ಸಾರಾಂಶ
ಹಾವೇರಿ: ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ. ಶ್ಯಾಮ ಭಟ್ ಮತ್ತು ಸದಸ್ಯರು ಗುರುವಾರ ನಗರದ ಬಸ್ ನಿಲ್ದಾಣ, ಹಾಸ್ಟೆಲ್, ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಮಳಿಗೆ ವ್ಯಾಪಾರಿಗಳ ಜತೆ ಮಾತನಾಡಿದರು. ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯ ಎದುರು ದರಪಟ್ಟಿಯ ಬೋರ್ಡ್ ಅಳವಡಿಕೆಗೆ ಸೂಚನೆ ನೀಡಿ, ಹೆಚ್ಚುವರಿ ಹಣ ಪಡೆಯದಂತೆ ಸೂಚನೆ ನೀಡಿದರು.ಆನಂತರ ಬಸ್ ನಿಲ್ದಾಣದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕಾಯಿನ್ ಹಾಕಿ ನೀರು ಬರುವ ಕುರಿತು ಪರಿಶೀಲಿಸಿದರು. ಅಲ್ಲಿದ್ದ ಪ್ರಯಾಣಿಕರಿಂದ ಮಾಹಿತಿ ಪಡೆದಾಗ ಅದು ಸರಿಯಾಗಿಲ್ಲ ಎಂದು ತಿಳಿದು ಕೂಡಲೇ ಸರಿಪಡಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆನಂತರ ಶ್ರೀಕಂಠಪ್ಪ ಬಡಾವಣೆಯ ಹಾಸ್ಟೆಲ್‌ಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳಿಗೆ ಪೂರೈಸುವ ಆಹಾರ ಪರಿಶೀಲಿಸಿದರು. ಎಪ್ರಾನ್ ಧರಿಸಿದ್ದ ಅಡುಗೆ ಸಿಬ್ಬಂದಿಯನ್ನು ಮಾತನಾಡಿಸಿ, ಡ್ರೆಸ್ ಡೇಲಿ ಹಾಕ್ತೀರಾ, ಹೊಸದು ಇದ್ದಂತಿದೆ, ವಿಸಿಟ್ ಇದ್ದಾಗ ಮಾತ್ರವೇ ಹಾಕೋದಾ ಎಂದು ಪ್ರಶ್ನಿಸಿದರು. ಸ್ಥಳದಲ್ಲಿದ್ದ ವಾರ್ಡನ್ ಮುದಿಗೌಡ್ರ ಮಾತನಾಡಿ, ಪ್ರತಿ ದಿನ ಬೇರೆ ಬೇರೆ ಎಪ್ರಾನ್ ಧರಿಸುತ್ತಾರೆ ಎಂದು ಮಾಹಿತಿ ನೀಡಿದರು. ಜಿರಲೆ, ಹಲ್ಲಿ ಬರದಂತೆ ಸ್ವಚ್ಛತೆಗೆ ಒತ್ತು ನೀಡಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಬೇಕು. ವಿದ್ಯಾರ್ಥಿಗಳಿಗೆ ಮೆಡಿಕಲ್ ಚೆಕ್‌ಅಪ್, ಸಿಸಿ ಕ್ಯಾಮೆರಾ, ವಾಚ್‌ಮನ್, ನೈಟ್ ವಾಚ್‌ಮನ್, ಮಾಸಿಕ ಕಿಟ್ ನೀಡುವ ಕುರಿತು ಮಾಹಿತಿ ಪಡೆದ ಅವರು, ಹಾಸ್ಟೆಲ್‌ನಲ್ಲಿರುವ ಕಂಪ್ಯೂಟರ್ ಲ್ಯಾಬ್ ಪರಿಶೀಲನೆ ಮಾಡಿ, ಸಿಸಿ ಕ್ಯಾಮೆರಾಗೆ ದೊಡ್ಡ ಮಾನಿಟರ್ ಹಾಕಿಸಲು ಸೂಚಿಸಿದರು.ಇದೇ ವೇಳೆ ಸ್ಥಳೀಯ ನಾಗರಿಕರು ಆಯೋಗದ ಮುಖ್ಯಸ್ಥರಿಗೆ ಮನವಿ ಸಲ್ಲಿಸಿ, ಇದು ಖಾಸಗಿ ವ್ಯಕ್ತಿಗಳು ಮಾಡಿದ ನಿವೇಶನವಾಗಿದ್ದು, ಕಳೆದ ೨೫ ವರ್ಷಗಳಿಂದ ಡ್ರೈನೇಜ್ ಸಮಸ್ಯೆ ಇದೆ. ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ಒತ್ತಾಯಿಸಿದರು.
ಆನಂತರ ಅಲ್ಲಿಂದ ಕಾರಾಗೃಹಕ್ಕೆ ಭೇಟಿ ನೀಡಿದ ಆಯೋಗದ ತಂಡ ಸಹಾಯಕ ಜೈಲರ್ ಬಿ.ಯು. ಖಿಲಾರಿ ಅವರಿಂದ ಮಾಹಿತಿ ಪಡೆದುಕೊಂಡರು. ಅಲ್ಲಿನ ಕೈದಿಗಳ ಜತೆ ಮಾತನಾಡಿದ ಅವರು, ಊಟ, ತಿಂಡಿ ಸರಿಯಾಗಿ ಕೊಡ್ತಾರಾ? ವಕೀಲರನ್ನು ಇಟ್ಟುಕೊಂಡಿದ್ದಿರಾ? ಏನಾದರೂ ಸಮಸ್ಯೆ ಇದ್ರೆ ಹೇಳಿ ಎಂದರು.ತದನಂತರ ಮದ್ಯ ವ್ಯಸನಮುಕ್ತ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿದ್ದವರಿಗೆ ಕೇಂದ್ರಕ್ಕೆ ಬಂದ ಮೇಲೆ ಚಟ ಬಿಟ್ಟಿದ್ದೀರಾ? ಕೌನ್ಸೆಲಿಂಗ್ ಹೇಗೆ? ಎಂದು ಹಲವು ಆಯಾಮಗಳಲ್ಲಿ ಪ್ರಶ್ನಿಸಿ, ಕೇಂದ್ರದ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಸ್ವಾಧಾರ ಕೇಂದ್ರ ಬಂದ್ ಆಗಿದೆ. ಉಳಿದುಕೊಳ್ಳುವ ಮಹಿಳಾ ಸಂತ್ರಸ್ತರನ್ನು ಹುಬ್ಬಳ್ಳಿ ಇಲ್ಲವೇ ದಾವಣಗೆರೆಗೆ ಕಳುಹಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಮಾಹಿತಿ ನೀಡಿದರು.ಈ ವೇಳೆ ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ಗ್ರೇಡ್-೨ ತಹಸೀಲ್ದಾರ್ ಅಮೃತಗೌಡ ಪಾಟೀಲ ಇತರರು ಇದ್ದರು.