ಹಾವೇರಿ ಜಿಲ್ಲಾದ್ಯಂತ ನಾಗರ ಪಂಚಮಿ ಸಂಭ್ರಮ

| Published : Aug 09 2024, 12:51 AM IST

ಸಾರಾಂಶ

ಹಾವೇರಿ ಜಿಲ್ಲಾದ್ಯಂತ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ದೇವಸ್ಥಾನ, ಅರಳಿಕಟ್ಟೆ, ಬನ್ನಿಮರ, ನಾಗರಕಟ್ಟೆಯಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗೆ ಹಾಲು ಎರೆದು ಭಕ್ತಿಭಾವ ಸಮರ್ಪಿಸಿದರು.

ಹಾವೇರಿ: ಜಿಲ್ಲಾದ್ಯಂತ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.

ವಿವಿಧ ದೇವಸ್ಥಾನ, ಅರಳಿಕಟ್ಟೆ, ಬನ್ನಿಮರ, ನಾಗರಕಟ್ಟೆಯಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗೆ ಹಾಲು ಎರೆದು ಭಕ್ತಿಭಾವ ಸಮರ್ಪಿಸಿದರು. ನಾಗರ ಪಂಚಮಿ ನಿಮಿತ್ತ ದೇವರಿಗೆ ತಂಬಿಟ್ಟಿನ ಉಂಡಿ, ಕಡಲೆ ಉಂಡಿ, ಶೇಂಗಾ ಉಂಡಿ, ಅಂಟಿನ ಉಂಡಿ, ಎಳ್ಳು ಉಂಡಿ, ಜೋಳದ ಅರಳು, ನೆನೆಸಿದ ಕಡಲೆ ಮೊದಲಾದ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಮಾಡಿದರು.

ಜಿಲ್ಲೆಯ ಬಹುತೇಕ ಮನೆಗಳಲ್ಲಿ ಮಣ್ಣಿನ ಇಲ್ಲವೇ ಬೆಳ್ಳಿ-ಬಂಗಾರದ ನಾಗ ಮೂರ್ತಿ ಇಟ್ಟು ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ ಹಾಲೆರೆದರು. ಮಕ್ಕಳು ಕೊಬ್ಬರಿ ಬಟ್ಟಲು ತಿರುಗಿಸುವ ಆಟ ಹಾಗೂ ಜೋಕಾಲಿ ಆಟವಾಡಿ ಸಂಭ್ರಮಿಸಿದರು. ಹೆಣ್ಣು ಮಕ್ಕಳ ಹಬ್ಬ ಎಂದು ಕರೆಸಿಕೊಳ್ಳುವ ಈ ಹಬ್ಬದಲ್ಲಿ ಹೊಸಬಟ್ಟೆಯುಟ್ಟ ಹೆಣ್ಣು ಮಕ್ಕಳ ಸಂಭ್ರಮ ಓಡಾಟ, ಜೋಕಾಲಿಯ ಜೀಕಾಟ ಎಲ್ಲೆಡೆ ಕಂಡು ಬಂದಿತು.

ನಾಗರ ಪಂಚಮಿ ಹಬ್ಬದಲ್ಲಿ ಮಕ್ಕಳು ಒಣ ಕೊಬ್ಬರಿ ಬಟ್ಟಲು ಆಟ ಆಡುತ್ತಲೇ ಜೋಕಾಲಿ ಆಡಿ ಸಂಭ್ರಮಿಸಿದರು. ಗುಳಗಿ ಉಂಡಿ, ಶೇಂಗಾ ಉಂಡಿ, ಬೇಸನ್ ಉಂಡಿ, ಅಂಟಿನ ಉಂಡೆ, ಮಂಡಕ್ಕಿ ಉಂಡಿ, ತಂಬಿಟ್ಟಿನ ಉಂಡಿ, ಹಿಟ್ಟಿನ ಉಂಡಿ, ಎಳ್ಳಿನ ಉಂಡಿ, ಕೊಬ್ಬರಿ ಉಂಡಿ ಹೀಗೆ ವಿವಿಧ ಬಗೆಯ ಉಂಡಿಗಳನ್ನು ಮಕ್ಕಳು ತಿಂದು ಸಂಭ್ರಮಿಸಿದರು.

