ನಾವು ವೀರಶೈವರಾ, ಲಿಂಗಾಯತರಾ ಎಂಬುದೇ ಗೊಂದಲ

| Published : Oct 27 2025, 12:15 AM IST

ಸಾರಾಂಶ

ನಮ್ಮ ಸಮಾಜ ಕವಲುದಾರಿಯಾಗಿದೆ. ನಾವು ವೀರಶೈವರಾ, ಲಿಂಗಾಯತರಾ ಅಂದ್ರೆ ಎರಡೂ ಅಲ್ಲ. ಹಾಗಿದ್ದರೂ ಎರಡೂ ಹೌದು. ನಾವು ಹಿಂದೂ ಸಮಾಜದಲ್ಲಿ ಬಂದಿರುವವರು. ಇತರೆಯಲ್ಲಿ ಬರೆಸಿದರೆ ನಾವು ಲೆಕ್ಕಕ್ಕಿಲ್ಲದಂತಾಗುತ್ತದೆ. ಹಿಂದೂ ಎಂದೇ ಬರೆಸಬೇಕೆಂದು ಕೊಂಡೆವು. ಆದರೆ ಕೆಲವು ನಾಯಕರು ನುಣುಚಿಕೊಂಡರು, ಕೈಬಿಟ್ಟರು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ, ಹಿರಿಯ ಲೆಕ್ಕ ಪರಿಶೋಧಕ ಡಾ.ಅಥಣಿ ಎಸ್. ವೀರಣ್ಣ ಹೇಳಿದ್ದಾರೆ.

- ಲಿಂ. ಉಮಾಪತಿ ಶ್ರೀ, ವಾಗೀಶ ಶ್ರೀ ಪುಣ್ಯಸ್ಮರಣೋತ್ಸವ-ಧರ್ಮಸಭೆಯಲ್ಲಿ ಡಾ.ಅಥಣಿ ವೀರಣ್ಣ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಮ್ಮ ಸಮಾಜ ಕವಲುದಾರಿಯಾಗಿದೆ. ನಾವು ವೀರಶೈವರಾ, ಲಿಂಗಾಯತರಾ ಅಂದ್ರೆ ಎರಡೂ ಅಲ್ಲ. ಹಾಗಿದ್ದರೂ ಎರಡೂ ಹೌದು. ನಾವು ಹಿಂದೂ ಸಮಾಜದಲ್ಲಿ ಬಂದಿರುವವರು. ಇತರೆಯಲ್ಲಿ ಬರೆಸಿದರೆ ನಾವು ಲೆಕ್ಕಕ್ಕಿಲ್ಲದಂತಾಗುತ್ತದೆ. ಹಿಂದೂ ಎಂದೇ ಬರೆಸಬೇಕೆಂದು ಕೊಂಡೆವು. ಆದರೆ ಕೆಲವು ನಾಯಕರು ನುಣುಚಿಕೊಂಡರು, ಕೈಬಿಟ್ಟರು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ, ಹಿರಿಯ ಲೆಕ್ಕ ಪರಿಶೋಧಕ ಡಾ.ಅಥಣಿ ಎಸ್. ವೀರಣ್ಣ ಹೇಳಿದರು.

ನಗರದ ಎಂಸಿಸಿ ಎ ಬ್ಲಾಕ್‌ನಲ್ಲಿರುವ ದಾವಣಗೆರೆ ಹರಿಹರ ಅರ್ಬನ್ ಸಮುದಾಯ ಭವನದಲ್ಲಿ ಶುಕ್ರವಾರ ಸಂಜೆ ಶ್ರೀ ಶೈಲ ಜಗದ್ಗುರು ಲಿಂಗೈಕ್ಯ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ 14ನೇ ವಾರ್ಷಿಕ ಪುಣ್ಯಸ್ಮರಣೋತ್ಸವ, ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 39ನೇ ವರ್ಷದ ಪುಣ್ಯಾರಾಧನೆ ಪ್ರಯುಕ್ತ ಆಯೋಜಿಸಿದ್ದ ಧರ್ಮಜಾಗೃತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರದಿಂದ ನಡೆಯುವ ಜನ ಜಾತಿಗಣತಿಯಲ್ಲಿ ಅತ್ಲಾಗೂ ಇಲ್ಲ, ಇತ್ಲಾಗೂ ಇಲ್ಲ. ಲಿಂಗಾಯತರು ಅಂತಲೂ ಹೇಳುವಂತಿಲ್ಲ, ವೀರಶೈವರೂ ಅಂತಲೂ ಹೇಳುವಂತಿಲ್ಲ. ರಾಜ್ಯದವರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಗಣತಿ ಅಂತಾರೆ. ಹಿಂದೆ ಹತ್ತು ವರ್ಷದ ಹಿಂದೆ ಮಾಡಿದಾಗ 80 ಲಕ್ಷ ಅಂತ ತೋರಿಸಿದ್ದರು. ಈಗ ಅದಕ್ಕಿಂತ ಕಡಿಮೆಯಾಗಬಹುದು. ವೀರಶೈವ ಅಥವಾ ಲಿಂಗಾಯತರು ಅಂತ ಹೋದರೆ ನಮಗೆ ಮಾನ್ಯತೆ ಸಿಗುವುದು ಕಡಿಮೆ. ಈ ಅನುಭವ ನಮಗೆ ಆಗಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಲಿಂಗಾಯತರು ಅಲ್ಲ, ವೀರಶೈವರು ಅಲ್ಲ ಅನ್ನುವ ಸ್ಥಿತಿಯಲ್ಲಿದ್ದೇವೆ ಎಂದು ತಿಳಿಸಿದರು.

ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಪುಣ್ಯಾರಾಧನಾ ಸೇವಾ ಸಮಿತಿ ಕಾರ್ಯಾಧ್ಯಕ್ಷ ಎನ್.ಎ. ಮುರುಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಶೈಲ ಪೀಠದ ಲಿಂ.ವಾಗೀಶ ಪಂಡಿತಾರಾಧ್ಯರು ಸಂಸ್ಕೃತ, ಹಿಂದಿ, ಕನ್ನಡ, ಉರ್ದು ಭಾಷೆಯಲ್ಲಿ ಪ್ರವಚನ ನೀಡುತ್ತಿದ್ದರು. ಜಾತಿ, ಮತ, ಪಂಥದಾಚೆಗೆ ಎಲ್ಲಾ ಭಕ್ತರನ್ನು ಆಕರ್ಷಿಸುವ ಆಯಸ್ಕಾಂತೀಯ ಗುಣ ಹೊಂದಿದ್ದರು ಎಂದರು.

ರಾಷ್ಟ್ರಭಕ್ತರಾಗಿದ್ದ ಲಿಂ. ವಾಗೀಶ ಪಂಡಿತಾರಾಧ್ಯರು, ಸ್ವಾತಂತ್ರ‍್ಯ ಹೋರಾಟ ಮಾಡಿದರು. ಬಾಬು ರಾಜೇಂದ್ರಪ್ರಸಾದ್, ಬಿ.ಡಿ.ಜತ್ತಿ ಸೇರಿದಂತೆ ಹಲವು ರಾಷ್ಟ್ರಪತಿಗಳು ಗುರುಗಳ ಆಶೀರ್ವಾದ ಪಡೆಯಲು ಆಗಮಿಸುತ್ತಿದ್ದರು. ಉರ್ದುನಲ್ಲಿ ಉಪನ್ಯಾಸ ನೀಡಿದ್ದರು. ಎಲ್ಲರೂ ಒಂದೇ ಎಂಬ ಭಾವನೆಯಲ್ಲಿದ್ದರು. ಶಾರೀರಿಕ ಕಾಯಿಲೆಗಳಿಗೂ ಔಷಧ ನೀಡುತ್ತಿದ್ದರು. ಆಯುರ್ವೇದದ ಪಾಂಡಿತ್ಯ ಪಡೆದಿದ್ದರು. ಮಹಾಕ್ಷೇತ್ರ ಶ್ರೀಶೈಲ ಪೀಠದ ಅಭಿವೃದ್ಧಿಗೆ ಕಾಯಕಲ್ಪ ಒದಗಿಸಿದ ಕಾಮಧೇನು ಆಗಿದ್ದರು. ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಲ್ಲಿ ಛಾಪು ಮೂಡಿಸಿದ್ದಾರೆ ಎಂದು ಸ್ಮರಿಸಿದರು.

ಶ್ರೀ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಶ್ರೀಶೈಲ ಮಹಾಪೀಠದ ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಹೊನ್ನಾಳಿ ಹಿರೇಕಲ್ ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಹಾಗೂ ಮುಸ್ಟೂರು ಓಂಕಾರ ಉಚ್ಚನಾಗಲಿಂಗ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಯವರ ಸಮ್ಮುಖದಲ್ಲಿ ಧರ್ಮ ಜಾಗೃತಿ ಸಮಾರಂಭ ನಡೆಯಿತು.

ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಎಸ್.ಜಿ.ಉಳುವಯ್ಯ, ಮಲ್ಲಿಕಾರ್ಜುನ ತ್ಯಾವಣಿಗೆ, ಮತ್ತಿತರರು ಭಾಗವಹಿಸಿದ್ದರು. ಪ್ರೊ.ಸಿ.ಜಿ.ಮಠಪತಿ ಉಪನ್ಯಾಸ ನೀಡಿದರು. ವಾಗೀಶ ಸ್ವಾಮಿ ಸ್ವಾಗತಿಸಿದರು, ಸೌಭಾಗ್ಯ ಎಸ್.ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

- - -

(ಕೋಟ್‌)

ವಾಗೀಶ ಸ್ವಾಮೀಜಿ ನಂತರ ಉಮಾಪತಿ ಸ್ವಾಮೀಜಿಗಳು ಸಹ ಅನೇಕ ಕಾರ್ಯಗಳನ್ನು ಮಾಡಿದರು. ಇವರ ನಂತರ ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯರು ಸ್ನಾತಕೋತ್ತರ ಪದವಿ ಪಡೆದು ಚಿನ್ನದ ಪದಕ ಪಡೆದಿದ್ದರು. ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌.ಡಿ ಪದವಿ ಪಡೆದರು. ದಾವಣಗೆರೆಯ ಶ್ರೀಶೈಲ ಮಠದಲ್ಲಿ ನೂರಾರು ಮಕ್ಕಳಿಗೆ ಸಂಸ್ಕೃತ ಪಾಠಶಾಲೆ ಆರಂಭಿಸಿದ್ದಾರೆ

- ಎನ್‌.ಎ. ಮುರುಗೇಶ್, ಕಾರ್ಯಾಧ್ಯಕ್ಷ

- - -

-24ಕೆಡಿವಿಜಿ38: ದಾವಣಗೆರೆಯಲ್ಲಿ ನಡೆದ ಧರ್ಮಜಾಗೃತಿ ಸಮಾರಂಭದಲ್ಲಿ ಎನ್.ಎ.ಮುರುಗೇಶ ಮಾತನಾಡಿದರು.