ಸಾರಾಂಶ
ಕನ್ನಡಪ್ರಭ ವಾರ್ತೆ ಜಗಳೂರು
ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಬಡ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳು ಮಾತ್ರ ಸುಧಾರಣೆ ಆಗದಿರುವುದು ಮಾತ್ರ ಅಂಗೈ ಹುಣ್ಣಿಗೆ ಕನ್ನಡಿ ಹಿಡಿದಂತಿದೆ.ಡಾ.ನಂಜುಂಡಪ್ಪ ವರದಿ ಅನುಸಾರ ಜಗಳೂರು ಕ್ಷೇತ್ರ ರಾಜ್ಯದಲ್ಲೇ ಅತ್ಯಂತ ಹಿಂದುಳಿದ 2ನೇ ಕ್ಷೇತ್ರ. ಆದರೆ ಇಲ್ಲಿನ ಮಕ್ಕಳು ಶೈಕ್ಷಣಿಕವಾಗಿ, ಬೌದ್ಧಿಕವಾಗಿ ಪ್ರಗತಿ ಸಾಧಿಸಿ ರಾಜ್ಯ, ರಾಷ್ಟ್ರಮಟ್ಟ, ಅಂತಾರಾಷ್ಟ್ರೀಯ ಮಟ್ಟದಲ್ಲೂ ವೃತ್ತಿ ಜೀವನ ನಡೆಸತ್ತಿದ್ದಾರೆ. ಅದಕ್ಕೆಲ್ಲಾ ಕಾರಣ ಬಡತನ. ದಶಕಗಳಿಂದ ಸರಕಾರಿ ಮುರುಕು ಧರ್ಮ ಶಾಲೆಗಳಲ್ಲೇ ಓದಿರುವ ವಿದ್ಯಾರ್ಥಿಗಳ ಜೀವನ ಮಟ್ಟ ಸುಧಾರಣೆಯಾಗಿರಬಹುದು.
ಶಿಕ್ಷಣವೇ ಶಕ್ತಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಹೀಗೆ ಸಾಕಷ್ಟು ಶ್ಲೋಗನ್ ಮೂಲಕ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಆಕರ್ಷಿಸುವ ಸರಕಾರ ಅವುಗಳ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಮಾತ್ರ ಮಿನಮೇಷ ಎಣಿಸುತ್ತಿರುವುದು ವಿಷಾದ. ತಾಲೂಕಿನ ಸೊಕ್ಕೆ, ಹಾಲೇಕಲ್ಲು ಸೇರಿ ಅನೇಕ ಗ್ರಾಮಗಳಲ್ಲಿ ಸ್ವಾತಂತ್ರ್ಯ ಪೂರ್ವ ಶಾಲೆಗಳಿವೆ. ಅವುಗಳ ಸ್ಥಿತಿಗತಿ ಇನ್ನೂ ಹಾಗೆ ಇದೆ. ಆದರೆ ಇತ್ತೀಚೆಗೆ ನಿರ್ಮಾಣವಾಗುತ್ತಿರುವ ಶಾಲೆಗಳು ಐದು ಅಥವಾ ಹತ್ತು ವರ್ಷಗಳಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತವೆ. ಗುಣಮಟ್ಟವಿಲ್ಲದ ಶಾಲೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.ಮಳೆಯಿಂದ ಹಂಚು ಕಳಚಿ ಬಿದ್ದಿರುವ ಶಾಲೆಗಳ ಸಂಖ್ಯೆ ಲೆಕ್ಕಕ್ಕಿಲ್ಲ. ವಿಪರೀತ ಮಳೆ ಬಂದರೆ ಥಟ್ ಥಟ್ ಎಂದು ತೊಟ್ಟಿಕ್ಕುವ ಶಬ್ಧ ಕೇಳುತ್ತದೆ. ಬೇಸಿಗೆಯಲ್ಲಿ ಸೂರ್ಯನ ಕಿರಣಗಳು ನೇರವಾಗಿ ಮಕ್ಕಳ ನೆತ್ತಿ ಸುಡುತ್ತವೆ. ಮಕ್ಕಳಿಗೆ ಪ್ರಾಯೋಗಿಕವಾಗಿ ಆಕಾಶ ತೋರಿಸಿಯೇ ಶಿಕ್ಷಕರು ಪಾಠ ಮಾಡಬಹುದು ಅಷ್ಟೊಂದು ವಿಶಾಲ ಮತ್ತು ವಿಸ್ತಾರವಾದ ದುರಸ್ತಿ ಮೇಲ್ಛಾವಣಿಗಳ ಶಾಲೆಗಳು ತಾಲೂಕಿನಲ್ಲಿವೆ. ಮೊನ್ನೆಯಷ್ಟೇ ಸುರಿದ ಭಾರಿ ಮಳೆಗೆ ಅನೇಕ ಶಾಲೆಗಳ ಗೋಡೆಗಳು, ಮೇಲ್ಛಾವಣಿಗಳು ಕುಸಿದು ಬಿದ್ದಿವೆ.
