ಮಠಗಳು ಸಂಸ್ಕೃತಿ, ಪರಂಪರೆ, ಧಾರ್ಮಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುವ ಪಾವನ ತಾಣಗಳು. ಶೈಕ್ಷಣಿಕ ಕ್ಷೇತ್ರಕ್ಕೆ ಅವುಗಳ ಕೊಡುಗೆ ಅಪಾರ ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ಹಾವೇರಿ: ಮಠಗಳು ಸಂಸ್ಕೃತಿ, ಪರಂಪರೆ, ಧಾರ್ಮಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುವ ಪಾವನ ತಾಣಗಳು. ಶೈಕ್ಷಣಿಕ ಕ್ಷೇತ್ರಕ್ಕೆ ಅವುಗಳ ಕೊಡುಗೆ ಅಪಾರ ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.ತಾಲೂಕಿನ ಅಗಡಿ ಗ್ರಾಮದ ಪ್ರಭುಸ್ವಾಮಿ ಮಠದ ಲಿಂ.ರುದ್ರಮುನಿ ಶಿವಯೋಗಿಗಳವರ 66ನೇ ಲಿಂ. ಸಂಗನಬಸವ ಸ್ವಾಮೀಜಿಯವರ ಸ್ಮರಣೋತ್ಸವ ಹಾಗೂ ಗುರುಸಿದ್ಧ ಸ್ವಾಮೀಜಿಯವರ ದಶ ವಾರ್ಷಿಕೋತ್ಸವ ಪಟ್ಟಾಧಿಕಾರದ ಸವಿನೆನಪಿಗಾಗಿ ಏರ್ಪಡಿಸಿರುವ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀಕುಮಾರ ನೀರಲಗಿ ಮಾತನಾಡಿ, ಜಾತ್ಯತೀತ ಮನೋಭಾವನೆ, ಸಮ ಸಮಾಜ ನಿರ್ಮಾಣ ಇಂದಿನ ಅಗತ್ಯತೆ, ಯುವಕರು ಧಾರ್ಮಿಕತೆಯಿಂದ ದೂರ ಸರಿಯುತ್ತಿರುವುದು ಆರೋಗ್ಯಕರವಲ್ಲ ಎಂದು ಹೇಳಿದರು.ಗ್ಯಾರಂಟಿ ಯೋಜನೆ ಅಧ್ಯಕ್ಷ ಎಂ.ಎಂ.ಹಿರೇಮಠ ಮಾತನಾಡಿ, ರೋಗಗ್ರಸ್ಥ ಸಮಾಜಕ್ಕೆ ಮಠಗಳು ದಿವ್ಯ ಔಷಧಗಳಾಗಬೇಕು. ಮಠಗಳ ಧರ್ಮಕಾರ್ಯಗಳಿಗೆ ಭಕ್ತರು ಕೈಜೋಡಿಸಬೇಕು ಎಂದು ಹೇಳಿದರು. ಮೈಸೂರಿನ ಸುಜ್ಞಾನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ನಾಡು ಶರಣರನ್ನು, ಸಂತರನ್ನು ಹಾಗೂ ದಾರ್ಶನಿಕರನ್ನು ನೀಡಿದ ಪುಣ್ಯಭೂಮಿ. ರಸ್ತೆಯಲ್ಲಿ ಬಿದ್ದು ಹೊರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುವಕರು ದಾರಿ ತಪ್ಪುತ್ತಿದ್ದಾರೆ. ಅವರಿಗೆ ಅನುಕರಣೀಯ ಆದರ್ಶಗಳ ಕೊರತೆ ಇದೆ ಎಂದರು.ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಇತಿಹಾಸ ಹೇಳುತ್ತದೆ ನಿನ್ನೆ ಸುಖವಿತ್ತು ಎಂದು. ವಿಜ್ಞಾನ ಹೇಳುತ್ತಿದೆ ನಾಳೆ ಸುಖವಿದೆ ಎಂದು ಆದರೆ ಧರ್ಮ ಹೇಳುತ್ತದೆ ಸ್ವಚ್ಛ ಮನಸ್ಸು, ಸುಂದರವಾದ ಹೃದಯವಿದ್ದರೆ ಪ್ರತಿದಿನವೂ ಸುಖವಾಗಿರುತ್ತದೆ ಎಂದು. ಮಾನವೀಯತೆಗೆ ಮಿಗಿಲಾದ ಧರ್ಮ ವಿಶ್ವದ ಯಾವ ಮೂಲೆಯಲ್ಲೂ ಇಲ್ಲ ಎಂದರು. ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ, ಹಿರೇಮಲ್ಲನಕೆರಿಯ ಅಭಿನವ ಚನ್ನಬಸವ ಸ್ವಾಮೀಜಿ,ಹತ್ತಿಮತ್ತೂರಿನ ನಿಜಗುಣ ಸ್ವಾಮೀಜಿ ಹಾಗೂ ನವಲಗುಂದದ ಅಭಿನವ ಬಸವಲಿಂಗ ಸ್ವಾಮೀಜಿ, ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿದರು.ಸಾಹಿತಿ ಕೆ.ಬಿ. ಭಿಕ್ಷಾವರ್ತಿಮಠ ಹಾಗೂ ರಾಜಣ್ಣ ಬೈಲಪ್ಪನವರ ಅವರಿಗೆ ಗೌರವ ಗುರುರಕ್ಷೆ ಹಾಗೂ ಸೇವಾರ್ಥಿಗಳಾದ ಸಿದ್ಧಲಿಂಗಯ್ಯ ಪಂಚ್ಯಯ ಹಿರೇಮಠ ಅವರನ್ನು ಗುರುಸಿದ್ದ ಸ್ವಾಮೀಜಿ ಗೌರವಿಸಿದರು. ನಗರಾಭಿವೃದ್ಧಿಯ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ತಾಲೂಕ ಪಂಚಾಯತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರ, ಶಂಕರ, ಶಂಬಣ್ಣ, ನಾಗರಾಜ ಹಲವರು ಸೇರಿದಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಜುಳಾ ಕೊಪ್ಪದ ಜನಪದ ಕಲಾತಂಡದಿಂದ ಸಂಗೀತ ಹಾಗೂ ನೃತ್ಯ ಗಮನ ಸೆಳೆದವು. ಶಿಕ್ಷಕ ನಿಂಗರಾಜ ಮಾಗೋಡು ಸ್ವಾಗತಿಸಿದರು. ಶಿಕ್ಷಕ ಮಾಲತೇಶ ಬೆಳವಗಿ ನಿರೂಪಿಸಿದರು. ಶಿಕ್ಷಕ ಎಸ್‌ಎಂ ಮಾಡ್ಲೂರ ವಂದಿಸಿದರು.