ಗದಗ: ಜಿಲ್ಲೆಯು ಅತ್ಯಂತ ಶ್ರೀಮಂತ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪರಂಪರೆಯನ್ನು ಹೊಂದಿದ್ದು, ನಾಡಿನ ಪ್ರಾಚೀನ ಇತಿಹಾಸದ ನಿರ್ಮಾಣಕ್ಕೆ ಇಲ್ಲಿನ ಶಾಸನಗಳ ಕೊಡುಗೆ ಅಪಾರವಾದದ್ದು ಎಂದು ಶಾಸನ ವಿದ್ವಾಂಸರಾದ ಹನುಮಾಕ್ಷಿ ಗೋಗಿ ಹೇಳಿದರು.

ನಗರದ ಕೆ.ಎಲ್.ಇ. ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದ ಇತಿಹಾಸ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ ಗದಗ ಜಿಲ್ಲೆಯ ಶಾಸನಗಳು ಎಂಬ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ಜಿಲ್ಲೆಯಲ್ಲಿ ಸದ್ಯ ಎಂಟು ನೂರಕ್ಕೂ ಅಧಿಕ ಶಾಸನಗಳು ಲಭ್ಯವಿದ್ದು, ಇವು ಕರ್ನಾಟಕದ ಪ್ರಾಚೀನ ರಾಜಮನೆತನಗಳ ಆಡಳಿತ, ಅಂದಿನ ಸಾಮಾಜಿಕ ಹಾಗೂ ಧಾರ್ಮಿಕ ಜೀವನದ ಮೇಲೆ ಮಹತ್ವದ ಬೆಳಕು ಚೆಲ್ಲಿವೆ. ಪ್ರಮುಖವಾಗಿ ಜಿಲ್ಲೆಯಲ್ಲಿ ಬೌದ್ಧ, ಜೈನ್ ಹಾಗೂ ಶೈವ ಧರ್ಮಗಳಿಗೆ ಸಂಬಂಧಿಸಿದ ಶಾಸನಗಳು ಹೆಚ್ಚಾಗಿ ಕಂಡುಬರುತ್ತವೆ. ಬೌದ್ಧ ಧರ್ಮಕ್ಕೆ ಸಂಬಂಧಿಸಿದ ನಾಲ್ಕು ಶಾಸನಗಳು ಜಿಲ್ಲೆಯಲ್ಲಿದ್ದರೆ, ಪ್ರಾಚೀನ ರಾಜಮನೆತನವಾದ ಶಾತವಾಹನರ ಕುರಿತಾದ ಎರಡು ಪ್ರಮುಖ ಶಾಸನಗಳೂ ಇಲ್ಲಿ ದೊರೆತಿವೆ ಎಂದು ಮಾಹಿತಿ ನೀಡಿದರು.

ಮುಳುಗುಂದ, ಲಕ್ಷ್ಮೇಶ್ವರ ಹಾಗೂ ಲಕ್ಕುಂಡಿ ಗ್ರಾಮಗಳು ಅಂದಿನ ಕಾಲದಲ್ಲಿ ಜೈನ ಧರ್ಮದ ಪ್ರಮುಖ ಕೇಂದ್ರಗಳಾಗಿದ್ದವು. ಹೀಗಾಗಿ, ಈ ಭಾಗಗಳಲ್ಲಿ ಹೆಚ್ಚಿನ ಜೈನ ಶಾಸನಗಳು ಪತ್ತೆಯಾಗಿವೆ. ಇನ್ನು ಡಂಬಳ ಮತ್ತು ಲಕ್ಷ್ಮೇಶ್ವರಗಳಲ್ಲಿ ಅಂದಿನ ವ್ಯಾಪಾರ-ವ್ಯವಹಾರಗಳ ಕುರಿತು ಮಾಹಿತಿ ನೀಡುವ ಶಾಸನಗಳು ದೊರೆತಿವೆ. ಜಿನಧರ್ಮವನ್ನು ಉಸಿರಾಗಿಸಿಕೊಂಡಿದ್ದ ದಾನಚಿಂತಾಮಣಿ ಅತ್ತಿಮಬ್ಬೆಯ ಜೀವನ ವೃತ್ತಾಂತದ ಮೇಲೆ ಬೆಳಕು ಚೆಲ್ಲುವ ಅಪರೂಪದ ಶಾಸನ ಲಕ್ಕುಂಡಿಯಲ್ಲಿ ಸಿಕ್ಕಿದೆ. ಜಿಲ್ಲೆಯಲ್ಲಿ ಇಲ್ಲಿ ವರೆಗೆ ಗುರುತಿಸಲ್ಪಟ್ಟಿರುವ ಶಾಸನಗಳ ಹೊರತಾಗಿಯೂ ಇನ್ನೂ ಸಂಶೋಧಿಸಿ ಗುರುತಿಸಬೇಕಾದ ನೂರಾರು ಶಾಸನಗಳು ಅಡಗಿಕೊಂಡಿವೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪಿ.ಜಿ. ಪಾಟೀಲರು, ವಿದ್ಯಾರ್ಥಿಗಳು ಇತಿಹಾಸದ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ತಳೆಯಬೇಕು. ಇತಿಹಾಸದ ಪ್ರಮುಖ ಆಕರಗಳಾದ ಶಾಸನಗಳ ಬಗ್ಗೆ ಅಧ್ಯಯನಶೀಲತೆ ಬೆಳೆಸಿಕೊಂಡಾಗ ಮಾತ್ರ ನಮ್ಮ ನಾಡಿನ ಶ್ರೀಮಂತ ಪರಂಪರೆಯನ್ನು ನೈಜವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ. ರಮೇಶ ಜಿ.ಕೆ. ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಜಗನ್ನಾಥ ಸ್ವಾಗತಿಸಿದರು. ನೇತ್ರಾ ನಾಗಲೋಟಿಮಠ ಪರಿಚಯಿಸಿದರು. ಅಪೂರ್ವ ಪೂಜಾರ ವಂದಿಸಿದರು. ಭಾಗ್ಯಲಕ್ಷ್ಮೀ ಮತ್ತು ಭಾಗ್ಯರಡ್ಡಿ ನಿರೂಪಿಸಿದರು. ಕಾರ್ಯಕ್ರದಮಲ್ಲಿ ಅಧ್ಯಾಪಕರು ಹಾಗೂ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

16ಜಿಡಿಜಿ8