ಸಾರಾಂಶ
ಬ್ಯಾಡಗಿ: ಯಾವುದೇ ಭೇದವಿಲ್ಲದೆ ಸರ್ವರಿಗೂ ಗ್ಯಾರಂಟಿ ಯೋಜನೆ ತಲುಪಿಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದು ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದ ಅವರು, ಶಿಗ್ಗಾವಿ ತಾಲೂಕಿನಲ್ಲಿ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ಫ್ರಿಜ್ ಖರೀದಿಸಿದ್ದಾರೆ. ಆ ಕ್ಷೇತ್ರವನ್ನು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿದ್ದಾರೆ. ಆದರೂ ಅವರು ಗ್ಯಾರಂಟಿ ಯೋಜನೆ ಕಾರ್ಡ್ ಹರಿದು ಹಾಕಿ ಎಂದು ಕರೆ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ. ನಮ್ಮ ಪಕ್ಷ ಯಾವುದೇ ತಾರತಮ್ಯ ಮಾಡದೇ ಸರ್ವರನ್ನೂ ಸಮಭಾವದಿಂದ ಕಾಣುತ್ತದೆ ಎಂದರು.ಇದಕ್ಕೂ ಮುನ್ನ ಉಭಯ ನಾಯಕರು ಗ್ರಾಮ ಪಂಚಾಯತ್ ಕಾರ್ಯಾಲಯ ಎದುರು ಇರುವ ಹುತಾತ್ಮ ಮೈಲಾರ ಮಹಾದೇವ ಹಾಗೂ ಡಾ.ಮಹಾದೇವ ಬಣಕಾರ ಪುತ್ಥಳಿಗೆ ಹೂಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು.ತೆರೆದ ವಾಹನದಲ್ಲಿದ್ದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಮುಖಂಡರಾದ ಸಿ.ಆರ್. ಬಳ್ಳಾರಿ, ಖಾದರಸಾಬ ದೊಡ್ಡಮನಿ, ಲಕ್ಷ್ಮಿ ಜಿಂಗಾಡೆ, ಪ್ರೇಮಾ ದೊಡ್ಡಮನಿ, ಮುನ್ನಾ ಎರೆಸೀಮಿ, ದುರಗೇಶ ಗೋಣೆಮ್ಮನವರ, ರಾಮಣ್ಣ ಉಕ್ಕುಂದ, ನಾಗರಾಜ ಅನ್ವೇರಿ, ಶಿವಪುತ್ರಪ್ಪ ಅಗಡಿ, ಬಸವರಾಜ ಬಳ್ಳಾರಿ ಇದ್ದರು.ಸಂಭಾವಿತ ಸ್ವಭಾವದ ಆನಂದಸ್ವಾಮಿ ಗಡ್ಡದೇವರಮಠ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ತಮ್ಮ ಭಾವನೆಗಳಿಗೆ ಸ್ಪಂದಿಸುವ ಅವರನ್ನು ಅತಿ ಹೆಚ್ಚಿನ ಮತಗಳ ಅಂತರದ ಮತಗಳಿಂದ ಗೆಲ್ಲಿಸುವ ಮೂಲಕ ಹೊಸ ದಾಖಲೆ ಬರೆಯೋಣ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.