ಗ್ರಾಮೀಣ ಭಾಗ ಸೇರಿದಂತೆ ಪಟ್ಟಣ, ನಗರ ಪ್ರದೇಶಗಳಲ್ಲಿ ಅಲ್ಲಲ್ಲಿ ಜೋಕಾಲಿಗಳನ್ನು ಕಟ್ಟಿ ಜೀಕಿ ಸಂಭ್ರಮಿಸಿದರು. ಗ್ರಾಮದ ದೊಡ್ಡ ಮರಗಳಿಗೆ ಬೃಹತ್ ಗಾತ್ರದ ಜೋಕಾಲಿ ಕಟ್ಟಿ, ಜೋಕಾಲಿ ಜೀಕುವುದರ ಜತೆಗೆ ಕೆಲ ಕಸರತ್ತಿನ ಆಟಗಳನ್ನು ಸಹ ಆಡಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಯುವಕರು, ಮಹಿಳೆಯರು ಗ್ರಾಮೀಣ ಕ್ರೀಡೆಗಳನ್ನು ಆಡಿ ಹಬ್ಬಕ್ಕೆ ಕ್ರೀಡಾ ಮೆರಗು ನೀಡಿದರು. ವಿವಿಧ ಬಗೆಯ ಶಕ್ತಿ ಮತ್ತು ಯುಕ್ತಿ ಪ್ರದರ್ಶನದಂತಹ ಅಪ್ಪಟ ಗ್ರಾಮೀಣ ಆಟಗಳನ್ನು ಆಡುವ ಮೂಲಕ ಸಂಭ್ರಮಿಸಿದರು.

ಗ್ರಾಮೀಣ ಭಾಗದಲ್ಲಿ ಬಯಲು ಪ್ರದೇಶ, ಆಟದ ಮೈದಾನ, ದೇವಸ್ಥಾನ ಎದುರು ಯುವಕರು ನಿಂಬೆ ಹಣ್ಣು ಎಸೆತ, ಗೋಲಿ ಎಸೆತ, ಕಣ್ಣಿಗೆ ಬಟ್ಟೆ ಕಟ್ಟಿ ಮನೆ ಅಥವಾ ಪ್ರದೇಶ ಗುರುತಿಸುವಂತಹ ಮೋಜಿನ ಕ್ರೀಡೆಗಳೊಂದಿಗೆ ಸಾಹಸ ಕ್ರೀಡೆಗಳನ್ನು ಆಡುವ ಮೂಲಕ ನಾಗರ ಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗುರುವಾರ ಹಬ್ಬ ಆಚರಿಸಿದರೆ, ಕೆಲ ಭಾಗದಲ್ಲಿ ಶುಕ್ರವಾರ ಹಬ್ಬವನ್ನು ಆಚರಿಸಲಾಗುತ್ತಿದೆ.

ಸಡಗರದಿಂದ ಜರುಗಿದ ನಾಗರ ಪಂಚಮಿ:

