ಸಂಪೂರ್ಣ ಸಾಕ್ಷರತಾ ಯೋಜನೆಯ ಮುಂದುವರಿದ ಭಾಗ: ಅಕ್ಷರ ವಂಚಿತರಿಗೆ ಸಾಕ್ಷರತಾ ಪರೀಕ್ಷೆ!

| Published : Apr 23 2025, 12:35 AM IST

ಸಂಪೂರ್ಣ ಸಾಕ್ಷರತಾ ಯೋಜನೆಯ ಮುಂದುವರಿದ ಭಾಗ: ಅಕ್ಷರ ವಂಚಿತರಿಗೆ ಸಾಕ್ಷರತಾ ಪರೀಕ್ಷೆ!
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ 2022-23 ರಲ್ಲಿ ಅನುಷ್ಠಾನಗೊಳಿಸಿದ್ದ ಸಾವಿರ ಗ್ರಾ.ಪಂ.ಗಳನ್ನು ಸಂಪೂರ್ಣ ಸಾಕ್ಷರ ಗ್ರಾಮಪಂಚಾಯಿತಿ ಗಳನ್ನಾಗಿಸುವ ಕಾರ್ಯಕ್ರಮದಡಿಯಲ್ಲಿ ಉಳಿಕೆ ಗುರಿಯ ಮೂರನೇ ಹಂತದ ಕಲಿಕೆಯ ಭಾಗವಾಗಿ ಇದೀಗ ಸಾಕ್ಷರತಾ ಪರೀಕ್ಷೆ ನಡೆಸಲಾಗುತ್ತಿದೆ.

ಮೌನೇಶ ವಿಶ್ವಕರ್ಮ

ಕನ್ನಡಪ್ರಭ ವಾರ್ತೆ ಬಂಟ್ವಾಳ

ಪಿಯುಸಿ ಪರೀಕ್ಷಾ ಫಲಿತಾಂಶದ ಬೆನ್ನಲ್ಲೇ, ಇದೀಗ ಎಲ್ಲರೂ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಈ‌ ನಡುವೆ ವಯಸ್ಕರ ಶಿಕ್ಷಣದ ಚಟುವಟಿಕೆಗಳು ಮತ್ತೆ ಗರಿಗೆದರಿದ್ದು ದಕ್ಷಿಣ ಕನ್ನಡ‌ ಜಿಲ್ಲೆಯ 700ಕ್ಕೂ ಅಧಿಕ ಅಕ್ಷರ ವಂಚಿತರು ಸಾಕ್ಷರತಾ ಪರೀಕ್ಷೆ ಬರೆಯುವ ಉತ್ಸಾಹದಲ್ಲಿದ್ದಾರೆ.

1990-92 ರಲ್ಲಿ ಜಾರಿಯಲ್ಲಿದ್ದ ಸಾಕ್ಷರತಾ ಆಂದೋಲನ, 2000-2001 ರಲ್ಲಿ ಮುಂದುವರಿಕಾ ಶಿಕ್ಷಣ ಯೋಜನೆಯ ಚಟುವಟಿಕೆಗಳ‌ ಬಳಿಕವೂ ಅಕ್ಷರ ಜ್ಞಾನದಿಂದ ವಂಚಿತರಾದವರನ್ನು ಅಕ್ಷರಸ್ಥರನ್ನಾಗಿಸುವುದು ಈ ಯೋಜನೆಯ ಗುರಿಯಾಗಿದೆ.

ರಾಜ್ಯ ಸರ್ಕಾರ 2022-23 ರಲ್ಲಿ ಅನುಷ್ಠಾನಗೊಳಿಸಿದ್ದ ಸಾವಿರ ಗ್ರಾ.ಪಂ.ಗಳನ್ನು ಸಂಪೂರ್ಣ ಸಾಕ್ಷರ ಗ್ರಾಮಪಂಚಾಯಿತಿ ಗಳನ್ನಾಗಿಸುವ ಕಾರ್ಯಕ್ರಮದಡಿಯಲ್ಲಿ ಉಳಿಕೆ ಗುರಿಯ ಮೂರನೇ ಹಂತದ ಕಲಿಕೆಯ ಭಾಗವಾಗಿ ಇದೀಗ ಸಾಕ್ಷರತಾ ಪರೀಕ್ಷೆ ನಡೆಸಲಾಗುತ್ತಿದೆ.

