ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಮೇಲಿನ ಹತ್ಯೆ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣ ಮಾಡುತ್ತಿದ್ದು, ಸರ್ಕಾರದ ಪಾಪದ ಕೊಡ ತುಂಬಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಹಾವೇರಿ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಮೇಲಿನ ಹತ್ಯೆ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣ ಮಾಡುತ್ತಿದ್ದು, ಸರ್ಕಾರದ ಪಾಪದ ಕೊಡ ತುಂಬಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕದಿಂದ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ, ಸರ್ಕಾರದ ರೈತ ಹಾಗೂ ಜನವಿರೋಧಿ ನೀತಿ ಖಂಡಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದ ವಿವಿಧ ಭಾಗಗಳಲ್ಲಿ ಹಿಂದೂಗಳ ಹತ್ಯೆ ಪ್ರಕರಣಗಳು ನಡೆದಿದ್ದರೂ ಯಾವುದೇ ಪ್ರಕರಣಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಕೇವಲ ಬೆಂಗಳೂರಿನಲ್ಲಿ ಕುಳಿತು ಪರಿಹಾರದ ಚೆಕ್ ವಿತರಿಸುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ಹೇಳಿಕೊಳ್ಳುತ್ತಾರೆ. ಇದು ಕಾಂಗ್ರೆಸ್ ಸರ್ಕಾರದ ದೌರ್ಬಲ್ಯವನ್ನು ತೋರಿಸುತ್ತಿದ್ದು, ದೇಶದ ಇತರೆ ರಾಜ್ಯಗಳಲ್ಲಿ ಹಿಂದುಗಳ ಮೇಲೆ ಹಲ್ಲೆ, ದೌರ್ಜನ್ಯ ಘಟನೆಗಳು ನಡೆಯುತ್ತಿಲ್ಲ, ಆದರೆ ಕರ್ನಾಟಕದಲ್ಲಿ ಮಾತ್ರ ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಜಿಲ್ಲೆಯಲ್ಲಿ ಡ್ರಗ್ಸ್ ಪೆಡ್ಲರ್‌ಗಳು, ಒಸಿ ಆಡಿಸುವವರು, ಮದ್ಯ ಮಾರುವವರ ಜೊತೆಗೆ ಪೊಲೀಸರ ಪಾರ್ಟ್ನರ್‌ಶಿಪ್ ದಂಧೆ ನಡೆಯುತ್ತಿದೆ. ಗಡಿ ಪಾರಾದವರು, ಗೂಂಡಾ ಲಿಸ್ಟ್‌ನಲ್ಲಿದ್ದವರು ಪೊಲೀಸ್‌ ಠಾಣೆಗಳಲ್ಲಿ ರಾಜ್ಯಭಾರ ಮಾಡುತ್ತಿದ್ದಾರೆ. ಬಹಿರಂಗವಾಗಿ ಇಸ್ಪೀಟ್ ಅಡ್ಡೆಗಳು ನಡೆಯುತ್ತಿವೆ. ಬೀಡಿ ಅಂಗಡಿಯಲ್ಲಿ ಒಸಿ, ಕಿರಾಣಿ ಅಂಗಡಿಗಳಲ್ಲಿ ಸಾರಾಯಿ, ಕಾಲೇಜುಗಳಲ್ಲಿ ಡ್ರಗ್ಸ್ ಮುಕ್ತವಾಗಿ ಸಿಗುವಂತಹ ಪರಿಸ್ಥಿತಿಯಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು.

