ರಾಣಿಬೆನ್ನೂರು ನಗರದ ಶ್ರೀ ಗುರು ಕೊಟ್ಟೂರೇಶ್ವರ ಮಠದಲ್ಲಿ ಬುಧವಾರ ಗುರು ಪೂರ್ಣಿಮೋತ್ಸವ, ಸನ್ಮಾನಿತರಿಗೆ ಗೌರವಾರ್ಪಣೆ, ಶ್ರೀಗಳ ತುಲಾಭಾರ, ರಕ್ತದಾನ ಶಿಬಿರ ಹಾಗೂ ಧರ್ಮಸಭೆ ನಡೆಯಿತು.

ರಾಣಿಬೆನ್ನೂರು: ಹೆತ್ತ ತಂದೆ-ತಾಯಿ ಹಾಗೂ ದಾರಿ ತೋರುವ ಗುರುಗಳೇ ನಿಜವಾದ ಹಾಗೂ ತ್ರಿಮೂರ್ತಿ ದೈವಿ ಸ್ವರೂಪಿ ಜೀವನದ ಆದರ್ಶ ಗುರುಗಳಾಗಿದ್ದಾರೆ ಎಂದು ಭದ್ರಾವತಿಯ ಅರಕೆರೆ ಸಿದ್ದಲಿಂಗ ಶಿವಯೋಗಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ನಗರದ ಶ್ರೀ ಗುರು ಕೊಟ್ಟೂರೇಶ್ವರ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಗುರು ಪೂರ್ಣಿಮೋತ್ಸವ, ಸನ್ಮಾನಿತರಿಗೆ ಗೌರವಾರ್ಪಣೆ, ಶ್ರೀಗಳ ತುಲಾಭಾರ, ರಕ್ತದಾನ ಶಿಬಿರ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಬಾಳಿ ಬದುಕಲು ಮಾತಾ, ಪಿತೃ, ಆಚಾರ್ಯರ ಕೊಡುಗೆ ಅಪಾರ ಮತ್ತು ಅನನ್ಯವಾಗಿದೆ. ಅವರೇ ಜೀವನದ ಆಧಾರಸ್ತಂಭಗಳಾಗಿದ್ದು, ಅವರಿಲ್ಲದೆ ಜೀವನವೇ ಇಲ್ಲ. ಅವರ ಆಶೀರ್ವಾದವೇ ಬದುಕಿನ ಜೀವನ ಪಾವನವಾಗಲು ಸಹಕಾರಿಯಾಗುತ್ತದೆ. ಮನೆಯಲ್ಲಿ ತಾಯಿ, ತಂದೆ, ಅಜ್ಜ-ಅಜ್ಜಿಯರು, ಬಂಧು ಬಳಗದವರು ಸ್ನೇಹಿತರು, ದಿನಾಲೂ ನಾವು ನೋಡುವ ಮಾತಾಡಿಸುವ ಜನರನ್ನೂ, ಸಮಾಜದಲ್ಲಿ ಎತ್ತರದಲ್ಲಿರುವ ಗಣ್ಯ ವ್ಯಕ್ತಿಗಳು, ಮಹನೀಯರನ್ನೂ ಸಹ ಗುರುಗಳಾಗಿ ಭಾವಿಸಿದರೆ, ಮನುಷ್ಯ ಬಹಳ ಎತ್ತರಕ್ಕೆ ಏರಬಹುದು. ಬ್ರಹ್ಮನು ಮನುಷ್ಯನ ಆಯಸ್ಸು, ಕರ್ಮ, ವಿದ್ಯೆ, ಸಂಪತ್ತು, ನಿಧನ ಸೇರಿ ಐದಕ್ಷರದ ಹಣೆಬರಹವನ್ನು ಬರೆದಿರುತ್ತಾನೆ ಎಂಬುದು ಪ್ರತೀತಿ. ಒಮ್ಮೆ ಬರೆದ ಹಣೆಬರಹವನ್ನು ಬದಲಾಯಿಸಲು ಸಾಧ್ಯವಿಲ್ಲವೆಂಬುದು ಅಷ್ಟೇ ಆಳವಾದ ನಂಬಿಕೆಯೂ ಇದೆ. ಆದರೆ ಆ ಹಣೆಬರಹವನ್ನು ಬದಲಾಯಿಸುವ ಶಕ್ತಿ ಮತ್ತು ಪವಾಡವು ಗುರು ಯೋಗಿಗೆ ಮಾತ್ರವಿದೆ ಎಂದರು.

ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಬಹುತೇಕರ ಭಕ್ತರ ಭಕ್ತಿಯು ಢಂಬಾಚಾರವಾಗಿದೆ. ಹಾಲು, ತುಪ್ಪ, ಮೊಸರು, ಬೆಣ್ಣೆಯ ಅಭಿಷೇಕದಿಂದ ಮನುಜನ ಕಷ್ಟಗಳು, ನೋವುಗಳು ನಿವಾರಣೆಯಾಗುವುದಿಲ್ಲ. ಆತ್ಮವಿಶ್ವಾಸ, ಅವಿರತ ಶ್ರಮದ ಭಕ್ತಿ ಅವರಲ್ಲಿರಬೇಕು ಎಂದರು.

ಉದ್ಯಮಿ ವೀರೇಶ ಬ್ಯಾಹಟ್ಟಿ, ಚಿತ್ರದುರ್ಗದ ಜಿಲ್ಲಾ ಬಿಸಿಎಂ ಅಧಿಕಾರಿ ಪುಷ್ಪಲತಾ ಭಾವಿಮಠ, ವಿಜಯನಗರ ಜಿಪಂ ಮಾಜಿ ಸದಸ್ಯ ಕೆ.ಎಂ. ಶಶಿಧರ, ಖ್ಯಾತ ವೈದ್ಯ ಡಾ. ರಾಜೇಶ್ ಭದ್ರಶೆಟ್ಟಿ ಅವರನ್ನು ಗೌರವಿಸಲಾಯಿತು.

ಸರೋಜಾ ಅಜ್ಜೋಡಿಮಠ, ಗಿರೀಶ ಮಾಗನೂರ, ಅರವಿಂದ ಅಜ್ಜೋಡಿಮಠ, ಪರಮೇಶ ಯಡಿಯಾಪುರ, ಸತೀಶ ಅಜ್ಜೋಡಿಮಠ, ಪ್ರಭು ಹಂಸಸಾಗರ, ವಿಶ್ವನಾಥ ಕೋಡದ, ಮಹೇಶ ಶೆಟ್ಟರ, ಬಸವರಾಜ ಹುಚ್ಚಗೊಂಡರ, ಬಿದ್ದಾಡೆಪ್ಪ ಚಕ್ರಸಾಲಿ, ಮಹೇಶ ಶಿವಮೊಗ್ಗಿ, ಗಣೇಶ, ಜಗದೀಶ ಕಳ್ಯಾಳ, ಶಾಂತಯ್ಯ ಶಾಸ್ತ್ರೀಗಳು, ಚನ್ನಯ್ಯ, ಶೀವು, ಹಾಲಸ್ವಾಮಿ ಶಾಸ್ತ್ರಿಗಳು ಮತ್ತಿತರರಿದ್ದರು.

ಇದಕ್ಕೂ ಪೂರ್ವದಲ್ಲಿ ದೊಡ್ಡಪೇಟೆಯ ಬಸವೇಶ್ವರ ದೇವಸ್ಥಾನ ಬಳಿಯಿಂದ ಅರಕೆರೆ ಶಿವಲಿಂಗ ಮಹಾಸ್ವಾಮಿಗಳ ಮೆರವಣಿಗೆಯ ಮಹೋತ್ಸವ ಮಹಿಳೆಯರ ಕುಂಭದ ಮೆರವಣಿಗೆಯೊಂದಿಗೆ ಹೊರಟು ಶ್ರೀಮಠಕ್ಕೆ ಬಂದು ತಲುಪಿತು. ಆನಂತರ ಶ್ರೀಗಳ ಬೆಲ್ಲದ ತುಲಾಭಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಕಾರ್ಯಕ್ರಮದ ನಿಮಿತ್ತ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 20ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು.