ಸಾರಾಂಶ
ಧಾರವಾಡ: ಬ್ರಿಟಿಷರು ಭಾರತದಲ್ಲಿ ಬಂದು ಆಳ್ವಿಕೆ ಮಾಡುತಿದ್ದ ಸಂದರ್ಭದಲ್ಲಿ ಆಂಗ್ಲರು ದಾಳಿ ಮಾಡುವಾಗ ಬಂಜಾರ ಸಮುದಾಯದವರು ಪ್ರಾಣಲೆಕ್ಕಿಸದೆ ಚಳವಳಿ ಪ್ರಾರಂಭಿಸಿ, ಬ್ರಿಟಿಷರನ್ನು ದೇಶದಿಂದ ಓಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವಾತಂತ್ರ್ಯ ಚಳವಳಿಗೆ ಬಂಜಾರ ಸಮುದಾಯದ ಕೊಡುಗೆ ವಿಶೇಷ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿಯ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ ಜಯಂತಿಯಲ್ಲಿ ಸಂತ ಶ್ರೀಸೇವಾಲಾಲ ಭಾವಚಿತ್ರಕ್ಕೆ ಫುಷ್ಪ ನಮನ ಸಲ್ಲಿಸಿದ ಅವರು, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅನೇಕ ರಾಜ್ಯ ಮನೆತನಗಳ ಸಮುದಾಯಗಳ ಕೊಡುಗೆ ಇದೆ. ಆದರೆ ಈ ಸಂದರ್ಭದಲ್ಲಿ ಬುಡಕಟ್ಟು ಜನಾಂಗವಾಗಿದ್ದ ಲಂಬಾಣಿ ಸಮುದಾಯ ತನ್ನದೇ ಆದ ರೀತಿಯಲ್ಲಿ ಪ್ರತಿಭಟಿಸಿ, ಆಂಗ್ಲರನ್ನು ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಇಂದು ಬಂಜಾರ ಸಮುದಾಯದ ಅನೇಕರು ಉನ್ನತ್ತ ಶಿಕ್ಷಣದೊಂದಿಗೆ ಉತ್ತಮವಾದ ಹುದ್ದೆ ಹೊಂದಿದ್ದಾರೆ. ಇಂದು ಬಂಜಾರ ಸಮುದಾಯ ರಾಷ್ಟ್ರದ ಪ್ರಗತಿಯಲ್ಲಿ ತನ್ನದೆ ಆದ ಕೊಡುಗೆ ನೀಡುತ್ತಿದೆ ಎಂದು ಸಚಿವರು ತಿಳಿಸಿದರು.ಜಿಲ್ಲೆಯಲ್ಲಿ ಬಂಜಾರ ಸಮುದಾಯದ ಪ್ರಗತಿಗಾಗಿ ಅನೇಕ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನೀಡಿದೆ. ಸಂಸದರ ನಿಧಿಯಲ್ಲಿ ಅನೇಕ ಕಾಮಗಾರಿಗಳನ್ನು ಸಮುದಾಯ ವಾಸಿಸುವ ಪ್ರದೇಶದಲ್ಲಿ ಕೈಗೊಳ್ಳಲಾಗಿದ ಎಂದು ಕೇಂದ್ರ ಸಚಿವರು ತಿಳಿಸಿದರು.
ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಡಿ.ಬಿ. ನಾಯಕ ಮಾತನಾಡಿ, ಭಾರತದಲ್ಲಿ ಸುಮಾರು 747 ಬುಡಕಟ್ಟು ಸಮುದಾಯಗಳಿವೆ. ಅದೇ ರೀತಿಯಾಗಿ ಕರ್ನಾಟಕದಲ್ಲಿ 56 ಬುಡಕಟ್ಟು ಸಮುದಾಯಗಳಲ್ಲಿ ಬಂಜಾರ ಸಮುದಾಯಗಳಿದ್ದು, ತಮ್ಮದೇ ಆದ ಆಚಾರ, ವಿಚಾರ, ವೇಷ ಭೂಷಣ ಪದ್ಧತಿಗಳ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ.ಸಂತ ಸೇವಾಲಾಲ ಅವರು ಪ್ರಾಣಿ ಹಿಂಸೆ, ಮದ್ಯಪಾನ ಮಾಡಬಾರದು ಎಂದು ಸಮಾಜಕ್ಕೆ ಕರೆ ನೀಡಿದ್ದಾರೆ. ಸಮಾಜದ ಕುರಿತು ಅಪಾರವಾದ ಚಿಂತನೆ, ಬೋಧನೆ ನಡೆಸುವ ಮೂಲಕ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದರು.ನವನಗರದ ಸೇವಾಲಾಲ ಬಂಜಾರ ಗುರುಪೀಠದ ಮನ್ನಿರಂಜನ ತಿಪ್ಪೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಮುಖಂಡರಾದ ಹಾವೇರಿಯ ಗುತ್ತಲ ದುರ್ಗಾದೇವಿ ಪೀಠದ ನಾಗರಾಜ ಮಹಾರಾಜರು, ಕೃಷ್ಣರಾಜ ಚವ್ಹಾಣ, ಡಾ. ಹರಿಲಾಲ ಪವಾರ, ನಾಗರಾಜ ನಾಯಕ, ಈರೇಶ್ ಅಂಚಟಗೇರಿ, ಜಯಲಕ್ಷ್ಮಿ ದೊಡ್ಡಮನಿ ಮತ್ತು ಸಮಾಜದ ಹಿರಿಯರು ಇದ್ದರು. ರವಿ ಕುಲಕರ್ಣಿ ಸ್ವಾಗತಿಸಿದರು.