ಪ್ರತೀ 20 ಮಂದಿ ಅನಕ್ಷರಸ್ಥ ಕಲಿಕಾರ್ಥಿಗಳಿಗೆ, ಓರ್ವ ಬೋಧಕರನ್ನು ನೇಮಿಸುವ ಮೂಲಕ ಅನಕ್ಷರಸ್ಥರ ಕಲಿಕೆಗೆ ಪೂರಕ ವ್ಯವಸ್ಥೆ ಈಗಾಗಲೇ ಮಾಡಲಾಗಿದ್ದು, ಕಲಿಕಾ ಸಾಮಾಗ್ರಿಗಳ ಜೊತೆಗೆ ‘ಬಾಳಿಗೆ ಬೆಳಕು’ ಹಾಗೂ ‘ಸವಿ ಬರಹ’ ಎನ್ನುವ ಪಠ್ಯಪುಸ್ತಕ ನೀಡಲಾಗಿದೆ. ಶಿಕ್ಷಣ ಇಲಾಖೆ ಹಾಗೂ ಗ್ರಾಮಪಂಚಾಯಿತಿ ಮೂಲಕ ನೇಮಿಸಲ್ಪಟ್ಟ ಬೋಧಕರು ಗುರುತಿಸಲಾಗಿರುವ ಅನಕ್ಷರಸ್ಥ ಕಲಿಕಾರ್ಥಿಗಳಿಗೆ 120 ಗಂಟೆಗಳ ತರಗತಿಯನ್ನು ನಡೆಸಿದ್ದು, ಡಯಟ್‌ ಸಂಸ್ಥೆಯ ಮೇಲಸ್ತುವಾರಿಯಲ್ಲಿ ಸಾಕ್ಷರತಾ ಪರೀಕ್ಷೆ ನಡೆಯಲಿದೆ.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಪ್ರಾಂಶುಪಾಲ ರಾಜಲಕ್ಷ್ಮೀ ಕೆ. ಮಾರ್ಗದರ್ಶನದಲ್ಲಿ ಸಾಕ್ಷರತಾ ಪರೀಕ್ಷೆ ಹಾಗೂ ಮೌಲ್ಯಮಾಪನ ನಡೆಯಲಿದೆ. ಕಲಿಕಾರ್ಥಿಗಳ ಕಲಿಕೆಗೆ ಪೂರಕವಾಗಿ ವಿವಿಧ ಶಾಲಾ ಶಿಕ್ಷಕರು, ಗ್ರಾ.ಪಂ. ವ್ಯಾಪ್ತಿಯ ಪ್ರೇರಕರು, ಗ್ರಂಥಪಾಲಕರು, ಸಾಕ್ಷರತಾ ಸ್ವಯಂ ಸೇವಕರು ಈ ಚಳುವಳಿಯಲ್ಲಿ ಅಲ್ಪಮೊತ್ತದ ಗೌರವಧನ ಪಡೆದುಕೊಂಡು ಸ್ವಯಂಸ್ಪೂರ್ತಿಯಿಂದ ಬೋಧಕರಾಗಿ ತೊಡಗಿಸಿಕೊಂಡಿದ್ದಾರೆ.

27 ರಂದು ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕನ್ನು ಹೊರತು ಪಡಿಸಿ ಉಳಿದ ಎಲ್ಲಾ ತಾಲೂಕುಗಳಲ್ಲಿ ಈ ಪರೀಕ್ಷೆ‌ ನಡೆಯಲಿದ್ದು, ಅನಕ್ಷರಸ್ಥ ಕಲಿಕಾರ್ಥಿಗಳಿಗೆ ಅನುಕೂಲವಾಗುವ ಗ್ರಾ.ಪಂ. ಹಾಗೂ ಶಾಲಾಕಟ್ಟಡಗಳನ್ನು 75 ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ.

