ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಜಾಗೃತಿಗಾಗಿ ಆಯೋಜಿಸಿದ್ದ ಚಿತ್ರ ಕಲೆ, ಪ್ರಬಂಧ, ಇತರೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಬಹುಮಾನ ವಿತರಿಸಲಾಯಿತು. ತಹಸೀಲ್ದಾರ್ ಕಚೇರಿ ಆವರಣದಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದವರೆಗೆ ಸಂವಿಧಾನ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಂತಹ ಈ ದಿನವನ್ನು ಸಂವಿಧಾನ ದಿನವಾಗಿ ಆಚರಣೆ ಮಾಡುತ್ತಿರುವುದು ನಮಗೆಲ್ಲರಿಗೂ ಸಂತಸದ ವಿಷಯ. ಸಂವಿಧಾನದ ಆಶಯದಂತೆ ನಾವೆಲ್ಲರೂ ಸಮಾಜದಲ್ಲಿ ಸಮಾನತೆಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲಾಮಟ್ಟದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಸಂವಿಧಾನ ಪೀಠಿಕೆಗೆ ಪುಷ್ಪ ನಮನ ಸಲ್ಲಿಸಿ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿ ಅವರು ಮಾತನಾಡಿದರು.

ನಮ್ಮದು ಲಿಖಿತ ಸಂವಿಧಾನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಇತರೆ ಮಹಾನ್ ಚೇತನರ ನೆರವಿನಿಂದ ಸುಧೀರ್ಘವಾಗಿ 2 ವರ್ಷ 11 ತಿಂಗಳು 18 ದಿನಗಳ ಕಾಲ ಸತತ ಪ್ರಯತ್ನದಿಂದ 395 ವಿಧಿಗಳು, 8 ಅನುಸೂಚಿಗಳು, 22 ಭಾಗಗಳನ್ನು ಹೊಂದಿರುವ ಪ್ರಪಂಚದ ಅತೀ ದೊಡ್ಡ ಸಂವಿಧಾನವನ್ನು 1950 ನವೆಂಬರ್ 26ರಂದು ಸಮರ್ಪಿಸಿದರು. ಇದರಿಂದ ನಾವೆಲ್ಲರೂ ನಮಗೆ ನೀಡಿರುವ ಹಕ್ಕುಗಳನ್ನು ಬಳಸಿಕೊಂಡು ಸ್ವತಂತ್ರವಾಗಿ ಮಾತನಾಡುತ್ತಿದ್ದೇವೆ. ಸಂವಿಧಾನ ರಚಿಸುವ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಅವರ ಜೊತೆ ಇದ್ದಂತಹ ಮಹಾನ್ ವ್ಯಕ್ತಿಗಳು ದೇಶದ ಸದೃಢತೆಗಾಗಿ ಸಂವಿಧಾನ ಬರೆದು ಅರ್ಪಿಸಿದ್ದಾರೆ ಎಂದರು.

ರಾಜ್ಯಶಾಸ್ತ್ರ ಉಪನ್ಯಾಸಕಿ ಡಾ. ಮಂಜುಳಾ ಮಾತನಾಡಿ, ಸಂವಿಧಾನ ಒಂದು ದೇಶದ ಮೂಲಭೂತ ಕಾನೂನು, ಇದು ಸರ್ಕಾರದ ರಚನೆ, ಅಧಿಕಾರಗಳು ಮತ್ತು ನಾಗರಿಕರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ವ್ಯಾಖ್ಯಾನಿಸುವ ನಿಯಮಗಳು ಮತ್ತು ತತ್ವಗಳ ಸಮೂಹವಾಗಿದೆ. ಇದರಲ್ಲಿ ದೇಶದ ಆಡಳಿತದ ಚೌಕಟ್ಟನ್ನು ತಿಳಿಯಬಹುದು. ಭಾರತದಲ್ಲಿ ಹಲವಾರು ಧರ್ಮ, ಜಾತಿ ಬುಡಕಟ್ಟು ಜನಾಂಗಗಳು ಇರುವುದರಿಂದ ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸಂವಿಧಾನವನ್ನು ರಚಿಸಲಾಯಿತು ಎಂದು ಹೇಳಿದರು.

ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಜಾಗೃತಿಗಾಗಿ ಆಯೋಜಿಸಿದ್ದ ಚಿತ್ರ ಕಲೆ, ಪ್ರಬಂಧ, ಇತರೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಬಹುಮಾನ ವಿತರಿಸಲಾಯಿತು. ತಹಸೀಲ್ದಾರ್ ಕಚೇರಿ ಆವರಣದಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದವರೆಗೆ ಸಂವಿಧಾನ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಡಾ.ಕೆ.ಎನ್.ಅನುರಾಧ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಟಿಎಲ್ಎಸ್ ಪ್ರೇಮ, ಎಸಿಪಿ ಹರ್ಷ, ತಹಸೀಲ್ದಾರ್ ಅನಿಲ್ ಎಂ., ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಬಿ.ರಾಜಣ್ಣ, ಸಂಘಟನೆಗಳ ಮುಖಂಡರಾದ ಕಾರಹಳ್ಳಿ ಶ್ರೀನಿವಾಸ್, ವೆಂಕಟೇಶ್, ಬುಳ್ಳಳ್ಳಿ ರಾಜಪ್ಪ, ರವಿಕಲಾ ಉಪಸ್ಥಿತರಿದ್ದರು.