ಸಾರಾಂಶ
ಗಜೇಂದ್ರಗಡ: ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಆಪರೇಶನ್ ಪರಿಣಾಮ ಬಿಜೆಪಿ ಬಂಡಾಯ ಅಭ್ಯರ್ಥಿ ಸುಭಾಸ ಮ್ಯಾಗೇರಿ ಅಧ್ಯಕ್ಷರಾಗಿ, ಕಾಂಗ್ರೆಸ್‌ನ ಸವಿತಾ ಬಿದರಳ್ಳಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬಂಡಾಯ ಸದಸ್ಯ ಸುಭಾಸ ಮ್ಯಾಗೇರಿ ಹಾಗೂ ಯಮನಪ್ಪ ತಿರಕೋಜಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸವಿತಾ ಬಿದರಳ್ಳಿ, ಸುಜಾತಾಬಾಯಿ ಶಿಂಗ್ರಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿತ್ತು.ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ಅಭ್ಯರ್ಥಿಗಳಲ್ಲಿ ಯಾರೂ ನಾಮಪತ್ರ ಹಿಂಪಡೆಯದ್ದರಿಂದ ಮಧ್ಯಾಹ್ನ ೨.೩೦ಕ್ಕೆ ನಡೆದ ಮತದಾನದಲ್ಲಿ ಪುರಸಭೆ ಬಿಜೆಪಿ ಬಂಡಾಯ ಅಭ್ಯರ್ಥಿ ಸುಭಾಸ ಮ್ಯಾಗೇರಿ ೧೩ ಮತಗಳನ್ನು ಪಡೆದು ಅಧ್ಯಕ್ಷ, ಸವಿತಾ ಬಿದರಳ್ಳಿ ೧೩ ಮತಗಳನ್ನು ಪಡೆದ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿಗಳಾದ ಯಮನಪ್ಪ ತಿರಕೋಜಿ ಹಾಗೂ ಸುಜಾತಾಬಾಯಿ ಶಿಂಗ್ರಿ ತಲಾ ೧೧ಮತ ಪಡೆದರು. ಬಂಡಾಯದಿಂದ ಪುರಸಭೆ ಅಧಿಕಾರ ಕಾಂಗ್ರೆಸ್ ಪಾಲಾಗಿದ್ದು ಬಿಜೆಪಿ ಮುಖಭಂಗಕ್ಕೆ ಒಳಗಾಯಿತು.
ಪಟ್ಟಣದ ಪುರಸಭೆಯಲ್ಲಿ ಬಹುಮತ ಹೊಂದಿದ ಪರಿಣಾಮ ಬಿಜೆಪಿ ಸಹಜವಾಗಿ ಪುರಸಭೆ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದರಿಂದ ಸದಸ್ಯರಿಗೆ ಸಭೆ ಮಾಡಿ ವಿಪ್ ಜಾರಿ ಮಾಡಿ ಮಂಗಳವಾರ ಬೆಳಗ್ಗೆ ೯.೩೦ಕ್ಕೆ ಬಿಜೆಪಿ ಕಾರ್ಯಾಲಯಕ್ಕೆ ಬರುವಂತೆ ಸೂಚಿಸಿತ್ತು, ಆದರೆ ಬಿಜೆಪಿ ಹೈಕಮಾಂಡ್ ಕರೆದಿದ್ದ ೧೮ ಸದಸ್ಯರಲ್ಲಿ ೭ ಸದಸ್ಯರು ೧೦.೩೦ ಆದರೂ ಸಭೆಗೆ ಬಾರದಿದ್ದಾಗ, ಬಿಜೆಪಿ ಮುಖಂಡರು ಬಂಡಾಯ ಸದಸ್ಯರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದರೂ ಸಹ ಪ್ರಯೋಜನವಾಗಲಿಲ್ಲ. ಕೆಲ ದಿನಗಳ ಹಿಂದೆ ನರೇಗಲ್ ಪಟ್ಟಣ ಪಂಚಾಯ್ತಿಯಲ್ಲಾದ ರಾಜಕೀಯ ಬೆಳವಣಿಗೆ ಹಾಗೂ ಪಟ್ಟಣದಲ್ಲಾದ ರಾಜಕೀಯ ಕ್ಷೀಪ್ರ ಬೆಳವಣಿಗೆ ಕಲೆ ಹಾಕುವಲ್ಲಿ ಬಿಜೆಪಿ ಎಡವಿತು.ಸಿದ್ದಪ್ಪ ಬಂಡಿ, ಮುರ್ತುಜಾ ಡಾಲಾಯತ್ ಕರಾಮತ್ತು:
ರಾಜ್ಯ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಬಿಜೆಪಿಯಿಂದ ಹೊರ ಬಂದಿದ್ದ ಮಾಜಿ ಸಚಿವ ಕಳಕಪ್ಪ ಬಂಡಿ ಸಹೋದರ ಕಾಂಗ್ರೆಸ್ ಮುಖಂಡ ಸಿದ್ದಪ್ಪ ಬಂಡಿ, ಪುರಸಭೆ ವಿಪಕ್ಷ ನಾಯಕ ಮುರ್ತುಜಾ ಡಾಲಾಯತ್ ಪುರಸಭೆಯ ಬಂಡಾಯ ಅಭ್ಯರ್ಥಿಗಳ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಪರಿಣಾಮ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಸಿದ್ದಪ್ಪ ಬಂಡಿ ತಂತ್ರಗಾರಿಕೆ ಹಾಗೂ ಮುರ್ತುಜಾ ಡಾಲಾಯತ್ ತಂಡದ ಸಮಯ ಪ್ರಜ್ಞೆಯ ಪ್ರಯತ್ನದಿಂದ ಪುರಸಭೆ ಆಡಳಿತ ಕಾಂಗ್ರೆಸ್ ಪಾಲಾಗಿದ್ದು, ಬಿಜೆಪಿಗೆ ದೊಡ್ಡ ಶಾಕ್ ನೀಡಿದ ಕಾಂಗ್ರೆಸ್ ಮುಖಂಡರು ಗೆಲುವಿನ ನಗೆ ಬೀರಿದರು.ಬಿಜೆಪಿ ವರಿಷ್ಠರಲ್ಲಿನ ಸಮನ್ವಯತೆ ಕೊರತೆ ಹಾಗೂ ತಾರತಮ್ಯ, ಕೆಲವೇ ಸದಸ್ಯರಿಗೆ ಮಹತ್ವ, ಬೇರೆ ಸದಸ್ಯರ ವಾರ್ಡಗಳಿಗೆ ಬಂದ ಅಭಿವೃದ್ಧಿ ಕಾಮಗಾರಿ ನೀಡಿಲ್ಲ ಎಂಬ ಆಕ್ರೋಶ ಸ್ಥಳೀಯ ಮುಖಂಡರೊಂದಿಗೆ ಹಂಚಿಕೊಂಡಿದ್ದಾರೆ. ನಮ್ಮ ವಾರ್ಡಗಳಲ್ಲಿ ಅಭಿವೃದ್ಧಿ ಕಾರ್ಯದ ಜತೆಗೆ ಜನರ ಸೇವೆ ಮಾಡಬೇಕು ಎಂದು ಇಲ್ಲಿನ ಮುಖಂಡರೊಂದಿಗೆ ಸಂಪರ್ಕ ಮಾಡಿ, ಕಾಂಗ್ರೆಸ್ ಸದಸ್ಯರು ಸಹಕಾರ ನೀಡಿದರೆ ಗುಂಪಿನೊಂದಿಗೆ ಬರುವದಾಗಿ ತಿಳಿಸಿದ್ದರು. ಹೀಗಾಗಿ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ಬೆಂಬಲ ಅವರಿಗೆ ನೀಡಿದ್ದೇವೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದ್ದಾರೆ.ಪಟ್ಟಣದ ಅಭಿವೃದ್ಧಿ ಮಾಡಬೇಕಾಗಿದೆ. ಹೀಗಾಗಿ ಕಾಂಗ್ರೆಸ್ ಸದಸ್ಯರ ಸಹಕಾರ ಪಡೆದು ಪುರಸಭೆ ಅಧ್ಯಕ್ಷನಾಗಿ ಆಯ್ಕೆ ಆಗಿದ್ದೇನೆ ಎಂದು ಪುರಸಭೆ ನೂತನ ಅಧ್ಯಕ್ಷ ಸುಭಾಸ ಮ್ಯಾಗೇರಿ ಹೇಳಿದರು.