ಹಂಚಿಕೆ ಅಸಾಧ್ಯ ಎಂಬ ಚರ್ಚೆ ಇದೆಯಾದರೂ, ಹಿಂದಿನಂತೆ ಈ ಅವಧಿಯನ್ನು ಎರಡು ಅವಧಿ ಮಾಡಲಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಎಲ್ಲವೂ ಹೈಕಮಾಂಡ್ ಅಂಗಳದಲ್ಲಿದೆ. ಶಾಸಕ ಶ್ರೀನಿವಾಸ ಮಾನೆ ಅವರೇ ಈಗ ಎಲ್ಲವನ್ನೂ ಸಮತೋಲನದಲ್ಲಿ ನಿರ್ಣಯಿಸಬೇಕಾದ ಅನಿವಾರ್ಯತೆ ಇದೆ.