ಸಾರಾಂಶ
ಆಡಳಿತ ಮಂಡಳಿಯ ಸದಸ್ಯರ ಪ್ರಾಮಾಣಿಕ ಪ್ರಯತ್ನ ಮತ್ತು ಸಿಬ್ಬಂದಿಯ ದಕ್ಷ ಸೇವೆಯಿಂದ ಸಹಕಾರಿ ಸಂಘಗಳ ಬೆಳೆವಣಿಗೆ ಸಾಧ್ಯ.
ದಿ ಕೊಪ್ಪಳ ಯುನೈಟೆಡ್ ಕ್ರೇಡಿಟ್ ಸೌಹಾರ್ದಾ ಸಹಕಾರಿ ಸಂಘದ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ ಕೊಪ್ಪಳ
ಆಡಳಿತ ಮಂಡಳಿಯ ಸದಸ್ಯರ ಪ್ರಾಮಾಣಿಕ ಪ್ರಯತ್ನ ಮತ್ತು ಸಿಬ್ಬಂದಿಯ ದಕ್ಷ ಸೇವೆಯಿಂದ ಸಹಕಾರಿ ಸಂಘಗಳ ಬೆಳೆವಣಿಗೆ ಸಾಧ್ಯ ಎಂದು ನಿವೃತ್ತ ಸಹಕಾರಿ ಅಧಿಕಾರಿ ಎಲ್.ವಿ. ವಿವೇಕಿ ಹೇಳಿದ್ದಾರೆ.ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ದಿ ಕೊಪ್ಪಳ ಯುನೈಟೆಡ್ ಕ್ರೇಡಿಟ್ ಸೌಹಾರ್ದಾ ಸಹಕಾರಿ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಪ್ರಗತಿಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ ಇದೆ. ಇತ್ತೀಚೆಗೆ ಕೆಲವೊಂದು ಸಹಾಕಾರಿ ಸಂಘದ ಆಡಳಿತ ಮಂಡಳಿ ಲೋಪದಿಂದ ಸಹಕಾರಿ ಕ್ಷೇತ್ರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಆದರೆ ಆಡಳಿತ ಮಂಡಳಿ ಪ್ರಾಮಾಣಿಕತೆಯಿಂದ ಶ್ರಮವಹಿಸಿದರೇ ಖಂಡಿತವಾಗಿಯೂ ಉತ್ತಮ ಪ್ರಗತಿ ಹೊಂದಲು ಸಾಧ್ಯ ಎಂದರು.ದಿ ಕೊಪ್ಪಳ ಯನೈಟೆಡ್ ಕ್ರೇಡಿಟ್ ಸೌಹಾರ್ದ ಸಹಕಾರಿ ಸಂಘ ವೇಗವಾಗಿ ಬೆಳೆಯುತ್ತಿದೆ. ಕೇವಲ 7 ವರ್ಷಗಳಲ್ಲಿ ಕೋಟ್ಯಂತರ ರುಪಾಯಿ ಸಾಲ ನೀಡಿ, ಉತ್ತಮ ಮರುಪಾವತಿ ಮಾಡಿಕೊಳ್ಳುವ ಮೂಲಕ ಸಂಘ ಉತ್ತಮ ಬೆಳವಣಿಗೆ ಕಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶಂಕರಗೌಡ ಹಿರೇಗೌಡ್ರ ಮಾತನಾಡಿ, ನಮ್ಮ ಸಂಘವೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘದ ಅಡಿಯಲ್ಲಿ ಇದುವರೆಗೂ ಸಾಲ ವಸೂಲಾತಿಯೂ ಉತ್ತಮವಾಗಿದೆ ಮತ್ತು ಠೇವಣಿದಾರರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ ಎಂದರು.ಬ್ಯಾಂಕಿನ ಎನ್ ಪಿಎ ಕಳೆದ ನಾಲ್ಕು ವರ್ಷಗಳಿಂದ ಅಧಿಕವಾಗಿತ್ತು. ಆದರೆ, ಈಗ ಅದನ್ನು ಶೇ.18ಕ್ಕೆ ಇಳಿಸಿದ್ದೇವೆ. ಇನ್ನು ತಗ್ಗಿಸುವ ದಿಸೆಯಲ್ಲಿ ಕ್ರಮಕೈಗೊಳ್ಳಲಾಗುವುದು. ಇನ್ಮುಂದೆ ಸಹಕಾರ ಸಂಘದಲ್ಲಿ ಬಂಗಾರದ ಸಾಲ ಸೇರಿದಂತೆ ವಿವಿಧ ಸಾಲಗಳನ್ನು ನೀಡುವ ದಿಸೆಯಲ್ಲಿ ತೀರ್ಮಾನಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜಾರಿ ಮಾಡಲಾಗುವುದು ಎಂದರು.
ಉಪಾಧ್ಯಕ್ಷ ಗಿರೀಶ ಪಾನಘಂಟಿ, ನಿರ್ದೇಶಕರಾದ ಸೋಮರಡ್ಡಿ ಅಳವಂಡಿ, ಡಾ. ಶ್ರೀನಿವಾಸ ಹ್ಯಾಟಿ, ವಿನೋದರಡ್ಡಿ, ರೇಖಾ ಮೆಳ್ಳಿಕೇರಿ, ಜಯಶ್ರೀ ಉಗುಳನಗೌಡ್ರ, ಶಂಭನಗೌಡ ಭಾಗ್ಯನಗರ, ಅಜೀಮ್ ಅತ್ತಾರ ಇದ್ದರು. ಡಾ. ಚಂದ್ರಶೇಖರ ಕರಮುಡಿ ಕಾರ್ಯಕ್ರಮ ನಿರೂಪಿಸಿದರು.