ಕೆ.ಮಲ್ಲಾಪೂರ ಶಾಲೆಗೆ ತಾಪಂ ಇಒ ಭೇಟಿ, ಪರಿಶೀಲನೆ

| Published : Aug 09 2024, 12:51 AM IST

ಸಾರಾಂಶ

ತಾಲೂಕಿನ ಕರಡೋಣ ಗ್ರಾಪಂ ವ್ಯಾಪ್ತಿಯ ಕೆ.ಮಲ್ಲಾಪೂರ ಗ್ರಾಮದ ಸರ್ಕಾರಿ ಶಾಲೆಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಟಿ. ರಾಜಶೇಖರ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಕನಕಗಿರಿ

ತಾಲೂಕಿನ ಕರಡೋಣ ಗ್ರಾಪಂ ವ್ಯಾಪ್ತಿಯ ಕೆ.ಮಲ್ಲಾಪೂರ ಗ್ರಾಮದ ಸರ್ಕಾರಿ ಶಾಲೆಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಟಿ. ರಾಜಶೇಖರ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.ಬಳಿಕ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಜೆಜೆಎಂ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು. ಮೇನ್ ಗೇಟ್ ಅಳವಡಿಸುವುದಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮೀಣ ಭಾಗದ ಮಕ್ಕಳ ಕಲಿಕೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಎಲ್ಲರೂ ಯೋಜನೆ ಸದ್ಬಳಕೆ ಮಾಡಿಕೊಂಡು ಶಾಲೆಗೆ ಕೀರ್ತಿ ತರಬೇಕು ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಡೆಂಘೀ ಸೋಂಕು ಹರಡುವ ಸಾಧ್ಯತೆಗಳಿದ್ದು, ಶಿಕ್ಷಕರು ಹೆಚ್ಚಿನ ಜಾಗೃತಿ ವಹಿಸಬೇಕು. ಊಟದ ಸಮಯದಲ್ಲಿ ಮಕ್ಕಳಿಗೆ ಕೈ ತೊಳೆಯುವ ಕುರಿತು ಜಾಗೃತಿ ಮೂಡಿಸಬೇಕು. ಕಲಿಕೆಗೆ ಹೆಚ್ಚು ಆದ್ಯತೆ ನೀಡುವಂತೆ ಶಿಕ್ಷಕರಿಗೆ ಸೂಚಿಸಿದ್ದೇನೆ ಎಂದು ರಾಜಶೇಖರ ತಿಳಿಸಿದರು.

ಶಾಲೆಯಲ್ಲಿ ಮೂಲಸೌಲಭ್ಯ ಕೊರತೆ ಕುರಿತು ಪಂಚಾಯಿತಿಗೆ ಮನವಿ ಸಲ್ಲಿಸಿದ್ದರಿಂದ ಮಲ್ಲಾಪೂರ ಶಾಲೆಗೆ ಇಒ ಭೇಟಿ ನೀಡಿದ್ದು, ಗೇಟ್ ಅಳವಡಿಸುವುದು, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು, ಶೌಚಾಲಯ, ಮೈದಾನ ನಿರ್ಮಾಣ ಮಾಡುವ ಕುರಿತು ರೈತ ಮುಖಂಡರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಹಿರೇ ಹನುಮಂತ ಗುಡದೂರು, ಪಿಡಿಒ ನಾಗಲಿಂಗಪ್ಪ ರ‍್ಯಾವಣಕಿ, ರೈತ ಸಂಘದ ಮುಖಂಡರಾದ ಸೋಮನಾಥಗೌಡ, ರೇಣುಕಪ್ಪ ಕೆ., ಬಸವರಾಜ ಕುಷ್ಟಗಿ, ಕನಕಪ್ಪ ಹಂಚಿನಾಳ, ದುರಗಪ್ಪ ನವಲಿ, ಭೀಮನಗೌಡ ಜರ‍್ಹಾಳ ಸೇರಿದಂತೆ ಶಿಕ್ಷಕರು ಇದ್ದರು.ನಾಗಬನದಲ್ಲಿ ನಾಗರ ಪಂಚಮಿ ಸಂಭ್ರಮ:

ಶ್ರಾವಣ ಮಾಸದ ಮೊದಲನೇ ಹಬ್ಬವಾದ ನಾಗರ ಪಂಚಮಿಯನ್ನು ಕನಕಗಿರಿ ತಾಲೂಕಿನಾದ್ಯಂತ ನಾಗಬನಗಳಲ್ಲಿನ ನಾಗಮೂರ್ತಿಗಳಿಗೆ ಹಾಲೆರೆಯುವ ಮೂಲಕ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.

ಹೊಸ ಉಡುಪು ಧರಿಸಿದ ಮಹಿಳೆಯರು, ಚಿಕ್ಕಮಕ್ಕಳು ತಂಡೋಪತಂಡವಾಗಿ ಮನೆಯ ಸುತ್ತಮುತ್ತಲಿನ ನಾಗಬನ ಅಥವಾ ಮನೆಯಲ್ಲಿನ ನಾಗಮೂರ್ತಿಗಳಿಗೆ ಪೂಜೆ ಸಲ್ಲಿಸಿ ಹಾಲು ಹಾಕಿದರು. ಇನ್ನೂ ಮನೆಯಲ್ಲಿ ತಯಾರಿಸಿದ್ದ ಶೇಂಗಾ, ಎಳ್ಳು, ಮಂಡಕ್ಕಿ, ಪುಟಾಣಿ, ಗಾರಿಗೆ, ಕಾಳು, ಉತ್ತರ ಕರ್ನಾಟಕದ ವಗ್ಗರಣೆ, ಬಜ್ಜಿಯನ್ನು ದೇವರಿಗೆ ನೈವೇದ್ಯ ಸಮರ್ಪಿಸಿ ಭಕ್ತಿ ಮೆರೆದರು.ಪಟ್ಟಣದ ಕೊಂಡದಪೇಟೆ ಪರಿಸರದಲ್ಲಿರುವ ಐತಿಹಾಸಿಕ ಏಳು ಹೇಡೆ ನಾಗಮೂರ್ತಿ, ಶ್ರೀ ಕನಕಾಚಲಪತಿ ದೇವಸ್ಥಾನದ ಉರಗ ಮೂರ್ತಿಗಳಿಗೆ, ೧೩ನೇ ವಾರ್ಡಿನ ಬನ್ನಿಮಹಾಂಕಾಳಿ ದೇಗುಲ, ೧೨ನೇ ವಾರ್ಡಿನ ಬನ್ನಿಕಟ್ಟಿ, ೧೪ನೇ ವೆಂಕಟರಮಣ ದೇಗುಲ, ಬ್ರಾಹ್ಮಣ, ಗೌಡ್ರ ಓಣಿ ಸೇರಿದಂತೆ ನಾನಾ ದೇಗುಲ ಹಾಗೂ ನಾಗಬನಗಳಲ್ಲಿ ಪಂಚಮಿ ಹಬ್ಬದ ಸಂಭ್ರಮ ಜೋರಾಗಿತ್ತು.