ಸಾರಾಂಶ
ಬೆಳ್ತಂಗಡಿ : ಐದು ವರ್ಷಗಳ ಹಿಂದಿನ ಅನಿರೀಕ್ಷಿತ ಪ್ರವಾಹದಿಂದ ತತ್ತರಿಸಿದ್ದ ಬೆಳ್ತಂಗಡಿ ತಾಲೂಕಿನ ಗ್ರಾಮಾಂತರ ಕೊಳಂಬೆ ಪ್ರದೇಶದ ಜನರು ಇಂದು ಕಹಿ ಘಟನೆ ಮರೆತು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದಾರೆ. ಇಂತಹ ದುರ್ಘಟನೆ ಎಲ್ಲೂ ಮರಕಳಿಸದಿರಲಿ. ಅಂದಿನ ಕಹಿ ಘಟನೆಗಳನ್ನು ಮರೆತು ಭವಿಷ್ಯದ ಸುಂದರ ಬದುಕನ್ನು ಮುಂದುವರಿಸೋಣ ಎಂದು ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು.
ಅವರು ಗುರುವಾರ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಬಳಿಯ ಕೊಳಂಬೆಯಲ್ಲಿ 5 ವರ್ಷಗಳ ಹಿಂದೆ ಆಗಸ್ಟ್ 9ರಂದು ಭೀಕರ ಪ್ರವಾಹದಿಂದ ಮನೆ ಆಸ್ತಿ ಕಳೆದುಕೊಂಡು ದಿಕ್ಕು ತೋಚದಂತಾದಾಗ ಮರು ಸೃಷ್ಟಿಯಿಂದ ಬದುಕಿನಲ್ಲಿ ಭರವಸೆ ಮೂಡಿಸಲಾಗಿತ್ತು. ಅಂತಹ ಘಟನೆ ಮತ್ತೆ ಮರುಕಳಿಸದಂತೆ ಮೃತ್ಯುಂಜಯ ನದಿಗೆ ಹಾಲೆರೆಯುವ ಹಾಗೂ ಕೇರಳದ ವಯನಾಡು ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತ ಅವರು ಮಾತನಾಡಿದರು.
ಅಂದು ಇಲ್ಲಿಯ ಪ್ರವಾಹ ಸಂತ್ರಸ್ತ ಜನ ಮನೆಗಳನ್ನೆಲ್ಲ ಕಳೆದುಕೊಂಡು ಊರನ್ನು ತೊರೆಯಲು ಮುಂದಾಗಿದ್ದರು. ಆದರೆ ಅವರ ಮನವೊಲಿಸಿ ಇಲ್ಲಿಯೇ ನೆಲೆಸುವಂತೆ ಪುನರ್ನಿರ್ಮಾಣ ಕಾರ್ಯ ಮಾಡಲಾಗಿದೆ. 12 ಮನೆಗಳನ್ನು ನಿರ್ಮಿಸಿ ಕೊಡುವಲ್ಲಿ, 1,500 ಅಡಕೆ ಗಿಡ ನೆಡಲು, ಗದ್ದೆಗಳ ಹೂಳು ತೆರವು ಸಹಿತ ಅನೇಕ ಕಾರ್ಯಗಳಲ್ಲಿ ಬದುಕು ಕಟ್ಟೋಣ ಬನ್ನಿ ತಂಡ ಇತರ ಸೇವಾ ಸಂಘಟನೆಗಳ ಜತೆ ಕೈಜೋಡಿಸಿದೆ. ಮುಂದೆ ನಮ್ಮ ತಂಡದ ಸೇವಾ ಕಾರ್ಯವನ್ನು ಇನ್ನಷ್ಟು ವಿಸ್ತರಿಸುವ ಕನಸು ಹೊತ್ತಿದ್ದೇವೆ ಎಂದರು.
ಅಂದಿನ ಪ್ರವಾಹದಲ್ಲಿ ಸರ್ವಸ್ವವನ್ನೂ ಕಳೆ ದುಕೊಂಡ ಸಂತ್ರಸ್ತೆ ಯಶೋದಾ ಮಾತನಾಡಿ ಕೊಳಂಬೆಯ ಸಮಗ್ರ ಅಭಿವೃದ್ಧಿಯಲ್ಲಿ ಬದುಕು ಕಟ್ಟೋಣ ತಂಡದ ಪಾತ್ರ ಹಿರಿದಾಗಿದೆ. ಇಲ್ಲಿಯ ಜನರು ಇಲ್ಲೇ ಜೀವನ ಮರು ರೂಪಿಸಲು ಪಣತೊಟ್ಟು ಕೆಲಸ ಮಾಡಿದ ತಂಡಕ್ಕೆ ನಾವು ಆಭಾರಿಗಳಾಗಿದ್ದೇವೆ. ಇವರ ಸೇವೆ ರಾಜ್ಯವೇ ಗುರುತಿಸುವಂತಹ ಕೆಲಸ ಮಾಡಿದೆ. ಪ್ರವಾಹದಿಂದ ನಿರ್ಗತಿಕರಾಗಿದ್ದ ನಾವು ಮತ್ತೆ ಹಿಂದಿನ ಸ್ಥಿತಿಗೆ ಮರಳಿದ್ದೇವೆ ಎಂದರೆ ಅದಕ್ಕೆ ಈ ತಂಡವೇ ಕಾರಣ ಎಂದು ಸ್ಮರಿಸಿದರು.
ಉಜಿರೆ ಎಸ್‌ಡಿಎಂ ಕಾಲೇಜಿನ ಎನ್ನೆಸ್ಸೆಸ್ ಘಟಕದ ಯೋಜನಾಧಿಕಾರಿ ಡಾ. ಮಹೇಶ್ ಶೆಟ್ಟಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಮಾತನಾಡಿದರು. ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ರಾಜೇಶ್ ಪೈ, ತಾ.ಪಂ. ಮಾಜಿ ಸದಸ್ಯ ಶಶಿಧರ ಕಲ್ಮಂಜ, ಕೊಳಂಬೆ ಪರಿಸರದ ನಾಗರಿಕರು ಉಪಸ್ಥಿತರಿದ್ದರು. ಕಿರಣ್ ದೊಂಡೋಲೆ ಕಾರ್ಯಕ್ರಮ ನಿರೂಪಿಸಿದರು.
ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ಉಜಿರೆ ಎಸ್ ಡಿ ಎಂ ಸ್ವಾಯತ್ತ ಕಾಲೇಜಿನ ಎನ್ನೆಸ್ಸೆಸ್ ವಿಭಾಗದ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಯನಾಡು ದುರಂತದಲ್ಲಿ ಮಡಿದವರ ಸದ್ಗತಿಗೆ ಪ್ರಾರ್ಥನೆ ಹಾಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೃತ್ಯುಂಜಯ ನದಿಗೆ ಹಾಲೆರೆಯುವ ಮೂಲಕ ಮತ್ತೆಂದೂ ಇಂತಹ ಪ್ರಕೃತಿ ವಿಕೋಪದ ಕಹಿ ಘಟನೆ ನಡೆಯದಂತೆ ಪ್ರಾರ್ಥಿಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))