ಒಂದು ಕಾಲದಲ್ಲಿ ಜನರು ಸರ್ಕಾರದ ಮುಂದೆ ತಾವು ಬದುಕಲು ಆಗತ್ಯ ಸೌಕರ್ಯ ಒದಗಿಸಬೇಕು ಎಂದು ಹೋರಾಡುತ್ತಿದ್ದರು.
ಕೊಪ್ಪಳ: ಕಾರ್ಖಾನೆಗಳ ತ್ಯಾಜ್ಯದಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ನರಕಯಾತನೆ ಇದ್ದು, ಈ ಸ್ಥಿತಿ ನಗರವಾಸಿಗಳಾದ ನಮಗೂ ಬರುವ ಕಾಲ ದೂರವಿಲ್ಲ. ಈಗಾಗಲೇ ಅದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಹಿರಿಯ ವಕೀಲರ ಉಮೇಶ ಮಾಳೆಕೊಪ್ಪ ಹೇಳಿದ್ದಾರೆ.
ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಗರಸಭೆ ಬಯಲಿನಲ್ಲಿ ನಡೆದ 129ನೇ ದಿನದ ಧರಣಿ ಉದ್ದೇಶಿಸಿ ಮಾತನಾಡಿದರು.ಒಂದು ಕಾಲದಲ್ಲಿ ಜನರು ಸರ್ಕಾರದ ಮುಂದೆ ತಾವು ಬದುಕಲು ಆಗತ್ಯ ಸೌಕರ್ಯ ಒದಗಿಸಬೇಕು ಎಂದು ಹೋರಾಡುತ್ತಿದ್ದರು. ಈಗ ನೋಡಿ ಜೀವ ಉಳಿಸಿ, ಆರೋಗ್ಯ ಉಳಿಸಿ ಎಂದು ಹೋರಾಟ ಮಾಡುವುದು ಎಂತಹ ವಿಪರ್ಯಾಸ. ಕ್ಯಾನ್ಸರ್ ಆಸ್ಪತ್ರೆ ಸಾಧನೆಯ ಪ್ರತೀಕವಾಗಿದೆಯೇ ಎಂದು ಪ್ರಶ್ನಿಸಿದ ಅವರು, ಮುಂದಿನ ದಿನ ರೋಗಗಳಿಗೆ ಸಿದ್ಧರಾಗಿ ಎನ್ನುವ ಸೂಚನೆ ಇದು ಎಂದು ಆತಂಕ ವ್ಯಕ್ತಪಡಿಸಿದು. ನಾವು ಈಗಾಗಲೇ ಬಾಧಿತರಾಗಿದ್ದು, ಹಳ್ಳಿಗೆ ಬಂದ ಸ್ಥಿತಿ ಇನ್ನು ಕೆಲವೇ ದಿನಗಳಲ್ಲಿ ಈಗ ಇರುವ ಕಾರ್ಖಾನೆಗಳಿಂದ ನಮಗೂ ಬರುತ್ತದೆ. ಅವುಗಳ ವಿಷಾನಿಲ ನಿಯಂತ್ರಣ ಮಾಡದಿರುವ ರಾಜಕಾರಣಿಗಳು ನಮಗೇಕೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ವಕೀಲರು ಜನಪರ ಹೋರಾಟದಲ್ಲಿ ಸದಾ ಜನರ ಜೊತೆಗಿದ್ದು, ನಿಮ್ಮೊಂದಿಗೆ ನಾವು ಹೋರಾಡುತ್ತೇವೆ ಎಂದರು.ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ನಾವು ಈಗಿನಿಂದಲೇ ಬೆಂಗಳೂರು ಚಲೋ ಸತ್ಯಾಗ್ರಹದ ಅನುಮತಿ ಪಡೆಯುವ ಪ್ರಕ್ರಿಯೆ ಆರಂಭಿಸಿದ್ದೇವೆ. ಕೊಪ್ಪಳ ಮತ್ತು ಕಾರ್ಖಾನೆ ಬಾಧಿತ ಹಳ್ಳಿಯ ಜನರು ಬೆಂಗಳೂರು ಚಲೋ ಹೋರಾಟಕ್ಕೆ ಸ್ವಯಂ ಪ್ರೇರಿತವಾಗಿ ಮುಂದೆ ಬರಬೇಕೆಂದು ವಿನಂತಿಸಿದರು.
ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ ಮಾತನಾಡಿ, ಭೂಮಿ ರೈತರು ಸ್ವಯಂ ಪ್ರೇರಿತವಾಗಿ ಕಾರ್ಖಾನೆಗಳಿಗೆ ಕೊಟ್ಟಿಲ್ಲ. ಕೆಐಎಡಿಬಿ ಬಲವಂತದಿಂದ ಭೂಸ್ವಾಧೀನ ಮಾಡಿದೆ. ಮತ್ತೊಂದು ಕಡೆ ಮಧ್ಯವರ್ತಿಗಳ ಮೂಲಕ ವಂಚಿಸಿ ಭೂಮಿ ಕಿತ್ತುಕೊಂಡ ಕಾರ್ಖಾನೆಗಳು ಯಾವ ಉದ್ಯೋಗ ಭೂ ಬಾಧಿತರಿಗೆ ಕೊಟ್ಟಿಲ್ಲ. ಆರೋಗ್ಯವಿಲ್ಲದ ಉದ್ಯೋಗ ವ್ಯಸನ ಬೇಡ ಎಂದರು.ಧರಣಿಯಲ್ಲಿ ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ.ಗೊಂಡಬಾಳ, ಗಂಗಾಧರ ಖಾನಾಪೂರ, ಮಹಾದೇವಪ್ಪ ಮಾವಿನಮಡು, ರಾಜಶೇಖರ ಏಳುಬಾವಿ, ನಾಗರಾಜ ಕುಷ್ಟಗಿ, ಎಸ್.ಎಂ. ಕಂಬಾಳಿಮಠ, ಶಿವಕುಮಾರ ಹಿರೇಮಠ, ವಿಜಯ ಮಹಾಂತೇಶ ಹಟ್ಟಿ, ಎಸ್.ಬಿ.ರಾಜೂರು, ರವಿ ಕಾಂತನವರ, ಗಂಗಮ್ಮ ಕೊಡೇಕಲ್, ಶಿವಲಿಂಗಪ್ಪ ವಣಗೇರಿ, ಜಿ. ವೆಂಕಟೇಶ ಗುಳೇದಾಳ, ಪಂಪಣ್ಣ ಚಿಂತಪಲ್ಲಿ, ಸುಭಾನ್ ಸಾಬ್ ನೀರಲಗಿ, ಶಂಕ್ರಪ್ಪ ಗುಳದಳ್ಳಿ ಇದ್ದರು.