ಶಿಗ್ಗಾಂವಿಯಲ್ಲಿ ಉದ್ಯಮಿ ಹತ್ಯೆ, ಸವಣೂರಲ್ಲಿ ಶಿಕ್ಷಕನ ಅರೆಬೆತ್ತಲೆ ಮೆರವಣಿಗೆ, ರಟ್ಟಿಹಳ್ಳಿಯಲ್ಲಿ ಗೂಡಂಗಡಿ ವ್ಯಾಪಾರಿ ಕೊಲೆ, ಹಾನಗಲ್ಲನಲ್ಲಿ ಯುವತಿ ಮೇಲೆ ಗ್ಯಾಂಗ್‌ರೇಪ್, ನರೇಗಲ್‌ನಲ್ಲಿ ಯುವಕರ ಮೇಲೆ ಮಾರಣಾಂತಿಕ ಹಲ್ಲೆ, ರಾಣಿಬೆನ್ನೂರಿನಲ್ಲಿ ಭಜರಂಗದಳ ಕಾರ್ಯಕರ್ತರ ಮೇಲೆ ಕೇಸ್ ಹೀಗೆ ಒಬಿಸಿ ಸಮುದಾಯದವರೇ ಟಾರ್ಗೆಟ್ ಆಗುತ್ತಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿದರು. ವಿಪ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಶಿವರಾಜ ಸಜ್ಜನರ, ಗವಿಸಿದ್ದಪ್ಪ ದ್ಯಾಮಣ್ಣವರ, ಭರತ್ ಬೊಮ್ಮಾಯಿ, ಲಿಂಗರಾಜ ಚಪ್ಪರದಹಳ್ಳಿ, ಸಿದ್ಧರಾಜ ಕಲಕೋಟಿ, ಕಿರಣ ಕೊಳ್ಳಿ, ಮಾರುತಿ ಗೊರವರ, ಬಸವರಾಜ ಕೋಳಿವಾಡ, ವಿಜಯಕುಮಾರ ಚಿನ್ನಿಕಟ್ಟಿ, ನಿರಂಜನ ಹೇರೂರ, ಬಸವರಾಜ ಅರಬಗೊಂಡ, ಪಾಲಾಕ್ಷಗೌಡ ಪಾಟೀಲ, ಭೋಜರಾಜ ಕರೂದಿ, ನಂಜುಂಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ನೀಲಪ್ಪ ಚಾವಡಿ, ಸುರೇಶ ಹೊಸಮನಿ, ಕಿರಣಕುಮಾರ ಕೋಣನವರ, ಶೋಭಾ ನಿಸ್ಸೀಮಗೌಡ್ರ, ರೋಹಿಣಿ ಪಾಟೀಲ, ಲತಾ ಬಡ್ನಿಮಠ ಸೇರಿದಂತೆ ವಿವಿಧ ಮೋರ್ಚಾ, ಮಂಡಲ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ರೈತರ ಪರಿಸ್ಥಿತಿ ಗಂಭೀರವಾಗಿದೆ. ಸರ್ಕಾರದವರು ನಯಾಪೈಸೆ ಕೊಡದೇ ಬರಗಾಲ ನಿರ್ವಹಣೆ ಮಾಡುತ್ತಿದ್ದಾರೆ. ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕಾಂಗ್ರೆಸ್‌ನವರಿಗೆ ರೈತರಿಗೆ ಪರಿಹಾರ ಕೊಡಲು ಆಗುತ್ತಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಎರಡುಪಟ್ಟು ಪರಿಹಾರ ಕೊಟ್ಟಿದ್ದೇವು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯದಲ್ಲಿ ಹಿಂದೂಗಳ ಕಗ್ಗೊಲೆ ಆಗುತ್ತಿದೆ. ರಟ್ಟಿಹಳ್ಳಿಯಲ್ಲಿ ಕಾಲು ಕೆದರಿ ಜಗಳ ತೆಗೆದು ಹತ್ಯೆ ಮಾಡಿದ್ದಾರೆ. ನರೇಗಲ್‌ನಲ್ಲಿ ಯುವಕರ ಕೈ ಕತ್ತರಿಸುವ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಆರು ಜನ ಕೈ ಶಾಸಕರು ಇದ್ದರು, ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ರಾಜ್ಯ ಸರ್ಕಾರ ಹಾಗೂ ಹಿಂದೂಗಳ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿ ಜಿಲ್ಲೆಯಲ್ಲಿ ಹೋರಾಟ ಮಾಡೋಣ, ನಮ್ಮ ಕಾರ್ಯಕರ್ತರಿಗೆ ರಕ್ಷಣೆ ಕೊಡೋಣ. ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಹೋರಾಟದ ಮೂಲಕ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದು ಮಾಜಿ ಸಚಿವ ಭೈರತಿ ಬಸವರಾಜ ಹೇಳಿದರು.

ಎಲ್ಲಿದ್ದೀರಿ ಸಿದ್ದರಾಮಯ್ಯನವರೇ..?

ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಲ್ಲಿದ್ದೀರಿ ಸಿದ್ದರಾಮಯ್ಯನವರೇ..? ಎಂದು ಪ್ರಶ್ನಿಸಿದ ಬೊಮ್ಮಾಯಿ ಮತ ಹಾಕಿಸಿಕೊಳ್ಳಲು ಮಾತ್ರ ಅಹಿಂದ ಬೇಕಾ? ಎಂದು ವ್ಯಂಗ್ಯವಾಡಿದರು. ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ. ಎಲ್ಲ ವ್ಯವಸ್ಥೆಯನ್ನು ಏಜೆಂಟ್‌ಗಳು ನೋಡಿಕೊಳ್ಳುತ್ತಿದ್ದಾರೆ. ಇಲ್ಲಿಯ ಎಸ್ಪಿ, ಡಿವೈಎಸ್ಪಿ ಎಲ್ಲರೂ ದುಡ್ಡು ಕೊಟ್ಟು ಬಂದಿದ್ದಾರೆ. ಪೊಲೀಸರ ಹರಾಜು ನಡೆದಿದೆ ಎಂದು ಆರೋಪಿಸಿದರು.

ಬೃಹತ್ ಪ್ರತಿಭಟನಾ ಮೆರವಣಿಗೆ..

ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ, ರೈತರ ಸಮಸ್ಯೆಗಳು, ಮಿತಿಮೀರಿದ ಅಕ್ರಮ ಜೂಜಾಟ ಹಾಗೂ ಸರಕಾರದ ಜನವಿರೋಧಿ ನೀತಿ ಖಂಡಿಸಿ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಮಾಡಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತು. ನಗರದ ಶ್ರೀ ಪುರಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಬಿಜೆಪಿ ಪ್ರತಿಭಟನಾ ಮೆರವಣಿಗೆ ಎಂ.ಜಿ. ರಸ್ತೆ ಮೂಲಕ ಸಾಗಿ ಮಹಾತ್ಮಾ ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡಿತು. ಪ್ರತಿಭಟನೆ ಮಾರ್ಗದುದ್ದಕ್ಕೂ ಬಿಜೆಪಿ ಬಾವುಟಗಳು ರಾರಾಜಿಸಿದವು. ಕಾಂಗ್ರೆಸ್ ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ವೈಫಲ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.