ರಾಣಿಬೆನ್ನೂರು ತಾಲೂಕಿನ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಜನರು ಗುರುವಾರ ನಾಗರ ಪಂಚಮಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ಹಬ್ಬದ ಪ್ರಯುಕ್ತ ಗೃಹಿಣಿಯರು ಬೆಳಗ್ಗೆಯಿಂದಲೇ ಮನೆಯ ಎದುರಿನಲ್ಲಿ ಚಿತ್ತಾಕರ್ಷಕ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಮನೆಗಳನ್ನು ಅಲಂಕರಿಸಿರುವುದು ಕಂಡುಬಂದಿತು. ಹಬ್ಬಕ್ಕಾಗಿ ವಿಶೇಷವಾಗಿ ತಯಾರಿಸಿದ ಶೇಂಗಾ, ದಾಣಿ, ಗುಳಿಗಿ, ಎಳ್ಳು, ಕಡ್ಲಿ, ಅಳ್ಳಿಟ್ಟು ಉಂಡಿಗಳನ್ನು ದೇವರಿಗೆ ನೈವೇದ್ಯ ಮಾಡಿ, ಸೇವಿಸಿ, ನೆರೆಹೊರೆಯವರಿಗೆ ಹಂಚಿ ಸಂಭ್ರಮಿಸಿದರು.

ಬ್ಯಾಡಗಿಯಲ್ಲಿ ನಾಗದೇವತೆಗೆ ವಿಶೇಷ ಪೂಜೆ:

ಬ್ಯಾಡಗಿ ಪಟ್ಟಣದಲ್ಲಿ ಗುರುವಾರ ನಾಗರ ಪಂಚಮಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.ಪಂಚಮಿ ನಿಮಿತ್ತ ನಾಗದೇವತೆಗಳಿಗೆ ಪೂಜೆ ನೆರವೇರಿಸಲಾಯಿತು. ತಾಲೂಕಿನಾದ್ಯಂತ ಬೆಳಗ್ಗೆಯಿಂದ ವಿಶೇಷ ಪೂಜೆಗಳು ನಡೆದವು, ನಾಗರಕಲ್ಲಿಗೆ ಹಾಲು ಎರೆದರು. ಮಹಿಳೆಯರು ಶುಭ್ರವಾದ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಬನ್ನಿ ಗಿಡಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿದ್ದ ಕಲ್ಲಿನ ನಾಗದೇವತೆಗಳಿಗೆ ಶ್ರದ್ಧಾಭಕ್ತಿಯಿಂದ ಹಾಲೆರೆದರು.ಉಂಡಿಗಳ ಹಬ್ಬ: ಗಂಡನ ಮನೆಗೆ ತೆರಳಿದ್ದ ಅಕ್ಕ-ತಂಗಿಯರನ್ನು ನಾಗರ ಪಂಚಮಿ ಹಬ್ಬದಂದು ಕರೆಸಿ, ಎಳ್ಳು, ಪುಟಾಣಿ, ಶೇಂಗಾ ಗುಳಿಗೆ ಇನ್ನಿತರ ವಿವಿಧ ಸಿಹಿ ಉಂಡಿಗಳನ್ನು ಕೊಟ್ಟು, ಉಡುಗೊರೆ ನೀಡಲಾಗುತ್ತದೆ.

ಹಿರೇಕೆರೂರಲ್ಲಿ ನಾಗಪ್ಪಗೆ ವಿಶೇಷ ಪೂಜೆ, ನೈವೇದ್ಯ:

ಹಿರೇಕೆರೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶ್ರಾವಣ ಮಾಸದ ಮೊದಲಿಗೆ ಬರುವ ನಾಗರ ಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ನಾಗ ದೇವರಿಗೆ ಮತ್ತು ಮನೆಯಲ್ಲಿ ಮಣ್ಣಿನ ನಾಗಪ್ಪನನ್ನು ನಿರ್ಮಿಸಿ ಹಾಲು ಎರೆದು, ಗ್ರಾಮದ ಎಲ್ಲ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಬಗೆ ಬಗೆಯ ಉಂಡಿಗಳನ್ನು ತಯಾರಿಸಿ ನೈವೇದ್ಯ ಮಾಡಿ ಹಬ್ಬ ಆಚರಿಸಿದರು. ಮಹಿಳೆಯರು, ಮಕ್ಕಳು ಹೊಸ ಬಟ್ಟೆ ತೊಟ್ಟು ಜೋಕಾಲಿ ಜೀಕಿ ಸಂಭ್ರಮಿಸಿದರು.