ತಾಲೂಕಿನ ದೊಣೆಹಳ್ಳಿ ಮತ್ತು ಮುಷ್ಟಿಗರಹಳ್ಳಿ, ರಸ್ತೆಮಾಕುಂಟೆ, ಜಗಳೂರು ಪಟ್ಟಣದ ಉರ್ದು ಶಾಲೆ, ಹಾಲೇಕಲ್ಲು ಶಾಲೆಗಳ ಸ್ಥಿತಿಗತಿ ನೋಡಿದರೆ ಪಾಳು ಬಿದ್ದಿವೆಯೇನೋ ಎಂಬಂತೆ ಕಾಣುತ್ತಿವೆ. ಆದರೆ ಅದರಲ್ಲೇ ಮಕ್ಕಳು ವಿದ್ಯಾಭ್ಯಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಶಾಸಕ ಬಿ.ದೇವೇಂದ್ರಪ್ಪ ಯಾವುದೇ ಸಭೆ ಸಮಾರಂಭಗಲ್ಲಿ ಶಿಕ್ಷಣ, ಆರೋಗ್ಯ, ನೀರು ನನ್ನ ಮೊದಲ ಆದ್ಯತೆ ಎನ್ನುತ್ತಾರೆ. ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದರೂ ಸಹ ಜಗಳೂರು ತಾಲೂಕಿನಲ್ಲಿ ಮುರುಕು ಸರಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಇನ್ನು ಒಂದೇ ಒಂದು ಸಭೆ ನಡೆಸಿಲ್ಲ. ಅನುದಾನ ಕೊಡವ ಬಗ್ಗೆ ಮಾತನಾಡಿಲ್ಲ. ಮಳೆಗಾಲ ಆರಂಭವಾಗಿದ್ದು ಶಾಲೆಗಳಿಗೆ ಮಕ್ಕಳು ದಾಖಲಾಗುತ್ತಿದ್ದಾರೆ. ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ವಿಪರೀತ ಮಳೆ ಸುರಿದರೆ ಶಾಲೆಗಳು ಬಿದ್ದು ಹೋಗುಬಹುದು. ಹೀಗಾಗಿ ಭವಿಷ್ಯದಲ್ಲಿ ಆಗುವ ಅವಘಡ ತಪ್ಪಿಸಬೇಕಾದರೆ ಮೊದಲು ಕ್ಷೇತ್ರದ ಸರಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಮತ್ತು ದುರಸ್ತಿಗಳ ಬಗ್ಗೆ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಶಿಕ್ಷಣ ತಜ್ಞರು ಆಗ್ರಹಿಸಿದ್ದಾರೆ.
ಸರಕಾರಿ ಶಾಲೆಗಳ ಆರೋಗ್ಯ ಸರಿಯಾಗಿಲ್ಲ. ಶಾಸಕರಾದ ದೇವೇಂದ್ರಪ್ಪ ತಕ್ಷಣವೇ ಕ್ರಿಯಾಶೀಲರಾಗಬೇಕು. ಆರಂಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುತ್ತೇನೆ ಎಂದು ವಚನ ನೀಡಿದ್ದರು. ಇನ್ನು ಕಾಲ ಮಿಂಚಿಲ್ಲ. ಮಕ್ಕಳ ಹಿತದೃಷ್ಟಿಯಿಂದ ತಕ್ಷಣವೇ ಕಾರ್ಯಪ್ರವೃತ್ತರಾಗಿ ಸರಕಾರಿ ಶಾಲೆಗಳ ಅಭಿವೃದ್ಧಿಯತ್ತ ಗಮನ ಹರಿಸಬೇಕು .ಡಾ. ಜೆ.ಯಾದವ ರೆಡ್ಡಿ, ಸಾಹಿತಿ
ಬಹಳಷ್ಟು ಶಾಲೆಗಳು ದುಸ್ತಿಯಲ್ಲಿವೆ. ಈಗಾಗಲೇ ₹1.52 ಕೋಟಿ ಅನುದಾನ ಬಂದಿದೆ. ಜೊತೆಗೆ ಜಿಲ್ಲಾ ಪಂಚಾಯಿತಿಯಿಂದ ₹11.42 ಲಕ್ಷ ಅನುದಾನ ಬಿಡುಗಡೆಯಾಗಿದೆ. ಕ್ರಿಯಾ ಯೋಜನೆ ತಯಾರಿಸಿ, ಡಿಡಿಪಿಐ ಕಚೇರಿಗೆ ಕಳುಹಿಸಿದ್ದೇವೆಈ.ಹಾಲಮೂರ್ತಿ, ಬಿಇಒ, ಜಗಳೂರು ತಾಲೂಕು
ಜಗಳೂರು ತಾಲೂಕಿನ ಶಾಲೆಗಳ ಸ್ಥಿತಿ-ಗತಿ- ಜಗಳೂರು ತಾಲೂಕಿನಲ್ಲಿರುವ ಒಟ್ಟು ಮಕ್ಕಳ ಸಂಖ್ಯೆ-13799
- ಶಿಕ್ಷಕರ ಸಂಖ್ಯೆ-691- ಒಟ್ಟು ಕೊಠಡಿಗಳ ಸಂಖ್ಯೆ-822
- ಉತ್ತಮ ಕೊಠಡಿಗಳ ಸಂಖ್ಯೆ-528- ಹೊಸ ಕೊಠಡಿಗಳ ಬೇಡಿಕೆ ಸಂಖ್ಯೆ-265
- ದುರಸ್ತಿ ಮಾಡಿಸಬೇಕಾದ ಕೊಠಡಿಗಳ ಸಂಖ್ಯೆ-214- ಉತ್ತಮ ಶೌಚಾಯಗಳ ಸಂಖ್ಯೆ-175
- ಹಾಳಾಗಿರುವ ಶೌಚಾಲಯಗಳ ಸಂಖ್ಯೆ-145