ಸಾರಾಂಶ
ಕುಕನೂರು ತಾಲೂಕಿನ ವೀರಾಪುರ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ನಡೆಯಿತು.
ಕುಕನೂರು: ಭಾರತೀಯರಿಗೆ ಅಂಬೇಡ್ಕರ್ ನೀಡಿದ ಸಂವಿಧಾನವೇ ಧರ್ಮಗ್ರಂಥ ಎಂದು ಯುವ ಮುಖಂಡ ಪ್ರಕಾಶ ದೊಡ್ಮನಿ ಹೇಳಿದರು.
ತಾಲೂಕಿನ ವೀರಾಪುರ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜರುಗಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿಯಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ನಾವೆಲ್ಲರೂ ಆರಾಧನೆ ಮಾಡಬೇಕು. ಅದನ್ನು ಅಧ್ಯಯನ ಮಾಡಬೇಕು. ಅಂಬೇಡ್ಕರ್ ಭಾರತಕ್ಕೆ ಸದೃಢ ಹಾಗೂ ಬಲಿಷ್ಠ ಸಂವಿಧಾನ ನೀಡಿದ್ದಾರೆ ಎಂದು ಹೇಳಿದರು.ನಮ್ಮ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇಂದು ಹಲವಾರು ದೇಶಗಳು ನಮ್ಮ ಸಂವಿಧಾನದ ಆಕರಗಳನ್ನು ಎರವಲು ಪಡೆದುಕೊಂಡು ಅವರ ವಿಚಾರಗಳನ್ನು ಅನುಸರಿಸುತ್ತಿವೆ ಎಂದು ದೊಡ್ಮನಿ ಅವರು ಹೇಳಿದರು.
ಮುಖಂಡ ಗಾಳೆಪ್ಪ ಎಂ.ಡಿ. ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ತಮಗಾಗಿ ಬದುಕದೇ ಎಲ್ಲ ಸಮುದಾಯದ ಹಾಗೂ ವಿಶ್ವದ ಒಳಿತಿಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಮಹಾನ್ ನಾಯಕರು. ಅಂಥವರ ತತ್ವಾದರ್ಶದ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದು ಹೇಳಿದರು.ಬಾಬು ಜಗಜೀವನ್ ರಾಮ್ ಅವರು ಕೂಡಾ ಹಸಿರು ಕ್ರಾಂತಿಯ ಹರಿಕಾರರಾಗಿ, ದೇಶದ ಉಪ ಪ್ರಧಾನಿಯಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದಾರೆ. ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ತಮ್ಮನ್ನೆ ತಾವು ಅರ್ಪಿಸಿಕೊಂಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ದೇವಪ್ಪ ಶಹಾಪುರ, ಯಲ್ಲಪ್ಪ ಹುಲೇಗುಡ್ಡ, ಶರಣಪ್ಪ ದೊಡ್ಮನಿ, ಹನುಮಪ್ಪ ನಡಲುಮನಿ, ದೇವಪ್ಪ ಕಡೆಮನಿ, ದ್ಯಾಮಪ್ಪ ಹೊಸಮನಿ, ಮಲ್ಲೇಶ ದೊಡ್ಡಮನಿ, ಬೀರಪ್ಪ ಕಡೆಮನಿ, ರಾಮಪ್ಪ ಕಡೆಮನಿ, ಈರಪ್ಪ ಸಂಧಿಮನಿ, ಸ್ವಾರೆಪ್ಪ ಕೊಂಡಪ್ಪ, ದುರಗಪ್ಪ ಜೀನಿದ್, ಮೈಲಪ್ಪ ಪೂಜಾರ, ಗಾಳೇಶ ದೊಡ್ಮನಿ, ಗಾಳೆಪ್ಪ ಕೆಳಗಿನಮನಿ, ಯಲ್ಲಪ್ಪ ಆಡೀನ್, ಸುಂಕಪ್ಪ ಇತರರು ಇದ್ದರು.