ಮಂಗಳೂರು ಉತ್ತರ ವಲಯದಿಂದ 21, ಮಂಗಳೂರು ದಕ್ಷಿಣ ದಿಂದ 52, ಮೂಡಬಿದ್ರೆ 19, ಪುತ್ತೂರಿನಲ್ಲಿ 237, ಬೆಳ್ತಂಗಡಿಯ 112, ಮತ್ತು ಸುಳ್ಯದ 256 ಅನಕ್ಷರಸ್ಥ ಕಲಿಕಾರ್ಥಿಗಳು ಸೇರಿದಂತೆ ಒಟ್ಟು 717 ಮಂದಿ ಕಲಿಕಾರ್ಥಿಗಳ ಸಾಕ್ಷರತಾ ಪರೀಕ್ಷೆಗಾಗಿ ಎಲ್ಲಾ ಹಂತಗಳಲ್ಲಿ ಸಿದ್ಧತಾ ಕಾರ‍್ಯ ನಡೆಯುತ್ತಿದೆ.

ಈ ಕುರಿತು ‘ಕನ್ನಡಪ್ರಭ’ದೊಂದಿಗೆಮಾತನಾಡಿದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಫಾತಿಮಾ ಟಿ.ಐ. ಅವರು, ನಮ್ಮ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರ ಜಿಲ್ಲೆಯನ್ನಾಗಿ ಘೋಷಿಸುವ ಇರಾದೆಯಲ್ಲಿ ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್‌ ಕೆ. ಮಾರ್ಗದರ್ಶನದಲ್ಲಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನಮ್ಮ ಸಮೀಕ್ಷೆಯಲ್ಲಿ ಗುರುತಿಸಿರುವ ಅನಕ್ಷರಸ್ಥರ ಕಲಿಕೆಗೆ ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ, ವಿವಿಧ ಕಾರಣಗಳಿಂದ ಇನ್ನೂ ಯಾರಾದರೂ ಅಕ್ಷರಜ್ಞಾನ ವಂಚಿತರು ಇದ್ದಲ್ಲಿ ಅವರ ಕಲಿಕೆಗೂ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.----------------------------------------------------ಓದು,ಬರಹ, ಲೆಕ್ಕಾಚಾರ ಪರೀಕ್ಷೆಯ ಮಾನದಂಡಗಳಾಗಿದ್ದು, ಉಳಿದಂತೆ ಅರಿವು, ಕ್ರಿಯಾಶೀಲತೆ, ಅಭಿವೃದ್ಧಿ ಹಾಗೂ ಸ್ವಾವಲಂಬನೆ ಮೌಲ್ಯಗಳಿಗೆ ಒತ್ತು ನೀಡುತ್ತೇವೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ನೀಡಲಾಗುವುದು. ಜಿಲ್ಲೆಯ ಯಾವುದೇ ಹಳ್ಳಿಯಲ್ಲಿನ ಅಕ್ಷರ ವಂಚಿತರು ಸಮೀಕ್ಷೆಯಿಂದ ಹೊರಗುಳಿದಿದ್ದರೆ, ಸ್ಥಳೀಯ ಗ್ರಾಮಪಂಚಾಯಿತಿ, ಶಾಲೆ ಅಥವಾ ಗ್ರಂಥಾಲಯದ ಮೂಲಕ ನೋಂದಣಿ ಮಾಡಿಸಿಕೊಳ್ಳುವುದಕ್ಕೆ ಅವಕಾಶವಿದೆ. ಅವರಿಗೆ ಮುಂದಿನ ಹಂತದಲ್ಲಿ ತರಗತಿಗಳನ್ನು ನಡೆಸಿ ಪರೀಕ್ಷೆ ನಡೆಸುತ್ತೇವೆ.

-ಫಾತಿಮಾ ಟಿ.ಐ.., ಹಿರಿಯ ಉಪನ್ಯಾಸಕರು ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ, ದ.ಕ.ಜಿ.ಪಂ ಮಂಗಳೂರು.