ಸಾರಾಂಶ
ಅರಹತೊಳಲು ಕೆ.ರಂಗನಾಥಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಕಳೆದ ವರ್ಷ ಅಡಿಕೆ ಉಪ ಉತ್ಪನ್ನಗಳ ಬೆಲೆ ಕುಸಿತದಿಂದ ನಷ್ಟ ಅನುಭವಿಸಿದ್ದ ಖೇಣಿದಾರರು ಈ ಬಾರಿ ಹಸಿ ಅಡಿಕೆ ಖೇಣಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಿಂದಿನ ವರ್ಷ ಈ ಸಮಯಕ್ಕಾಗಲೇ ಶೇ.70 ಹಸಿ ಅಡಿಕೆ ಖೇಣಿ ಮುಗಿದು ಹೋಗಿತ್ತು. ಸ್ವಲ್ಪ ಅನುಕೂಲ ಇರುವ ಶೇ.30 ಅಡಕೆ ಬೆಳೆಗಾರರು ಮಾತ್ರ ಜೂನ್ – ಜುಲೈ ವರೆಗೂ ಕಾದುನೋಡಿ ಯಾರು ಹೆಚ್ಚು ಒಣಗಿದ ರಾಶಿ ಅಡಿಕೆಯನ್ನು ಕೊಡುತ್ತಾರೋ ಅಂತಹ ಖೇಣಿದಾರರಿಗೆ ಅಡಕೆ ತೋಟವನ್ನು ಗುತ್ತಿಗೆ ನೀಡಿದ್ದರು. ಆದರೆ, ಈ ಬಾರಿ ಯಾವ ಖೇಣಿದಾರನೂ ಹಸಿ ಅಡಕೆ ಖೇಣಿ ಮಾಡಲು ಮುಂದಾಗುತ್ತಿಲ್ಲ. ಇದರಿಂದ ಅಡಕೆ ಬೆಳೆಗಾರರು ತಮ್ಮ ತಮ್ಮ ತೋಟಗಳನ್ನು ಖೇಣಿ ನೀಡಲಾರದೇ ಅವಶ್ಯಕತೆಗಳಿಗೆ ಹಣ ದೊರೆಯದೇ ತ್ರಿಶಂಕು ಸ್ಥಿತಿಯಲ್ಲಿ ಇರುವಂತಾಗಿದೆ.ಹಿಂದಿನ ವರ್ಷ ಒಂದು ಕ್ವಿಂಟಾಲ್ ಹಸಿ ಅಡಕೆಗೆ 13, 13.5 ಯಿಂದ 14 ಕೆಜಿ ಒಣ ರಾಶಿ ಅಡಕೆಯನ್ನು ನೀಡುವಂತೆ ರೈತರು ಖೇಣಿದಾರರೊಂದಿಗೆ ಮುಂಗಡ ಹಣ ಪಡೆದು ಒಡಂಬಡಿಕೆ ಮಾಡಿಕೊಂಡು ತೋಟವನ್ನು ಖೇಣಿ ನೀಡಿದ್ದರು. ಒಣ ರಾಶಿ ಅಡಿಕೆ ಬೆಲೆ ಕನಿಷ್ಟ 50 ಸಾವಿರದವರೆಗೂ ಸ್ಥಿರವಾಗಿತ್ತು. ಆದರೆ ಅಡಿಕೆಯ ಉಪ ಉತ್ಪನ್ನಗಳಾದ ಗೊರಬಲು, ಸಿಪ್ಪೇಗೋಟು, ಅಡಿಕೆಯ ಮಿಶಿನ್ ಪುಡಿ, ದ್ವಿತೀಯ ದರ್ಜೆ ಅಡಿಕೆ ಸೇರಿದಂತೆ ಎಲ್ಲಾ ಉತ್ಪನ್ನಗಳ ಬೆಲೆ ಪಾತಾಳಕ್ಕೆ ಕುಸಿದಿತ್ತು. ಇದರಿಂದ ಹಲವಾರು ಖೇಣಿದಾರರು ನಷ್ಟ ಅನುಭವಿಸುವುದರ ಜೊತೆಗೆ ಹೊಲ ಮನೆಯನ್ನು ಕಳೆದುಕೊಂಡಿರುವ ಉದಾಹರಣೆಗಳಿವೆ. ಆದ್ದರಿಂದ ಜಿಲ್ಲೆಯ ಖೇಣಿದಾರರೆಲ್ಲಾ ಒಂದಾಗಿ ಅಡಿಕೆ ಖೇಣಿದಾರರ ಸೌಹಾರ್ದ ಸಹಕಾರ ಸಂಘ ವನ್ನು ಸ್ಥಾಪಿಸಿಕೊಂಡು, ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಖೇಣಿದಾರರನ್ನು ಜಾಗೃತಿಗೊಳಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈ ಕಾರಣದಿಂದ ಯಾವ ಖೇಣಿದಾರನೂ ಅಡಿಕೆ ಬೆಳೆಗಾರರ ಬಳಿ ಸುಳಿಯುತ್ತಿಲ್ಲ. ಹಣದ ಅವಸರ ಇರುವ ಕೆಲವು ಬಡ ರೈತರು ತೋಟವನ್ನು ಖೇಣಿ ನೀಡಲು ಖೇಣಿದಾರರ ಬಳಿ ಹೋದರೆ ಕಳೆದ ವರ್ಷಕ್ಕಿಂತ ಕಡಿಮೆ ದರಕ್ಕೆ ಕೇಳುತ್ತಿರುವುದು ಕಡುಬರುತ್ತಿದೆ.ಪ್ರತಿಭಟನೆಗೆ ಮುಂದಾದ ರೈತರು:ಕೆಲವು ರೈತರು ಖೇಣಿದಾರರ ವಿರುದ್ದ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದರ ಭಾಗವಾಗಿ ಈಗಾಗಲೇ ಶಿಕಾರಿಪುರ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆಯಲಾರಂಭಿಸಿವೆ. ಸರ್ಕಾರ ಮಧ್ಯ ಪ್ರವೇಶಿಸುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಇದು ವಾಸ್ತವದಲ್ಲಿ ಜರಗುವ ಕೆಲಸಲ್ಲ. ಕಾರಣ ಸರ್ಕಾರ ಯಾವ ಖೇಣಿದಾರರನ್ನೂ ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದು ಕಟುಸತ್ಯ.ಸ್ವತಃ ಸಂಸ್ಕರಣೆ ಸುಲಭವಲ್ಲ:ಖೇಣಿದಾರರ ನಿರ್ಣಯದಿಂದ ಕೆಲವು ರೈತರು ತಮ್ಮ ತಮ್ಮ ತೋಟದ ಅಡಿಕೆಯನ್ನು ತಾವೇ ಕೊಯ್ದು, ಸುಲಿದು, ಬೇಯಿಸಿ, ಒಣಗಿಸಿ ಮಾರಾಟ ಮಾಡುವ ನಿರ್ದಾರ ಮಾಡಿದ್ದಾರೆ. ರೈತರು ತಮ್ಮ ತೋಟದ ಅಡಿಕೆಯನ್ನು ತಾವೇ ಸಂಸ್ಕರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕಾಗಿ ಸಾಕಷ್ಟು ಸ್ಥಳಾವಾಕಾಶ ಬೇಕು. ಅಡಕೆ ಕೊಯ್ಯುವ ಮತ್ತು ಮನೆಗೆ ತಂದು ಕೊಡುವ ಕೂಲಿಯಾಳುಗಳು, ಅಡಕೆ ಸುಲಿಯುವ ಯಂತ್ರ, ವಿದ್ಯತ್ ಸಂಪರ್ಕದ ಜೊತೆಗೆ ಬುಟ್ಟಿಗಳು, ಟಾರ್ಪಲ್ ಗಳು, ಅಡಿಕೆ ಬೇಯಿಸಲು ಒಲೆ, ಅಂಡೇವು ( ಪಾತ್ರೆ ) ಸೇರಿದಂತೆ ಹಲವಾರು ಉಪಕರಣಗಳು ಬೇಕು. ಇವೆಲ್ಲವನ್ನೂ ಹೊಂದಿಸಿಕೊಳ್ಳಲು ಸಾಕಷ್ಟು ಹಣದ ಅವಶ್ಯಕತೆ ಇದೆ.------------ಖೇಣಿದಾರರು ಸತತವಾಗಿ ಕಳೆದ ಮೂರು ವರ್ಷಗಳಿಂದ ನಷ್ಟವನ್ನು ಅನುಭವಿಸುತ್ತಾ ಬಂದಿದ್ದಾರೆ. 13 ಕೆಜಿ ಒಣಗಿದ ರಾಶಿ ಅಡಿಕೆ ಕೊಡುವುದು ಯಾವತ್ತಿಂದ ಅರಂಭವಾಯಿತೋ ಅಂದಿನಿಂದ ಖೇಣಿ ನಷ್ಟಕ್ಕೆ ಬಂದಿತು. ಅದರಲ್ಲೂ ಕಳೆದ ವರ್ಷ ಅಡಿಕೆ ಉಪ ಉತ್ಪನ್ನಗಳ ದರ ಕಡಿಮೆಯಾದ್ದರಿಂದ ಖೇಣಿದಾರರು ಸಂಪೂರ್ಣ ನಷ್ಟ ಅನುಭವಿಸುವಂತ್ತಾಯಿತು. ನಂಬಿಕೆಯಿಂದ ಹಣಕಾಸು ಸಾಲ ನೀಡುತ್ತಿದ್ದವರು ಈ ಬಾರಿ ಹಣ ಸಾಲ ನೀಡಲು ಯೋಚಿಸುತ್ತಿದ್ದಾರೆ. ಆ ಕಾರಣಕ್ಕೆ ಖೇಣಿದಾರರು ಮುಂಗಡ ನೀಡಿ ಖೇಣಿ ಮಾಡಲಾಗದೇ ಸುಮ್ಮನೇ ಕೂರುವಂತಾಗಿದೆ.
-ಎಲ್.ಎಸ್.ರವಿಕುಮಾರ್. ಖೇಣಿದಾರ.--------------------------10-15 ವರ್ಷಗಳಿಂದ ಲಕ್ಷಾಂತರ ರುಪಾಯಿ ಲಾಭ ಗಳಿಸಿರುವ ಖೇಣಿದಾರರು, ಒಂದು ವರ್ಷದ ನಷ್ಟಕ್ಕೆ ರೈತರನ್ನು ಬಲಿಕೊಡಲು ಮುಂದಾಗಿದ್ದಾರೆ. ನಿರಂತರ ಲಾಭವನ್ನೇ ನೋಡುತ್ತಿದ್ದವರು ಎಂದಾದರೂ ರೈತರಿಗೆ ಲಾಭದ ಬಾಗವನ್ನು ನೀಡಿಲ್ಲ. ಬಂದ ಲಾಭದಲ್ಲಿ ಜಮೀನು, ನಿವೇಶನ, ಬೆಲೆಬಾಳುವ ವಾಹನಗಳನ್ನು ಕೊಂಡುಕೊಂಡು ಐಷಾರಾಮಿಯಾಗಿ ಜೀವನ ನಡೆಸುವಾಗ ರೈತರಿಗೆ ಆಗುತ್ತಿರುವ ನಷ್ಟದ ಬಗ್ಗೆ ಕಿಂಚಿತ್ತು ಯೋಚಿಸಲಿಲ್ಲ. ಆದರೆ ಈಗ ನಷ್ಟ ಎಂದು ಹೇಳುತ್ತಿದ್ದಾರೆ. ಖೇಣಿಯಿಂದ ಈ ಪರಿ ನಷ್ಟ ಇದೆ ಎಂದಾದರೆ ಖೇಣಿ ಯಾಕೆ ಮಾಡಬೇಕು. ಅದರ ಬದಲು ಸುಮ್ಮನಿರುವುದು ಉತ್ತಮ.
-ರಾಜಿಕ್ ಅಹಮದ್, ಅಡಕೆ ಬೆಳೆಗಾರ.